ಹುಬ್ಬಳ್ಳಿಯಲ್ಲಿ ಮಹಿಳೆ ಮೇಲೆ ಗ್ಯಾಂ*ಗ್ ರೇ*ಪ್: ಅಶ್ಲೀಲ ವಿಡಿಯೋ ಹರಿಬಿಟ್ಟವರು ಸೇರಿ ಮೂವರ ಬಂಧನ
Hubballi Gang Rape Case: ಹುಬ್ಬಳ್ಳಿ: ನಗರದಲ್ಲಿ 35 ವರ್ಷದ ಮಹಿಳೆಯೊಬ್ಬರನ್ನು ಆಟೋರಿಕ್ಷಾದಲ್ಲಿ ಅಪಹರಿಸಿ, ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದಾರುಣ ಘಟನೆ ಬೆಳಕಿಗೆ ಬಂದಿದೆ. ಈ ಅಮಾನವೀಯ ಕೃತ್ಯದ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಆರೋಪಿಗಳು ಸೇರಿದಂತೆ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಈ ಘಟನೆಯು ಜನವರಿ 9ರ ರಾತ್ರಿ 11:30 ರಿಂದ ಮಧ್ಯರಾತ್ರಿಯ ನಡುವೆ ಸಂಭವಿಸಿದೆ. ನಗರದ ಅಂಬೇಡ್ಕರ್ ಮೈದಾನದ ಬಳಿ ಇದ್ದ ಮಹಿಳೆಯನ್ನು ಆಟೋರಿಕ್ಷಾದಲ್ಲಿ ಹತ್ತಿಸಿಕೊಂಡಿದ್ದ ಇಬ್ಬರು ಆರೋಪಿಗಳು, ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಕಾಮುಕರು ಈ ಹೇಯ ಕೃತ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಬಳಿಕ ಮಹಿಳೆಯನ್ನು ಅದೇ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದರು.
ಪರಶುರಾಮ ಥೀಂ ಪಾರ್ಕ್ ಮೇಲ್ಚಾವಣಿ ಕದ್ದವರು ಕಾಂಗ್ರೆಸ್ನ ‘ಬ್ರದರ್ಸ್’: ಶಾಸಕ ಸುನಿಲ್ ಕುಮಾರ್ ತೀವ್ರ ವಾಗ್ದಾಳಿ
ಬಹಿರಂಗವಾದ ವಿಡಿಯೋ:
ಘಟನೆ ನಡೆದ ಬಳಿಕ ಆರೋಪಿಗಳು ಅತ್ಯಾಚಾರದ ವಿಡಿಯೋಗಳನ್ನು ಮೆಸೇಜಿಂಗ್ ಆ್ಯಪ್ಗಳ ಮೂಲಕ ಹರಿಬಿಟ್ಟಿದ್ದರು. ಈ ವಿಡಿಯೋಗಳು ಸಾರ್ವಜನಿಕವಾಗಿ ಹರಿದಾಡಲು ಶುರುವಾದಾಗ ಪೊಲೀಸರ ಗಮನಕ್ಕೆ ಬಂದಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಹುಬ್ಬಳ್ಳಿ ನಗರದಲ್ಲಿ ಸಂತ್ರಸ್ತೆಯನ್ನು ಪತ್ತೆಹಚ್ಚಿದ್ದಾರೆ. ಸಂತ್ರಸ್ತ ಮಹಿಳೆ ಕಳೆದ ಒಂದೂವರೆ ತಿಂಗಳಿನಿಂದ ನಗರದ ವಿವಿಧ ದೇವಸ್ಥಾನಗಳ ಬಳಿ ನೆಲೆಸಿದ್ದು, ಸಿದ್ದಾರೂಢ ಮಠದಲ್ಲಿ ಊಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮೂವರು ಆರೋಪಿಗಳ ಬಂಧನ:
ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳನ್ನು ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಮೂರನೇ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ. ಸದ್ಯ ಸಂತ್ರಸ್ತ ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.
ಈ ಘಟನೆಯು ಹುಬ್ಬಳ್ಳಿ ನಗರದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಆತಂಕ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



