ಅಮೃತಾ ಗೌಡಗೆ ಬೆದರಿಕೆ: ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಕೇರಳ ಗಡಿಯಲ್ಲಿ ಅರೆಸ್ಟ್

Rajeev Gowda arrested: ಚಿಕ್ಕಬಳ್ಳಾಪುರ: ಸರ್ಕಾರಿ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಚೇರಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಪೊಲೀಸರು ಕೊನೆಗೂ ಸೆರೆಹಿಡಿದಿದ್ದಾರೆ. ಕೇರಳ ಗಡಿ ಭಾಗದಲ್ಲಿ ಕಾರ್ಯಾಚರಣೆ ನಡೆಸಿದ ಚಿಕ್ಕಬಳ್ಳಾಪುರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜನವರಿ 12ರಂದು ಶಿಡ್ಲಘಟ್ಟ ನಗರದಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ಬ್ಯಾನರ್‌ಗಳನ್ನು ಪೌರಾಯುಕ್ತೆ ಅಮೃತಾಗೌಡ ಅವರು ತೆರವುಗೊಳಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ರಾಜೀವ್ ಗೌಡ, ಪೌರಾಯುಕ್ತರಿಗೆ ಫೋನ್ ಮಾಡಿ ಅಸಭ್ಯವಾಗಿ ಮಾತನಾಡಿದ್ದಲ್ಲದೆ, ನಗರಸಭೆ ಕಚೇರಿಗೆ ಬೆಂಕಿ ಇಡುವುದಾಗಿ ಧಮ್ಕಿ ಹಾಕಿದ್ದ ಎನ್ನಲಾಗಿದೆ. ಈ ಸಂಭಾಷಣೆಯ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಜನವರಿ 14ರಂದು ದೂರು ದಾಖಲಾಗುತ್ತಿದ್ದಂತೆಯೇ ರಾಜೀವ್ ಗೌಡ ತಲೆಮರೆಸಿಕೊಂಡಿದ್ದ. ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆತ ಅಡಗಿದ್ದಾನೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಸೋಮವಾರ ಬೆಳಿಗ್ಗೆ ಪೊಲೀಸರು ಬೆನ್ನಟ್ಟುತ್ತಿರುವುದು ತಿಳಿಯುತ್ತಿದ್ದಂತೆಯೇ ಮಂಗಳೂರಿನಿಂದ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಕೇರಳ ಗಡಿಯ ಸಮೀಪ ಸಿನಿಮೀಯ ರೀತಿಯಲ್ಲಿ ಬಂಧಿಸಲಾಗಿದೆ.

ನ್ಯಾಯಾಲಯದ ತಪರಾಕಿ:

ರಾಜೀವ್ ಗೌಡ ಈ ಹಿಂದೆ ತನ್ನ ಮೇಲಿನ ಎಫ್‌ಐಆರ್ (FIR) ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ. ಆದರೆ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಆರೋಪಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಿತ್ತು. ಅಲ್ಲದೆ, ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸುವ ಮೂಲಕ ಕಾನೂನು ಕ್ರಮಕ್ಕೆ ಹಾದಿ ಸುಗಮಗೊಳಿಸಿತ್ತು.

ಇನ್ಮುಂದೆ ವಂದೇ ಮಾತರಂ ಹಾಡುವಾಗಲೂ ಎದ್ದು ನಿಲ್ಲುವುದು ಕಡ್ಡಾಯ? ರಾಷ್ಟ್ರಗೀತೆಯಂತೆ ಅಧಿಕೃತ ಪ್ರೋಟೋಕಾಲ್

ಪಕ್ಷದಿಂದ ಅಮಾನತು:

ಮಹಿಳಾ ಅಧಿಕಾರಿಯ ವಿರುದ್ಧದ ಈ ನಡವಳಿಕೆಯು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಮುಜುಗರ ತಂದಿತ್ತು. ಸ್ವಪಕ್ಷದವರಿಂದಲೇ ರಾಜೀವ್ ಗೌಡ ಬಂಧನಕ್ಕೆ ಒತ್ತಾಯ ಕೇಳಿಬಂದಿತ್ತು. ಘಟನೆಯ ಗಾಂಭೀರ್ಯ ಅರಿತ ಕಾಂಗ್ರೆಸ್ ಶಿಸ್ತು ಸಮಿತಿಯು ಈಗಾಗಲೇ ಆತನನ್ನು ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories