4.8 ಕೋಟಿ ಜಿಮೇಲ್, 1.7 ಕೋಟಿ ಫೇಸ್‌ಬುಕ್, 65 ಲಕ್ಷ ಇನ್ಸ್ಟಾಗ್ರಾಂ ಖಾತೆಗಳು ಹ್ಯಾಕ್!
Massive Cyber Breach: ಜಾಗತಿಕ ಡಿಜಿಟಲ್ ಜಗತ್ತಿನಲ್ಲಿ ಸಂಚಲನ ಮೂಡಿಸುವಂತಹ ಬೃಹತ್ ಸೈಬರ್ ಭದ್ರತಾ ಲೋಪವೊಂದು ಸಂಭವಿಸಿದೆ. ಕೋಟ್ಯಂತರ ಬಳಕೆದಾರರ ಜಿಮೇಲ್ (Gmail), ಫೇಸ್‌ಬುಕ್ (Facebook), ಇನ್‌ಸ್ಟಾಗ್ರಾಮ್ (Instagram) ಸೇರಿದಂತೆ ಪ್ರಮುಖ ಜಾಲತಾಣಗಳ ಪಾಸ್‌ವರ್ಡ್‌ಗಳು ಬಹಿರಂಗವಾಗಿವೆ.
ಏನಿದು ಘಟನೆ?
ಸೈಬರ್ ಭದ್ರತಾ ಸಂಶೋಧಕ ಜೆರೆಮಿಯಾ ಫೌಲರ್ ಅವರು ಈ ಭೀಕರ ಭದ್ರತಾ ಲೋಪವನ್ನು ಪತ್ತೆಹಚ್ಚಿದ್ದಾರೆ. ಇಂಟರ್ನೆಟ್‌ನಲ್ಲಿ ಯಾವುದೇ ಸುರಕ್ಷತೆಯಿಲ್ಲದ (Unencrypted) ಸುಮಾರು 96 GB ಯಷ್ಟು ಬೃಹತ್ ಡೇಟಾ ಪತ್ತೆಯಾಗಿದ್ದು, ಇದರಲ್ಲಿ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ಗಳು ಯಾರಿಗಾದರೂ ಸಿಗುವಂತೆ ಲಭ್ಯವಿವೆ.
ಸೋರಿಕೆಯಾದ ಪ್ರಮುಖ ಮಾಹಿತಿ:
- ಜಿಮೇಲ್: 4.8 ಕೋಟಿ ಖಾತೆಗಳು.
- ಫೇಸ್‌ಬುಕ್: 1.7 ಕೋಟಿ ಖಾತೆಗಳು.
- ಇನ್‌ಸ್ಟಾಗ್ರಾಮ್: 65 ಲಕ್ಷ ಖಾತೆಗಳು.
- ನೆಟ್‌ಫ್ಲಿಕ್ಸ್: 34 ಲಕ್ಷ ಪ್ರೊಫೈಲ್‌ಗಳು.
- ಬೈನಾನ್ಸ್ (Binance): 4.2 ಲಕ್ಷಕ್ಕೂ ಅಧಿಕ ಲಾಗಿನ್ ವಿವರಗಳು.
- ಇದರೊಂದಿಗೆ ಸರ್ಕಾರಿ (.gov) ಡೊಮೈನ್‌ಗಳು, ಕ್ರಿಪ್ಟೋ ವ್ಯಾಲೆಟ್‌ಗಳು ಮತ್ತು ಬ್ಯಾಂಕಿಂಗ್ ವಿವರಗಳು ಸಹ ಈ ಸೋರಿಕೆಯಲ್ಲಿ ಸೇರಿವೆ ಎಂದು ವರದಿಯಾಗಿದೆ.
ಪಾಸ್‌ವರ್ಡ್ ಕಳ್ಳತನವಾಗಿದ್ದು ಹೇಗೆ?
ತಜ್ಞರ ಪ್ರಕಾರ, ಇದು ಯಾವುದೋ ಒಂದು ಕಂಪನಿಯ ಸರ್ವರ್ ಹ್ಯಾಕ್ ಮಾಡಿ ಕದ್ದ ಮಾಹಿತಿಯಲ್ಲ. ಬದಲಾಗಿ, “ಇನ್ಫೋಸ್ಟೀಲರ್” (Infostealer) ಎಂಬ ಮಾಲ್‌ವೇರ್ ಮೂಲಕ ಬಳಕೆದಾರರ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ಗಳಿಂದಲೇ ನೇರವಾಗಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇಮೇಲ್ ಅಟ್ಯಾಚ್‌ಮೆಂಟ್, ನಕಲಿ ಜಾಹೀರಾತು ಅಥವಾ ಅಸುರಕ್ಷಿತ ಬ್ರೌಸರ್ ಎಕ್ಸ್‌ಟೆನ್ಶನ್‌ಗಳ ಮೂಲಕ ಈ ಮಾಲ್‌ವೇರ್ ಸಾಧನಗಳಿಗೆ ಲಗ್ಗೆ ಇಡುತ್ತದೆ.
ಕೇವಲ ಪಾಸ್‌ವರ್ಡ್ ಬದಲಿಸಿದರೆ ಸಾಲದು!
ಭದ್ರತಾ ತಜ್ಞರು ಎಚ್ಚರಿಸುವ ಪ್ರಕಾರ, ನಿಮ್ಮ ಸಾಧನದಲ್ಲಿ ಮಾಲ್‌ವೇರ್ ಇನ್ನೂ ಸಕ್ರಿಯವಾಗಿದ್ದರೆ, ನೀವು ಪಾಸ್‌ವರ್ಡ್ ಬದಲಿಸಿದ ತಕ್ಷಣ ಹೊಸ ಪಾಸ್‌ವರ್ಡ್ ಕೂಡ ಹ್ಯಾಕರ್‌ಗಳ ಕೈ ಸೇರುತ್ತದೆ. ಹೀಗಾಗಿ ಕೇವಲ ಪಾಸ್‌ವರ್ಡ್ ಬದಲಾಯಿಸುವುದು ಇಲ್ಲಿ ಪರಿಹಾರವಲ್ಲ.
ಬಳಕೆದಾರರು ಏನು ಮಾಡಬೇಕು?
- ಸಿಸ್ಟಮ್ ಸ್ಕ್ಯಾನ್: ಉತ್ತಮ ಗುಣಮಟ್ಟದ ಆಂಟಿವೈರಸ್ ಸಾಫ್ಟ್‌ವೇರ್ ಬಳಸಿ ನಿಮ್ಮ ಕಂಪ್ಯೂಟರ್ ಮತ್ತು ಮೊಬೈಲ್ ಅನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಿ.
- MFA ಸಕ್ರಿಯಗೊಳಿಸಿ: ನಿಮ್ಮೆಲ್ಲಾ ಪ್ರಮುಖ ಖಾತೆಗಳಿಗೆ ‘ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್’ (Multi-Factor Authentication) ಅಳವಡಿಸಿ. ಇದರಿಂದ ಹ್ಯಾಕರ್‌ಗಳಿಗೆ ನಿಮ್ಮ ಪಾಸ್‌ವರ್ಡ್ ಸಿಕ್ಕಿದರೂ, ನಿಮ್ಮ ಫೋನ್ ಒಟಿಪಿ ಅಥವಾ ಬಯೋಮೆಟ್ರಿಕ್ ಇಲ್ಲದೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ.
- ಅಪರಿಚಿತ ಲಿಂಕ್‌ಗಳಿಂದ ದೂರವಿರಿ: ಇಮೇಲ್ ಅಥವಾ ಮೆಸೇಜ್‌ಗಳಲ್ಲಿ ಬರುವ ಸಂಶಯಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.



