ಮಾಜಿ ಶಾಸಕ ವಿಎಸ್ ಪಾಟೀಲ್ ಮನೆಯಲ್ಲಿ ಕಳ್ಳತನ: ಸ್ವಯಂ ರಕ್ಷಣೆಯ ಬಂದೂಕೇ ನಾಪತ್ತೆ!

VS Patil Gun Theft: ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮತ್ತು ಹಿರಿಯ ಕಾಂಗ್ರೆಸ್ ನಾಯಕ ವಿ.ಎಸ್. ಪಾಟೀಲ್ ಅವರ ಸ್ವಯಂ ರಕ್ಷಣೆಗಾಗಿ ಇರಿಸಲಾಗಿದ್ದ ಡಬಲ್ ಬ್ಯಾರಲ್ ಬಂದೂಕು ಕಳ್ಳತನವಾಗಿದ್ದು, ಸಂಚಲನ ಮೂಡಿಸಿದೆ.

ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ಮೊದಲ ಶಾಸಕರಾಗಿ ಆಯ್ಕೆಯಾಗಿದ್ದ ವಿ.ಎಸ್. ಪಾಟೀಲ್ ಅವರು ಮುಂಡಗೋಡಿನ ಅಂದಲಗಿ ಗ್ರಾಮದಲ್ಲಿರುವ ತಮ್ಮ ಒಂಬತ್ತು ಎಕರೆ ಕೃಷಿ ಜಮೀನಿನಲ್ಲಿ ವಾಸವಾಗಿದ್ದಾರೆ. ರಾಜಕಾರಣದ ಜೊತೆಗೆ ಕೃಷಿಯಲ್ಲೂ ತೊಡಗಿಸಿಕೊಂಡಿರುವ ಅವರು, ಭದ್ರತೆಯ ದೃಷ್ಟಿಯಿಂದ ಪರವಾನಗಿ ಪಡೆದ ಡಬಲ್ ಬ್ಯಾರಲ್ ಬಂದೂಕನ್ನು ಹೊಂದಿದ್ದರು. ಈ ಬಂದೂಕನ್ನು ಅವರು ತಮ್ಮ ತೋಟದ ಮನೆಯಲ್ಲಿದ್ದ ಬೋಲ್ಟ್ (ಬೋರು) ಅಳವಡಿಸಿದ್ದ ಕೋಣೆಯಲ್ಲಿ ಇರಿಸುತ್ತಿದ್ದರು.

ಕಳ್ಳತನ ಪತ್ತೆಯಾಗಿದ್ದು ಹೇಗೆ?

ಪಾಟೀಲ್ ಅವರು ಕೊನೆಯದಾಗಿ 2025ರ ಡಿಸೆಂಬರ್ 31ರ ಸಂಜೆ ತಮ್ಮ ಬಂದೂಕನ್ನು ಬಳಸಿದ್ದರು. ಜನವರಿ 1ರ ಹೊಸ ವರ್ಷದ ದಿನ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಜಮೀನಿನ ಕಡೆ ಹೋದಾಗ, ಇರಿಸಿದ್ದ ಜಾಗದಲ್ಲಿ ಬಂದೂಕು ಕಾಣಿಸಲಿಲ್ಲ. ಸುಮಾರು 40 ಸಾವಿರ ರೂಪಾಯಿ ಬೆಲೆಬಾಳುವ ಈ ಶಸ್ತ್ರಾಸ್ತ್ರ ನಾಪತ್ತೆಯಾಗಿರುವುದು ಅವರ ಆತಂಕಕ್ಕೆ ಕಾರಣವಾಯಿತು.

ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ: ಕ್ಯೂಆರ್ ಕೋಡ್ ಮೂಲಕ ಅನಿಯಮಿತ ಪ್ರಯಾಣ ಪಾಸ್ ಲಭ್ಯ!

ಪೊಲೀಸ್ ದೂರು ದಾಖಲು:

ಆರಂಭದಲ್ಲಿ ಮನೆಯವರು ಮತ್ತು ಪರಿಚಿತರ ಬಳಿ ವಿಚಾರಿಸಿದರೂ ಯಾವುದೇ ಸುಳಿವು ಸಿಗದ ಕಾರಣ, ವಿ.ಎಸ್. ಪಾಟೀಲ್ ಅವರು ಮುಂಡಗೋಡು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಮಾಜಿ ಶಾಸಕರ ಮನೆಯಲ್ಲೇ ಶಸ್ತ್ರಾಸ್ತ್ರ ಕಳ್ಳತನವಾಗಿರುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದ್ದು, ಕಳ್ಳರ ಪತ್ತೆಗಾಗಿ ತನಿಖೆ ತೀವ್ರಗೊಳಿಸಿದ್ದಾರೆ. ಜನಪ್ರತಿನಿಧಿಯೊಬ್ಬರ ಸುರಕ್ಷತೆಗೆ ಇರಿಸಲಾಗಿದ್ದ ಬಂದೂಕೇ ಕಳವಾಗಿರುವುದು ಸ್ಥಳೀಯವಾಗಿ ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories