ಈ ಕೋಟ್ಯಧಿಪತಿ ಭಿಕ್ಷುಕ: 3 ಮನೆ, 3 ಆಟೋ ಮತ್ತು ಡಿಝೈರ್ ಕಾರಿನ ಒಡೆಯ!

Crorepati Beggar: ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರವನ್ನು ‘ಭಿಕ್ಷುಕ ಮುಕ್ತ’ ಮಾಡುವ ಕಾರ್ಯಾಚರಣೆಯ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ನಂಬಲಸಾಧ್ಯವಾದ ಪ್ರಕರಣವೊಂದು ಎದುರಾಗಿದೆ. ಅಂಗವಿಕಲನಂತೆ ನಟಿಸಿ ಭಿಕ್ಷೆ ಬೇಡುತ್ತಿದ್ದ ಮಂಗಿಲಾಲ್ ಎಂಬ ವ್ಯಕ್ತಿ ವಾಸ್ತವದಲ್ಲಿ ಲಕ್ಷಾಂತರ ರೂಪಾಯಿ ಸಾಲ ನೀಡುವ ದೊಡ್ಡ ಲೇವಾದೇವಿದಾರ ಮತ್ತು ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯ ಎಂಬುದು ಪತ್ತೆಯಾಗಿದೆ.

ಆಸ್ತಿ ವಿವರ:
ತನಿಖೆಯ ವೇಳೆ ಮಂಗಿಲಾಲ್ ಹೆಸರಿನಲ್ಲಿ ಮೂರು ಮನೆಗಳಿವೆ (ಒಂದು ಮೂರು ಅಂತಸ್ತಿನ ಕಟ್ಟಡ ಸೇರಿ). ಇಷ್ಟೇ ಅಲ್ಲದೆ, ಈತನ ಬಳಿ ಮೂರು ಆಟೋ ರಿಕ್ಷಾಗಳು ಮತ್ತು ಒಂದು ಮಾರುತಿ ಸುಜುಕಿ ಡೈರ್ (Dzire) ಕಾರು ಇದೆ. ಇವೆಲ್ಲವನ್ನೂ ಆತ ಬಾಡಿಗೆಗೆ ನೀಡಿದ್ದನು. ಅಚ್ಚರಿಯೆಂದರೆ, ಇಷ್ಟು ಆಸ್ತಿ ಇದ್ದರೂ ಅಂಗವೈಕಲ್ಯದ ಕೋಟಾದಡಿ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ ಅಡಿಯಲ್ಲಿ ಒಂದು ಮನೆಯನ್ನು ಪಡೆದುಕೊಂಡಿದ್ದನು. ಮಂಗಿಲಾಲ್ ಸರಫಾ ಬಜಾರ್‌ನಲ್ಲಿ ಕಬ್ಬಿಣದ ಗಾಡಿಯ ಮೇಲೆ ಕುಳಿತು ಮೌನವಾಗಿ ಭಿಕ್ಷೆ ಬೇಡುತ್ತಿದ್ದನು. ಯಾರಿಗೂ ಕೈಚಾಚದಿದ್ದರೂ, ಅವನ ಸ್ಥಿತಿ ನೋಡಿ ಜನರು ದಿನಕ್ಕೆ 400 ರಿಂದ 500 ರೂಪಾಯಿ ನೀಡುತ್ತಿದ್ದರು.

ಲೇವಾದೇವಿ ವ್ಯವಹಾರ:
ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಆತ ತನ್ನ ಜೀವನೋಪಾಯಕ್ಕೆ ಬಳಸುತ್ತಿರಲಿಲ್ಲ. ಬದಲಾಗಿ, ಅದೇ ಹಣವನ್ನು ಸರಫಾ ಬಜಾರ್‌ನ ಸಣ್ಣ ವ್ಯಾಪಾರಿಗಳಿಗೆ ದಿನದ ಅಥವಾ ವಾರದ ಬಡ್ಡಿಗೆ ನೀಡುತ್ತಿದ್ದನು. ಸುಮಾರು 4-5 ಲಕ್ಷ ರೂಪಾಯಿಗಳನ್ನು ಮಾರುಕಟ್ಟೆಯಲ್ಲಿ ಸಾಲವಾಗಿ ನೀಡಿದ್ದು, ಪ್ರತಿದಿನ ಬಡ್ಡಿಯ ರೂಪದಲ್ಲೇ 1,000 ರಿಂದ 2,000 ರೂಪಾಯಿ ಗಳಿಸುತ್ತಿದ್ದನು. ಕಳೆದ ಶನಿವಾರ ರಾತ್ರಿ ಅಧಿಕಾರಿಗಳ ತಂಡ ಈತನನ್ನು ವಶಕ್ಕೆ ಪಡೆದಾಗ ಆತ ಕುಷ್ಠರೋಗಿ ಎಂದು ಭಾವಿಸಲಾಗಿತ್ತು. ಆದರೆ ವಿಚಾರಣೆ ನಡೆಸಿದಾಗ ಅವನ ಆರ್ಥಿಕ ಸಾಮ್ರಾಜ್ಯದ ಬಗ್ಗೆ ಮಾಹಿತಿ ಸಿಕ್ಕಿತು.‌

ಕಿಡಿಗೇಡಿಗಳ ಕೃತ್ಯಕ್ಕೆ ಚಾರ್ಮಾಡಿ ಘಾಟಿನಲ್ಲಿ ಕಾಡ್ಗಿಚ್ಚು : ಅಪಾಯದಲ್ಲಿ ಅರಣ್ಯ ಸಂಪತ್ತು

ಮಂಗಿಲಾಲ್‌ನನ್ನು ಸದ್ಯ ಉಜ್ಜಯಿನಿಯ ‘ಸೇವಾಧಾಮ್ ಆಶ್ರಮ’ಕ್ಕೆ ಕಳುಹಿಸಲಾಗಿದೆ. ಆತನ ಬ್ಯಾಂಕ್ ಖಾತೆಗಳು ಮತ್ತು ಆಸ್ತಿಗಳ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಈತನಿಂದ ಸಾಲ ಪಡೆದ ವ್ಯಾಪಾರಿಗಳನ್ನೂ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿ ದಿನೇಶ್ ಮಿಶ್ರಾ ತಿಳಿಸಿದ್ದಾರೆ.

ಇಂದೋರ್ ನಗರದಲ್ಲಿ ಫೆಬ್ರವರಿ 2024 ರಿಂದ ಆರಂಭವಾದ ಈ ಅಭಿಯಾನದಲ್ಲಿ ಇದುವರೆಗೆ 6,500 ಭಿಕ್ಷುಕರನ್ನು ಗುರುತಿಸಲಾಗಿದೆ. ಅದರಲ್ಲಿ 4,500 ಜನರು ಭಿಕ್ಷೆ ಬಿಟ್ಟಿದ್ದಾರೆ, 1,600 ಜನರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಮತ್ತು 172 ಮಕ್ಕಳನ್ನು ಶಾಲೆಗೆ ಸೇರಿಸಲಾಗಿದೆ. ಮರುಕ ಮತ್ತು ಅನುಕಂಪವನ್ನೇ ಬಂಡವಾಳವಾಗಿಸಿಕೊಂಡು ಮಂಗಿಲಾಲ್ ಬೆಳೆಸಿದ ಈ ‘ಬ್ಯುಸಿನೆಸ್’ ಮಾದರಿಯು ಈಗ ಇಡೀ ನಗರದಲ್ಲಿ ಚರ್ಚೆಯ ವಿಷಯವಾಗಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories