ಕೃಷಿ ಜಮೀನಿಗೆ ಸಬ್ಸಿಡಿ ಪಂಪ್‌ಸೆಟ್ ಪಡೆಯಲು ಅವಕಾಶ; ಅರ್ಜಿ ಪ್ರಕ್ರಿಯೆ ತಿಳಿಯಿರಿ

ಕೃಷಿ ಜಮೀನಿಗೆ ಸೌರಶಕ್ತಿ ಅಥವಾ ವಿದ್ಯುತ್ ಚಾಲಿತ ಪಂಪ್‌ಸೆಟ್ ಅಳವಡಿಸಲು ಸರ್ಕಾರದಿಂದ ಶೇ.60 ರಿಂದ 80ರವರೆಗೆ ಸಹಾಯಧನ ಲಭ್ಯವಿದೆ. ಅರ್ಹತೆ, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.

ರಾಜ್ಯದ ರೈತರಿಗೆ ನೀರಾವರಿ ವ್ಯವಸ್ಥೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಸಹಾಯಧನ ಯೋಜನೆಗಳನ್ನು ಜಾರಿಗೆ ತಂದಿವೆ. ಪಿಎಂ-ಕುಸುಮ್ (PM-KUSUM) ಮತ್ತು ಗಂಗಾ ಕಲ್ಯಾಣ ಯೋಜನೆಗಳಡಿ ಸೌರಶಕ್ತಿ ಅಥವಾ ವಿದ್ಯುತ್ ಚಾಲಿತ ಪಂಪ್‌ಸೆಟ್‌ಗಳನ್ನು ಶೇ.60 ರಿಂದ 80ರವರೆಗೆ ಸಬ್ಸಿಡಿ ದರದಲ್ಲಿ ಪಡೆಯುವ ಅವಕಾಶವಿದೆ.

ಪಿಎಂ-ಕುಸುಮ್ ಯೋಜನೆ ಅಡಿಯಲ್ಲಿ ಸೌರ ಪಂಪ್‌ಸೆಟ್ ಅಳವಡಿಕೆಗೆ ಸಾಮಾನ್ಯ ರೈತರಿಗೆ ಶೇ.60ರವರೆಗೆ ಸಹಾಯಧನ ದೊರೆಯುತ್ತದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ರೈತರಿಗೆ ಶೇ.80ರವರೆಗೆ ಅಥವಾ ಯೋಜನೆಯ ನಿಯಮಾನುಸಾರ ಹೆಚ್ಚಿನ ಸೌಲಭ್ಯ ದೊರೆಯಬಹುದು.

ಯಾರು ಅರ್ಜಿ ಸಲ್ಲಿಸಬಹುದು?

ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ಹಾಗೂ ಕೃಷಿಯನ್ನೇ ವೃತ್ತಿಯಾಗಿರಬೇಕು. ಅರ್ಜಿದಾರರ ಹೆಸರಿನಲ್ಲಿ ಸ್ವಂತ ಕೃಷಿ ಜಮೀನು ಇರಬೇಕು. ಜಮೀನಿನಲ್ಲಿ ಬಾವಿ ಅಥವಾ ಕೊಳವೆಬಾವಿಯಂತಹ ನೀರಿನ ಮೂಲವಿರಬೇಕು. ಸಣ್ಣ, ಅತಿಸಣ್ಣ ಹಾಗೂ ಎಸ್‌ಸಿ/ಎಸ್‌ಟಿ ರೈತರಿಗೆ ಆದ್ಯತೆ ನೀಡಲಾಗುತ್ತದೆ.

ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • ಪಹಣಿ (RTC) ಹಾಗೂ ಜಮೀನಿನ ದಾಖಲೆಗಳು
  • ಬ್ಯಾಂಕ್ ಪಾಸ್‌ಬುಕ್
  • ಜಾತಿ ಮತ್ತು ಆದಾಯ ಪ್ರಮಾಣಪತ್ರ (ಅನ್ವಯಿಸಿದರೆ)
  • ಬಾವಿ ಅಥವಾ ಕೊಳವೆಬಾವಿ ಇರುವ ದೃಢೀಕರಣ
  • ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ

ಪಿಎಂ-ಕುಸುಮ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

ಮೊದಲು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (KREDL) ಅಥವಾ ಸಂಬಂಧಿತ ವಿದ್ಯುತ್ ಸರಬರಾಜು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಬಳಿಕ ಪಿಎಂ-ಕುಸುಮ್ ಯೋಜನೆಯ ಲಿಂಕ್ ಆಯ್ಕೆ ಮಾಡಿ FRUITS ID ಹಾಗೂ ಆಧಾರ್ ವಿವರಗಳೊಂದಿಗೆ ಲಾಗಿನ್ ಆಗಬೇಕು. ನಂತರ ಜಮೀನಿನ ಮಾಹಿತಿ, ಅಗತ್ಯ ಪಂಪ್‌ಸೆಟ್ ಸಾಮರ್ಥ್ಯ (HP) ಆಯ್ಕೆ ಮಾಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಮಂಜೂರಾದ ಬಳಿಕ ರೈತರ ಪಾಲಿನ ಮೊತ್ತವನ್ನು ಪಾವತಿಸಬೇಕು.

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಹೇಗೆ?

ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಿದ ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ.

ಅರ್ಜಿ ಸಲ್ಲಿಸಿದ ನಂತರ ಏನಾಗುತ್ತದೆ?

ಅರ್ಜಿಯ ಬಳಿಕ ಕೃಷಿ ಇಲಾಖೆ ಅಥವಾ ಸಂಬಂಧಿತ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುತ್ತಾರೆ. ಎಲ್ಲ ದಾಖಲೆಗಳು ಹಾಗೂ ಅರ್ಹತೆ ಸರಿಯಾಗಿದ್ದರೆ ಸಬ್ಸಿಡಿ ಮಂಜೂರಾಗುತ್ತದೆ. ನಂತರ ಸರ್ಕಾರದಿಂದ ಅನುಮೋದಿತ ಸಂಸ್ಥೆಗಳು ರೈತರ ಜಮೀನಿನಲ್ಲಿ ಪಂಪ್‌ಸೆಟ್ ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸುತ್ತವೆ.

ರೈತರು ಗಮನಿಸಬೇಕಾದ ಸಂಗತಿ

ಸಹಾಯಧನ ಯೋಜನೆಗಳಿಗೆ ವರ್ಷದಲ್ಲಿ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಆದ್ದರಿಂದ ಅರ್ಜಿ ಸ್ವೀಕಾರ ಆರಂಭವಾಗಿದೆಯೇ ಅಥವಾ ಮುಕ್ತಾಯವಾಗಿದೆಯೇ ಎಂಬುದನ್ನು ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ಮುಂಚಿತವಾಗಿ ಪರಿಶೀಲಿಸಿಕೊಳ್ಳುವುದು ಒಳಿತು.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »