ಒನ್‌ಪ್ಲಸ್‌ನಿಂದ ಅತ್ಯಂತ ಅಗ್ಗದ ಫೋನ್‌ N6 ಅನಾವರಣ : ಸಿಕ್ಕಾಪಟ್ಟೆ ಬಳಸಿದ್ರೂ ಫೋನ್ ಮಾತ್ರ ಬಿಸಿನೇ ಆಗಲ್ವಂತೆ

ಒನ್‌ಪ್ಲಸ್‌ ಕೈಗಟಕುವ ದರದಲ್ಲಿ N6 ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. N ಸರಣಿಯಲ್ಲಿಯೇ ಅತ್ಯಂತ ಅಗ್ಗದ ಫೋನ್‌ ಇದಾಗಿದ್ದು, ಇದರ ವೈಶಿಷ್ಟ್ಯ, ಬೆಲೆ ಮತ್ತು ಲಭ್ಯತೆ ಬಗ್ಗೆ ತಿಳಿಯೋಣ.

ಭಾರತದಲ್ಲಿ ಮಧ್ಯಮ ಶ್ರೇಣಿಯ ಫೋನ್‌ಗೆ ಬಹಳ ಬೇಡಿಕೆ. ಈಗ ಅವುಗಳ ಸಾಲಿಗೆ ಮತ್ತೊಂದು ಫೋನ್‌ ಸೇರ್ಪಡೆಯಾಗಿದೆ. ಒನ್‌ಪ್ಲಸ್‌ ತನ್ನ N ಸರಣಿಯ ಕೈಗೆಟಕುವ ಬೆಲೆಯ ಫೋನ್‌ ಅನ್ನು ಬಿಡುಗಡೆ ಮಾಡಿದೆ. N6 ಹೆಸರಿನ ಈ ಸ್ಮಾರ್ಟ್‌ಪೋನ್‌ ಗ್ಯಾಜೆಟ್ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ. ಏಕೆಂದರೆ ಕಂಪನಿಯು 25,000ರೂ. ಗಿಂತ ಕಡಿಮೆ ಬೆಲೆಯಲ್ಲಿ 8,000 mAh ಬ್ಯಾಟರಿ ನೀಡಿದೆ. ಕಂಪನಿ ಹೇಳಿಕೊಂಡಿರುವ ಪ್ರಕಾರ ಈ ಫೋನ್‌ ನಿರಂತರ ಬಳಕೆಯಲ್ಲಿಯೂ 12.8 ಗಂಟೆಗಳ ಗೇಮಿಂಗ್, 35 ಗಂಟೆಗಳ ಸೋಷಿಯಲ್‌ ಮೀಡಿಯಾ ಅಪ್ಲಿಕೇಶನ್ ಸ್ಟ್ರೀಮಿಂಗ್ ಮತ್ತು 24 ಗಂಟೆಗಳ ಯೂಟ್ಯೂಬ್‌ ವೀಕ್ಷಣೆಯನ್ನು ಒದಗಿಸುತ್ತದೆ. ಹಾಗಾಗಿ ಮಧ್ಯಮ ಬೆಲೆಯ ಫೋನ್‌ಗಳಲ್ಲಿ ಭಾರಿ ಪೈಪೋಟಿ ಕೊಡುವುದನ್ನು ನಿರೀಕ್ಷಿಸಬಹುದಾಗಿದೆ. ಒನ್‌ಪ್ಲಸ್‌ ಬಿಡುಗಡೆ ಮಾಡಿರುವ N6 ಸ್ಮಾರ್ಟ್‌ಪೋನ್ ನಲ್ಲಿ ಏನೆಲ್ಲಾ ವೈಶಿಷ್ಟ್ಯಗಳಿವೆ? ಬೆಲೆ ಮತ್ತು ಲಭ್ಯತೆ ಹೇಗೆ ಎಂದು ನೋಡೋಣ.

ಒನ್‌ಪ್ಲಸ್‌ N6 ವೈಶಿಷ್ಟ್ಯ

ಒನ್‌ಪ್ಲಸ್‌ N6 6.75-ಇಂಚಿನ HD ಡಿಸ್ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ದರ ಮತ್ತು 1200 nits ಗರಿಷ್ಠ ಹೊಳಪನ್ನು ಹೊಂದಿದೆ. ಈ ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 6360 ಅಪೆಕ್ಸ್‌ ಚಿಪ್‌ಸೆಟ್‌ನಿಂದ ಚಲಿಸುತ್ತದೆ. ಒಕ್ಸಿಜನ್‌ ಒಎಸ್‌ 16 ರಲ್ಲಿ ಕಾರ್ಯನಿರ್ವಹಿಸುವ ಈ ಫೋನ್‌ ವೇಪರ್ ಚೇಂಬರ್ ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ, ಇದು ಭಾರೀ ಬಳಕೆಯ ಸಮಯದಲ್ಲಿಯೂ ಫೋನ್ ಅನ್ನು ತಂಪಾಗಿರಿಸುತ್ತದೆ. ಇನ್ನು ಇದರ ಬಾಳಿಕೆಗಾಗಿ MIL-STD-810H ನಿಂದ ಮಿಲಿಟರಿ ದರ್ಜೆ ಬಾಳಿಕೆಯನ್ನು ಪ್ರಮಾಣೀಕರಿಸಲಾಗಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್‌ ಹೊಂದಿದೆ. ಇದರ ಬ್ಯಾಟರಿಯ ಬ‌ಗ್ಗೆ ಹೇಳುವುದಾದರೆ N6 ದೊಡ್ಡದಾದ 8,000mAh ಬ್ಯಾಟರಿಗಾಗಿ 45W SuperVOOC ವೇಗದ ಚಾರ್ಜಿಂಗ್ ಅನ್ನು ಹೊಂದಿದೆ. ಇದು 6.5W ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುವುದರಿಂದ ಈ ಫೋನ್‌ ವಿಶೇಷವಾಗಿದೆ.

ಇದನ್ನೂ ಓದಿ : ಒಪ್ಪೋ ಫೈಂಡ್ X9 ಅಲ್ಟ್ರಾ ಎಂಟ್ರಿ: ಕ್ಯಾಮೆರಾ ಪ್ರಿಯರಿಗೆ ಪ್ರೀಮಿಯಂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌

ಕ್ಯಾಮೆರಾ ಹೇಗಿದೆ?

ಒನ್‌ಪ್ಲಸ್‌ N6 ಫೋನ್‌ 50MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಫೋನ್‌ 8MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಪೋನ್‌ನಲ್ಲಿ 60fps ವೀಡಿಯೊವನ್ನು ರೆಕಾರ್ಡ್ ಮಾಡಬಹುದು ಮತ್ತು ಡ್ಯುಯಲ್-ವ್ಯೂ ವೀಡಿಯೊವನ್ನು ಬೆಂಬಲಿಸುತ್ತದೆ. AI ಪರ್ಫೆಕ್ಟ್ ಶಾಟ್, AI ಎರೇಸರ್ ಮತ್ತು AI ಅನ್‌ಬ್ಲರ್ ಸೇರಿದಂತೆ ಹಲವಾರು AI ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಒನ್‌ಪ್ಲಸ್ N6 ಫೋನ್‌ನ 4GB + 128GB ರೂಪಾಂತರದ ಬೆಲೆಯನ್ನು 22,999 ರೂ. ಎಂದು ಕಂಪನಿ ನಿಗದಿಪಡಿಸಿದೆ. ಇದರ 6GB + 128GB ರೂಪಾಂತರದ ಬೆಲೆ 24,999 ರೂ. ಈ ಫೋನ್‌ ಇದೇ ಜುಲೈ 4 ರಿಂದ ಪ್ರಾರಂಭವಾಗುವ ಅಮೆಜಾನ್‌ ಪ್ರೈಮ್ ಡೇ ಮಾರಾಟದಲ್ಲಿ ಭಾಗಿಯಾಗಲಿದೆ. ಇದು 1,000 ರೂ. ರಿಯಾಯಿತಿಯೊಂದಿಗೆ ಲಭ್ಯವಿದೆ. ಜೊತೆಗೆ ಎಸ್‌ಬಿಐ ಮತ್ತು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು 2,000 ರೂ. ರಿಯಾಯಿತಿಯನ್ನು ನೀಡುತ್ತಿದ್ದಾರೆ. ಅಂದರೆ ಇದನ್ನು 19,999 ರೂ. ಗಳ ಆರಂಭಿಕ ಬೆಲೆಗೆ ಖರೀದಿಸಬಹುದಾಗಿದೆ. ಇದಕ್ಕೆ ಯಾವುದೇ ವೆಚ್ಚವಿಲ್ಲದ ಇಎಂಐ ಸೌಲಭ್ಯವಿರುವುದು ವಿಶೇಷವಾಗಿದೆ. ಕಂಪನಿಯು ಈ ಫೋನ್‌ ಅನ್ನು ಫ್ರೆಶ್‌ ಮಿಂಟ್‌ ಮತ್ತು ಮಿಡ್‌ನೈಟ್‌ ಗ್ರೀನ್‌ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾದ ಅವಕಾಶವನ್ನುನೀಡಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.