LIC ಪಾಲಿಸಿದಾರರಿಗೆ ಸುವರ್ಣಾವಕಾಶ: ಲ್ಯಾಪ್ಸ್ ಆದ ಪಾಲಿಸಿಗಳನ್ನು ಮತ್ತೆ ಆರಂಭಿಸಲು ವಿಶೇಷ ರಿಯಾಯಿತಿ
LIC Lapse policy renewal good news: ನಿಮ್ಮ ಎಲ್ಐಸಿ ಪಾಲಿಸಿ ಹಣ ಪಾವತಿಸದ ಕಾರಣ ಸ್ಥಗಿತಗೊಂಡಿದೆಯೇ? ಹಾಗಿದ್ದಲ್ಲಿ, ಪಾಲಿಸಿದಾರರಿಗಾಗಿ ಎಲ್ಐಸಿ ‘ವಿಶೇಷ ಪುನಶ್ಚೇತನ ಅಭಿಯಾನ’ವನ್ನು (Special Revival Campaign) ಹಮ್ಮಿಕೊಂಡಿದೆ. 2026ರ ಜನವರಿ 1ರಿಂದ ಆರಂಭವಾಗಿರುವ ಈ ಅಭಿಯಾನವು ಮಾರ್ಚ್ 2ರವರೆಗೆ ಜಾರಿಯಲ್ಲಿರಲಿದೆ. ಪಾಲಿಸಿದಾರರು ತಮ್ಮ ಸ್ಥಗಿತಗೊಂಡ ಪಾಲಿಸಿಗಳನ್ನು ಮರುಚಾಲನೆಗೊಳಿಸಿ, ವಿಮಾ ರಕ್ಷಣೆಯನ್ನು ಮುಂದುವರಿಸಲು ಇದೊಂದು ಉತ್ತಮ ಅವಕಾಶವಾಗಿದೆ.
ಈ ಅಭಿಯಾನದ ಅಡಿಯಲ್ಲಿ ಪಾಲಿಸಿದಾರರಿಗೆ ವಿಳಂಬ ಶುಲ್ಕದಲ್ಲಿ (Late Fee) ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ನಾನ್-ಲಿಂಕ್ಡ್ ಪಾಲಿಸಿಗಳ ಮೇಲೆ ವಿಳಂಬ ಶುಲ್ಕದಲ್ಲಿ ಶೇ. 30 ರಷ್ಟು ಅಥವಾ ಗರಿಷ್ಠ 5,000 ರೂಪಾಯಿಗಳವರೆಗೆ ರಿಯಾಯಿತಿ ಸಿಗಲಿದೆ. ಇನ್ನು ಮೈಕ್ರೋ ಇನ್ಶೂರೆನ್ಸ್ ಪಾಲಿಸಿಗಳ ಪುನಶ್ಚೇತನಕ್ಕಾಗಿ ವಿಳಂಬ ಶುಲ್ಕದ ಮೇಲೆ ಶೇ. 100 ರಷ್ಟು ರಿಯಾಯಿತಿ ಘೋಷಿಸಲಾಗಿದೆ.
ಮೊದಲ ಪ್ರೀಮಿಯಂ ಬಾಕಿ ಉಳಿಸಿಕೊಂಡ ದಿನಾಂಕದಿಂದ 5 ವರ್ಷಗಳ ಒಳಗೆ ಇರುವ ಪಾಲಿಸಿಗಳನ್ನು ಮಾತ್ರ ಈ ಯೋಜನೆಯಡಿ ಮರುಚಾಲನೆಗೊಳಿಸಲು ಅವಕಾಶವಿದೆ. ಆದರೆ, ಆರೋಗ್ಯ ಸಂಬಂಧಿತ ಪರೀಕ್ಷೆಗಳಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಎಲ್ಐಸಿ ಸ್ಪಷ್ಟಪಡಿಸಿದೆ. ಅನಿವಾರ್ಯ ಕಾರಣಗಳಿಂದ ಪ್ರೀಮಿಯಂ ಕಟ್ಟಲು ಸಾಧ್ಯವಾಗದವರಿಗೆ ಈ ಯೋಜನೆ ವರದಾನವಾಗಲಿದೆ.
ಎಲ್ಐಸಿ ಈ ಅಭಿಯಾನವನ್ನು ಘೋಷಿಸಿದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಅದರ ಷೇರುಗಳ ಬೆಲೆಯೂ ಏರಿಕೆ ಕಂಡಿದೆ. ಜನವರಿ 2 ರಂದು ಎಲ್ಐಸಿ ಷೇರುಗಳು ಶೇ. 0.99 ರಷ್ಟು ಏರಿಕೆಯಾಗಿ 861.25 ರೂಪಾಯಿಗಳಲ್ಲಿ ವ್ಯವಹಾರ ಮುಗಿಸಿವೆ. ಪಾಲಿಸಿದಾರರು ಈ ಸೌಲಭೂತವನ್ನು ಪಡೆದುಕೊಳ್ಳುವ ಮೂಲಕ ತಮ್ಮ ಕುಟುಂಬದ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಬಹುದು.



