ಕುಂದಾಪುರ : ಮಂಗನ ಕಾಯಿಲೆ ಆತಂಕ, ಒಂದೇ ವಾರದಲ್ಲಿ 5 ಮಂಗಗಳ ಸಾವು

kundapura Kyasanur Forest Disease – KFD : ಕುಂದಾಪುರ : ಮಲೆನಾಡಿನ ಜಿಲ್ಲೆಗಳಲ್ಲಿ ಜನರ ಆತಂಕಕ್ಕೆ ಕಾರಣವಾಗಿದ್ದ ಮಂಗನ ಕಾಯಿಲೆ ಪ್ರಕರಣದ ಭೀತಿ ಇದೀಗ ಉಡುಪಿ ಜಿಲ್ಲೆಯ ಜನರನ್ನೂ ಕಾಡುತ್ತಿದೆ. ಕುಂದಾಪುರ ತಾಲೂಕಿನ ಹೊಸಂಗಡಿ ಭಾಗದಲ್ಲಿ ಮಂಗಗಳ ಮೃತ ದೇಹ ಪತ್ತೆಯಾಗಿದ್ದು, ಒಂದೇ ವಾರದಲ್ಲಿ ಮಂಗಳ ಸಾವಿನ ಪ್ರಕರಣ 5ಕ್ಕೆ ಏರಿಕೆ ಆಗಿದೆ. ಮಂಗಗಳ ಸ್ಯಾಂಪಲ್‌ ಕಲೆ ಹಾಕಿರುವ ಆರೋಗ್ಯ ಹಾಗೂ ಅರಣ್ಯ ಇಲಾಖೆ ಜನರಿಗೆ ಮಾಹಿತಿ ನೀಡದೇ ಇರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಕರ್ನಾಟಕ ರಾಜ್ಯದಲ್ಲೀಗ ಮತ್ತೊಮ್ಮೆ ಮಂಗನ ಕಾಯಿಲೆ ಸದ್ದು ಮಾಡುತ್ತಿದೆ, ಮಲೆನಾಡು ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ ಈ ಕಾಯಿಲೆ ನೆರೆ ಜಿಲ್ಲೆ ಉಡುಪಿಯಲ್ಲೂ ಭೀತಿ ಹುಟ್ಟಿಸಿದೆ. ಮುಖ್ಯವಾಗಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇತ್ತೀಚೆಗೆ ಮಂಗಗಲು ಸಾವನ್ನಪ್ಪಿರುವ ಪ್ರಕರಣಗಳು ಸಹಜವಾಗಿಯೇ ಈ ಭಾಗದ ಜನರಲ್ಲಿ ಆತಂಕವನ್ನು ಹೆಚ್ಚುವಂತೆ ಮಾಡಿದೆ.

ಕಳೆದ ದಿನಗಳ ಅಂತರದಲ್ಲಿ ಜಿಲ್ಲೆಯ ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಾರೂರು ನಲ್ಲಿ ಐದು ಕೋತಿಗಳು ಸಾವನ್ನಪ್ಪಿದೆ. ಐದರಲ್ಲಿ ನಾಲ್ಕು ಮಂಗಗಳು ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಒಂದು ಮಂಗದ ಶವ ಪರೀಕ್ಷೆ ನಡೆಸಿ ಸ್ಯಾಂಪಲ್‌ ಸಂಗ್ರಹಿಸಿ ಪರಿಶೀಲನೆ ಕಳುಹಿಸುವ ಕೆಲಸವನ್ನು ಜಿಲ್ಲಾ ಆರೋಗ್ಯ ಇಲಾಖೆ ನಡೆಸಿದೆ. ಸದ್ಯ ಕಳೆದ ವರ್ಷದಂತೆ ಇದೇ ಪ್ರದೇಶದಲ್ಲಿ ಐದು ಮಂಗಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.

ಸದ್ಯ ಹೊಸಂಗಡಿ ಭಾಗದಲ್ಲಿ ಮಂಗಗಳ ಸಾವಿನ ಬಳಿಕ ಮತ್ತೆ ಆತಂಕ ಮನೆ ಮಾಡಿದೆ. 2009 ರಲ್ಲಿ ಉಡುಪಿ ಜಿಲ್ಲೆಗೆ ಸುಮಾರು 30 ವರ್ಷಗಳ ಬಳಿಕ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಮಂಗನ ಕಾಯಿಲೆಯ ಅಬ್ಬರಕ್ಕೆ ಕರಾವಳಿ ಮತ್ತು ಮಲೆನಾಡಿನ ಜನ ತತ್ತರಿಸಿ ಹೋಗಿದ್ದರು.

ಇದನ್ನೂ ಓದಿ : ಶೆಟ್ರಕಟ್ಟೆ ಅಪಘಾತ ಪ್ರಕರಣ: ಪೊಲೀಸ್ ಸಿಬ್ಬಂದಿ ತಲೆದಂಡ…

ಮಣಿಪಾಲದ ಕೆಎಂಸಿ ಆಸ್ಪತ್ರೆಯೊಂದರಲ್ಲೇ 73 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿತ್ತು. 2019ರಲ್ಲಿ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 12 ಮಂದಿ ಕೆಎಫ್‌ಡಿ ಸೋಂಕಿಗೆ ಬಲಿಯಾಗಿದ್ದು 344 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಉತ್ತರ ಕನ್ನಡ ಜಿಲ್ಲೆಯ 85 ಮಂದಿಗೆ ಸೋಂಕು ದೃಢಪಟ್ಟು ಮೂವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.

ಉಡುಪಿಯಲ್ಲಿ ಇಬ್ಬರು, ಮೈಸೂರು, ಬೆಳಗಾವಿ, ಚಿಕ್ಕಮಗಳೂರು ಹಾಗೂ ಹಾವೇರಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿತ್ತು. ಕಳೆದ ವರ್ಷವು ಕೂಡ ಓರ್ವ ಮಹಿಳೆ ಮಂಗನ ಕಾಯಿಲೆಯಿಂದ ಮೃತಪಟ್ಟಿರುವ ವಿಚಾರ ಮರೆಯುವ ಮೊದಲೆ ಮತ್ತೆ ಜಿಲ್ಲೆಯಲ್ಲಿ ಮಂಗಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.

ಇನ್ನು ಆರೋಗ್ಯ ಇಲಾಖೆ ಸತ್ತ ಮಂಗನ ದೇಹದ ಸ್ಯಾಂಪಲ್‌ ಪಡೆದು ತೆರಳಿದ ಬಳಿಕ ಇದುವರೆಗೂ ಸಾವಿಗೆ ಕಾರಣ ತಿಳಿಸದೆ ಇರುವುದು ಹೊಸಂಗಡಿ ಬಾಗದಲ್ಲಿ ಸ್ಥಳೀಯರ ಆತಂಕ ಹೆಚ್ಚುವಂತೆ ಮಾಡಿದೆ. ಇನ್ನು ಕಾರೂರುನಲ್ಲಿರುವ ನೀರಿನ ಮೂಲದ ಬಳಿಯೇ ಐದು ಮಂಗಳ ಶವ ಪತ್ತೆಯಾಗಿರುವುದು ಮತ್ತು ಪ್ರತಿ ವರ್ಷವು ಕೂಡ ಇದೇ ಪರಿಸರದಲ್ಲಿ ಮಂಗಗಳು ಸಾಯುತ್ತಿರುವುದು ಸ್ಥಳೀಯರಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟು ಹಾಕಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಆನಂದ ಕಾರೂರು.

ಇದನ್ನೂ ಓದಿ : ಸಾಸ್ತಾನ – ಪಾಂಡೇಶ್ವರದಲ್ಲಿ ಸು ಫ್ರಂ ಸೋ ಮಾದರಿಯ ಕೃತ್ಯ: ಸ್ನಾನಗೃಹ ಇಣುಕಿ ಪರಾರಿ, ಗ್ರಾಮಸ್ಥರಲ್ಲಿ ಆತಂಕ

ಒಟ್ಟಿನಲ್ಲಿ ಮಾರಣಾಂತಿಕ ಮಂಗನ ಕಾಯಿಲೇ ಮಲೆನಾಡಿನಲ್ಲಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪಶ್ಚಿಮ ಘಟ್ಟದ ಗಡಿ ಭಾಗದ ಜನರಿಗೆ ಆತಂಕ ಹೆಚ್ಚಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಶೀಘ್ರದಲ್ಲಿ ಮಂಗಗಳ ಸಾವಿಗೆ ನಿಖರ ಕಾರಣದ ಜೊತೆಗೆ ಹೊಸಂಗಡಿ ಸಿದ್ಧಾಪುರ ಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯತೆ ಇದೆ.

kundapura Kyasanur Forest Disease -KFD 5 monkeys die in a single week Udupi News

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories