ಪರ್ಯಾಯ ಮೆರವಣಿಗೆಯಲ್ಲಿ ಕೇಸರಿ ಧ್ವಜ ಹಾರಾಟ ವಿವಾದ : ಕಾಂಗ್ರೆಸ್​ಗೆ ಶಾಸಕ ವಿ.ಸುನೀಲ್​ ಕುಮಾರ್​ ಟಾಂಗ್​

ಉಡುಪಿ (Udupi) ಯಲ್ಲಿ ಅದ್ಧೂರಿಯಾಗಿ ನೆರವೇರಿದ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ಗೆ ಪತ್ರ ಬರೆದು ಆಗ್ರಹಿಸಿರುವ ಜಿಲ್ಲಾ ಕಾಂಗ್ರೆಸ್​ ಸಮಿತಿ ವಿರುದ್ಧ ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ. ಸುನೀಲ್​ ಕುಮಾರ್​ ಹರಿಹಾಯ್ದಿದ್ದಾರೆ. ಹಿಂದೂ ಕಾರ್ಯಕ್ರಮಗಳಲ್ಲಿ ಲೋಪ ಹುಡುಕುವ ಮೂಲಕ ಅಲ್ಪಸಂಖ್ಯಾತರ ಮನ ಓಲೈಸುವುದು ಕಾಂಗ್ರೆಸ್ಸಿಗರ ಛಾಳಿ ಎಂದು ಹರಿಹಾಯ್ದಿದ್ದಾರೆ.

ಪರ್ಯಾಯ ಮಹೋತ್ಸವ ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕಾರಿಗಳು ಮೊದಲಿನಿಂದಲೂ ಭಾಗವಹಿಸಿಕೊಂಡು ಬಂದಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ಸಿಗರಿಗೆ ಇದರಲ್ಲೂ ಲೋಪ ಕಂಡಿದೆ. ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಲೋಪ ಹುಡುಕುವುದು ಕಾಂಗ್ರೆಸ್ಸಿಗರಿಗೆ ಇರುವ ಒಂದು ಚಟ. ಜೋಡುಕಟ್ಟೆಯಿಂದ ಕೃಷ್ಣಮಠದವರೆಗಿನ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದಾರೆ.

ಇದು ಯಾವ ರೀತಿಯಲ್ಲಿ ಧರ್ಮನಿರಪೇಕ್ಷತೆಯ ಸಿದ್ಧಾಂತಕ್ಕೆ ವಿರುದ್ಧವಾಗುತ್ತದೆ? ಸಂವಿಧಾನದ ಆಶಯಗಳನ್ನು ತಪ್ಪಾಗಿ ವ್ಯಾಖ್ಯಾನಿಸುವುದು ಕಾಂಗ್ರೆಸ್ಸಿಗರ ಚಾಳಿ. ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಪ್ಪು ಹುಡುಕುವ ನೀವು ಮುಸ್ಲಿಂ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ತಪ್ಪು ಹುಡುಕಿ ನೋಡೋಣ ಎಂದು ಸವಾಲ್​ ಎಸೆದಿದ್ದಾರೆ.

ಇದನ್ನೂ ಓದಿ: ಪರ್ಯಾಯ ಸಂಭ್ರಮದಲ್ಲಿ ಕೃಷ್ಣನಗರಿ ಉಡುಪಿ: ರವಿವಾರ ಸರ್ವಜ್ಞಪೀಠ ಏರಲಿರುವ ಶೀರೂರು ಶ್ರೀಗಳು

ಇನ್ನು ಪರ್ಯಾಯ ಮಹೋತ್ಸವದಲ್ಲಿ ಕೇಸರಿ ಬಾವುಟ ಪ್ರದರ್ಶನದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಸರಿ ಧ್ವಜ ಪ್ರದರ್ಶಿಸದೇ ಇನ್ನೇನು ಕಾಂಗ್ರೆಸ್​ ಬಾವುಟ ಹಾರಿಸಬೇಕಿತ್ತೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಇದು ಕಾಂಗ್ರೆಸ್​ ಅವರ ಕ್ಷುದ್ರ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಿಡಿಕಾರಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories