ಲೋನ್ ಪಡೆದ ವ್ಯಕ್ತಿ ಮೃತಪಟ್ಟರೆ ಕುಟುಂಬದ ಮೇಲೆ ಸಾಲದ ಹೊರೆ ಬೀಳುತ್ತಾ? ಮಹತ್ವದ ಮಾಹಿತಿ

ಸಾಲಗಾರ ಮೃತಪಟ್ಟ ಬಳಿಕ ಬ್ಯಾಂಕ್ ಅಥವಾ ಸರ್ಕಾರ ಪತ್ನಿ ಮಕ್ಕಳ ಸ್ವಂತ ಆಸ್ತಿಯನ್ನು ವಶಪಡಿಸಿಕೊಳ್ಳಬಹುದೇ ಎಂಬ ಗೊಂದಲಕ್ಕೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿ ಕಾನೂನು ಸ್ಪಷ್ಟನೆ ನೀಡಿದೆ.

ಸಾಲ ಪಡೆದ ವ್ಯಕ್ತಿ ಮೃತಪಟ್ಟ ಬಳಿಕ ಆತನ ಪತ್ನಿ ಮತ್ತು ಮಕ್ಕಳ ಸ್ವಂತ ಆಸ್ತಿಯನ್ನು ಬ್ಯಾಂಕ್ ಅಥವಾ ಸರ್ಕಾರ ಜಪ್ತಿ ಮಾಡಬಹುದೇ ಎಂಬ ಪ್ರಶ್ನೆಗೆ ಮಹತ್ವದ ಕಾನೂನು ಸ್ಪಷ್ಟನೆ ದೊರೆತಿದೆ. ಈ ಕುರಿತು ತೆಲಂಗಾಣ ಹೈಕೋರ್ಟ್ ನೀಡಿರುವ ತೀರ್ಪು ಅನೇಕ ಕುಟುಂಬಗಳಿಗೆ ನೆಮ್ಮದಿ ತಂದಿದೆ.

ನ್ಯಾಯಾಲಯದ ತೀರ್ಪಿನ ಪ್ರಕಾರ, ಸಾಲಗಾರ ಮೃತಪಟ್ಟ ನಂತರ ಬಾಕಿ ಮೊತ್ತವನ್ನು ವಸೂಲಿ ಮಾಡಬೇಕಾದರೆ ಅದು ಮೃತರ ಹೆಸರಿನಲ್ಲಿದ್ದ ಆಸ್ತಿ ಅಥವಾ ಅವರಿಗೆ ಸೇರಿದ ಪಾಲಿನ ಆಸ್ತಿಯಿಂದ ಮಾತ್ರ ಸಾಧ್ಯ. ಪತ್ನಿ, ಮಕ್ಕಳು ಅಥವಾ ಇತರ ಉತ್ತರಾಧಿಕಾರಿಗಳು ತಮ್ಮ ಸ್ವಂತ ದುಡಿಮೆಯಿಂದ ಸಂಪಾದಿಸಿದ ಆಸ್ತಿಯನ್ನು ಸಾಲ ವಸೂಲಾತಿಗಾಗಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ತೀರ್ಪು ಕಾಮರೆಡ್ಡಿ ಜಿಲ್ಲೆಯ ಮಾಜಿ ಅಂಚೆ ಅಧಿಕಾರಿ ಶ್ರೀನಿವಾಸ್ ರೆಡ್ಡಿ ಪ್ರಕರಣದ ವಿಚಾರಣೆ ವೇಳೆ ಹೊರಬಂದಿದೆ. ಅವರ ವಿರುದ್ಧ ಸರ್ಕಾರಿ ನಿಧಿ ದುರುಪಯೋಗ ಆರೋಪದ ತನಿಖೆ ನಡೆಯುತ್ತಿದ್ದ ವೇಳೆ ಅವರು ಮೃತಪಟ್ಟಿದ್ದರು. ಬಳಿಕ ಬಾಕಿ ಮೊತ್ತ ವಸೂಲಿ ಮಾಡಲು ಅಧಿಕಾರಿಗಳು ಕುಟುಂಬದ ಆಸ್ತಿಯ ಮೇಲೂ ಕ್ರಮ ಕೈಗೊಳ್ಳಲು ಮುಂದಾಗಿದ್ದರು.

ಇದನ್ನು ಪ್ರಶ್ನಿಸಿ ಮೃತರ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಪತಿಯ ಹೆಸರಿನಲ್ಲಿದ್ದ ಆಸ್ತಿಯಿಂದ ಮಾತ್ರ ಹಣ ವಸೂಲಿ ಮಾಡಬಹುದು. ಆದರೆ ತಮ್ಮ ಹಾಗೂ ಮಕ್ಕಳ ವೈಯಕ್ತಿಕ ಆಸ್ತಿಯನ್ನು ಜಪ್ತಿ ಮಾಡುವುದು ಕಾನೂನುಬಾಹಿರ ಎಂದು ಅವರು ವಾದಿಸಿದ್ದರು.

ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ, ಉತ್ತರಾಧಿಕಾರಿಗಳ ಮೇಲೆ ಸಾಲದ ಹೊಣೆಗಾರಿಕೆ ಸಂಪೂರ್ಣವಾಗಿ ಬೀಳುವುದಿಲ್ಲ ಎಂದು ತಿಳಿಸಿದೆ. ಮೃತರಿಂದ ಕಾನೂನುಬದ್ಧವಾಗಿ ವರ್ಗಾವಣೆಯಾಗುವ ಆಸ್ತಿಯ ಮೌಲ್ಯದ ಮಟ್ಟಿಗೆ ಮಾತ್ರ ಹೊಣೆಗಾರಿಕೆ ಇರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅದೇ ರೀತಿ ಪತ್ನಿ ಅಥವಾ ಮಕ್ಕಳ ಸಂಬಳ, ಬ್ಯಾಂಕ್ ಠೇವಣಿ, ಸ್ವಂತ ಹಣದಿಂದ ಖರೀದಿಸಿದ ಜಮೀನು, ಮನೆ ಅಥವಾ ಇತರ ವೈಯಕ್ತಿಕ ಆಸ್ತಿಗಳನ್ನು ಸಾಲ ವಸೂಲಾತಿಗಾಗಿ ಜಪ್ತಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಜಂಟಿ ಕುಟುಂಬದ ಆಸ್ತಿಯ ವಿಚಾರದಲ್ಲೂ ಇದೇ ನಿಯಮ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ. ಮೃತ ವ್ಯಕ್ತಿಗೆ ಇದ್ದ ಪಾಲಿನಷ್ಟು ಆಸ್ತಿಯ ಮೇಲೆ ಮಾತ್ರ ಸಾಲದಾತರು ಹಕ್ಕು ಚಲಾಯಿಸಬಹುದು. ಉಳಿದ ಪಾಲಿನ ಮೇಲೆ ಕುಟುಂಬ ಸದಸ್ಯರ ಹಕ್ಕು ಮುಂದುವರಿಯುತ್ತದೆ.

ಈ ತೀರ್ಪು ಸಾಲ ವಸೂಲಾತಿ ಪ್ರಕರಣಗಳಲ್ಲಿ ಉತ್ತರಾಧಿಕಾರಿಗಳ ಹಕ್ಕುಗಳನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಅನಿರೀಕ್ಷಿತವಾಗಿ ಕುಟುಂಬದ ಮುಖ್ಯಸ್ಥರನ್ನು ಕಳೆದುಕೊಂಡಿರುವ ಅನೇಕ ಕುಟುಂಬಗಳಿಗೆ ಕಾನೂನುಬದ್ಧ ನೆಮ್ಮದಿ ನೀಡುವ ಮಹತ್ವದ ಬೆಳವಣಿಗೆಯಾಗಿದೆ.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »