ಕರ್ನಾಟಕ ಸರ್ಕಾರ vs ರಾಜ್ಯಪಾಲರು: ರಾಷ್ಟ್ರಪತಿ ತಲುಪಿದ ಸಂಘರ್ಷ
Karnataka Government vs Governor: ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನದ ಸಂದರ್ಭದಲ್ಲಿ ನಡೆದ ನಾಟಕೀಯ ಬೆಳವಣಿಗೆಗಳು ಮತ್ತು ಸರ್ಕಾರದೊಂದಿಗೆ ಉಂಟಾದ ಭಿನ್ನಾಭಿಪ್ರಾಯಗಳ ಕುರಿತು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಸುದೀರ್ಘ ವರದಿಯೊಂದನ್ನು ಸಲ್ಲಿಸಿದ್ದಾರೆ. ಜನವರಿ 21 ಮತ್ತು 22, 2026 ರಂದು ನಡೆದ ಘಟನೆಗಳನ್ನು ಉಲ್ಲೇಖಿಸಿ ಈ ವರದಿ ಸಿದ್ಧಪಡಿಸಲಾಗಿದೆ.
ರಾಜ್ಯಪಾಲರ ವರದಿಯಲ್ಲಿ ಏನಿದೆ?
- ಭಾಷಣದ ಕರಡು ತಿದ್ದುಪಡಿ: ಕೇಂದ್ರ ಸರ್ಕಾರದ ‘ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ 2025′ ಅನ್ನು ಟೀಕಿಸುವ ಅಂಶಗಳು ರಾಜ್ಯ ಸರ್ಕಾರದ ಭಾಷಣದ ಕರಡಿನಲ್ಲಿದ್ದವು. ಕರಡಿನ 2 ರಿಂದ 11 ರವರೆಗಿನ ಪ್ಯಾರಾಗಳಲ್ಲಿ ಕೇಂದ್ರದ ವಿರುದ್ಧ ತೀವ್ರ ಟೀಕೆಗಳಿದ್ದ ಕಾರಣ, ಅವುಗಳನ್ನು ತೆಗೆದುಹಾಕುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸಲಹೆ ನೀಡಿದ್ದರು.
- ಸಂವಿಧಾನಬದ್ಧ ಕ್ರಮ: ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುವಾಗ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದಂತೆ ರಾಜ್ಯಪಾಲರು ಕೈಗೊಂಡ ಕ್ರಮಗಳ ಬಗ್ಗೆ ರಾಷ್ಟ್ರಪತಿಗಳಿಗೆ ವಿವರಿಸಲಾಗಿದೆ.
- ಸಮಾಲೋಚನೆಗಳ ವಿವರ: ಈ ಸಂಘರ್ಷದ ಕುರಿತು ವಿಧಾನ ಪರಿಷತ್ತಿನ ಸಭಾಪತಿಗಳು, ವಿಧಾನಸಭೆಯ ಸಭಾಧ್ಯಕ್ಷರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರೊಂದಿಗೆ ನಡೆಸಿದ ಚರ್ಚೆಗಳನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
- ಸದನದಲ್ಲಿ ಗದ್ದಲ ಮತ್ತು ‘ಘೇರಾವ್’ ಯತ್ನ: ರಾಜ್ಯಪಾಲರು ತಮ್ಮ ಭಾಷಣ ಮುಗಿಸಿದ ತಕ್ಷಣ ಸದನದಲ್ಲಿ ನಡೆದ ಅಹಿತಕರ ಘಟನೆಗಳ ಬಗ್ಗೆ ವರದಿ ಆತಂಕ ವ್ಯಕ್ತಪಡಿಸಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಾ, ರಾಜ್ಯಪಾಲರ ಮೇಲೆ ಒತ್ತಡ ಹೇರಲು ಅವರನ್ನು ಮುತ್ತುವ (ಘೇರಾವ್) ಪ್ರಯತ್ನ ನಡೆಸಿದರು ಎಂದು ವರದಿಯಲ್ಲಿ ವಿವರಿಸಲಾಗಿದೆ.
- ನಾಯಕರ ಪ್ರತಿಕ್ರಿಯೆ: ಅಧಿವೇಶನದ ನಂತರ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು ನೀಡಿದ ಹೇಳಿಕೆಗಳು ಮತ್ತು ಸೃಷ್ಟಿಯಾದ ರಾಜಕೀಯ ಪರಿಸ್ಥಿತಿಯ ಬಗ್ಗೆಯೂ ರಾಷ್ಟ್ರಪತಿಗಳಿಗೆ ಮಾಹಿತಿ ನೀಡಲಾಗಿದೆ.
ಗಣರಾಜ್ಯೋತ್ಸವ ಭಾಷಣ ಓದಲ್ವಾ ರಾಜ್ಯಪಾಲರು? ಕರ್ನಾಟಕ ಸರ್ಕಾರದ ಮುಂದಿನ ನಡೆಯೇನು?
ರಾಜ್ಯ ಸರ್ಕಾರದ ಸಾಧನೆಗಳನ್ನು ಹೇಳುವ ಭಾಷಣದಲ್ಲಿ ಕೇಂದ್ರದ ಯೋಜನೆಗಳನ್ನು ಟೀಕಿಸುವ ವಿಚಾರವಾಗಿ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದು ಸದನದಲ್ಲಿ ಸದಸ್ಯರ ಗದ್ದಲಕ್ಕೆ ಕಾರಣವಾಗಿತ್ತು. ಈಗ ಈ ಇಡೀ ಪ್ರಹಸನವು ರಾಷ್ಟ್ರಪತಿಗಳ ಅಂಗಳಕ್ಕೆ ತಲುಪಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.



