‘ಜಿಲ್ಲಾಧಿಕಾರಿಯ ಧಾರ್ಮಿಕ ಭಾವನೆಗಳನ್ನು ನಿಯಂತ್ರಿಸುವ ಅಧಿಕಾರ ಸರ್ಕಾರಕ್ಕಿಲ್ಲ’ : ರಾಜ ಶೇಖರಾನಂದ ಸ್ವಾಮೀಜಿ
ಉಡುಪಿಯ ಪರ್ಯಾಯ ಮಹೋತ್ಸವದಲ್ಲಿ ಜಿಲ್ಲಾಧಿಕಾರಿಗಳಿಂದ ಕೇಸರಿ ಧ್ವಜ ಪ್ರದರ್ಶನ ವಿಚಾರ ಕಳೆದ ಕೆಲವು ದಿನಗಳಿಂದ ವಿವಾದದ ಕೇಂದ್ರಬಿಂದುವಾಗಿದೆ. ಉಡುಪಿ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಎಂ ಹಾಗೂ ಡಿಸಿಎಂಗೆ ಪತ್ರ ಬರೆದಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವಿರುದ್ಧ ಮಂಗಳೂರಿನಲ್ಲಿ ಗುರುಪುರ ವಜ್ರದೇಹಿ ಮಠದ ರಾಜ ಶೇಖರಾನಂದ ಸ್ವಾಮೀಜಿ ಪ್ರತಿಕ್ರಯಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಅವರು, ಇಲ್ಲಿನ ನಾಯಕರಿಗೆ ಧರ್ಮದ ಬಗ್ಗೆ ಅರಿವಿಲ್ಲ. ನಮ್ಮಲ್ಲಿ ಭಗವಾ ಧ್ವಜಕ್ಕೆ ವಿಶೇಷ ಗೌರವ ಇದೆ. ಜಿಲ್ಲಾಧಿಕಾರಿಗಳು ಸರ್ಕಾರದ ಒಂದು ಭಾಗ. ಆದರೆ ಅವರದ್ದೇ ಆದ ಕರ್ತವ್ಯಗಳಲ್ಲಿ ಅವರು ಪಾಲ್ಗೊಳ್ಳಬಹುದು. ಅದಕ್ಕೆ ಸರ್ಕಾರ ನಿರ್ಬಂಧ ಹೇರಬಾರದು. ನಮ್ಮ ಧಾರ್ಮಿಕ ವ್ಯವಸ್ಥೆಯ ಒಳಗೆ ಅನ್ಯಧರ್ಮೀಯರನ್ನು ತಂದು ಅದಕ್ಕೊಂದು ಸಮರ್ಥನೆ ನೀಡುತ್ತಾರೆ. ಈ ಹಿಂದೆ ಅನ್ಯಮತೀಯ ಡಿಸಿ ಅವರ ಧಾರ್ಮಿಕ ಕೇಂದ್ರಗಳಿಗೆ ತೆರಳಿದ್ದರು ಅದನ್ನು ಸರ್ಕಾರ ತಡೆಹಿಡಿದಿತ್ತೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪರ್ಯಾಯ ಮೆರವಣಿಗೆಯಲ್ಲಿ ಕೇಸರಿ ಧ್ವಜ ಹಾರಾಟ ವಿವಾದ : ಕಾಂಗ್ರೆಸ್ಗೆ ಶಾಸಕ ವಿ.ಸುನೀಲ್ ಕುಮಾರ್ ಟಾಂಗ್
ಈಗ ಉಡುಪಿ ಜಿಲ್ಲಾಧಿಕಾರಿಗಳ ನಡೆಯನ್ನು ಅವಹೇಳನ ಮಾಡಿ ಅವರ ಪದವಿಗೆ ಕಪ್ಪು ಚುಕ್ಕೆ ತರಲಾಗುತ್ತಿದೆ. ಸಮಸ್ಯೆ ಸೃಷ್ಟಿಸಬೇಕು ಎನ್ನುವು ಹುನ್ನಾರವಿದು. ಇಲ್ಲಿ ಜಾತಿ, ಧರ್ಮ ಅಡ್ಡಿ ಬರಬಾರದು. ಮಠಕ್ಕೆ ಅನ್ಯ ಜಾತಿಯವರು ತರಕಾರಿ ಕೊಡುತ್ತಾರೆ. ಅದನ್ನು ಬೇಡ ಎಂದು ಪಯಾರ್ಯದ ಸಂದರ್ಭದಲ್ಲಿ ಹೊರಗಿಟ್ಟಿದ್ದರಾ? ಅಲ್ಲಿ ಎಲ್ಲಾ ಜಾತಿಯವರು ಬಂದು ಊಟ ಮಾಡಿದ್ದಾರೆ. ಪರ್ಯಾಯ ಮಹೋತ್ಸವದಲ್ಲಿ ಜಾತಿ ತಾರತಮ್ಯ ನಡೆಯುವುದಿಲ್ಲ ಎಂದು ಹೇಳಿದ್ದಾರೆ.



