ಸಂಪತ್ತಿನ ಸಂಕೇತ ಆನೆ: ಗಜರಾಜನ ಸೊಂಡಿಲು ಹೇಗಿದ್ದರೆ ಮನೆಗೆ ಶುಭ? ವಾಸ್ತು ಸಲಹೆ ಹೀಗಿದೆ

Vastu Tips: ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರದಲ್ಲಿಯೂ ಬಹಳಷ್ಟು ನಂಬಿಕೆಯಿದೆ. ವಾಸ ಸ್ಥಾನಕ್ಕೆ ಸಂಬಂಧಿಸಿದ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಪ್ರತಿಯೊಂದು ವಸ್ತುವು ನಮ್ಮ ಜೀವನದ ಮೇಲೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಕೆಲವು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಹೇಗೆ ಧನಾತ್ಮಕ ಅಂಶಗಳು ಹೆಚ್ಚಾಗುತ್ತವೆಯೋ ಅದೇ ರೀತಿ ಕೆಲವು ವಸ್ತುಗಳಿಂದ ಕೆಟ್ಟ ಪರಿಣಾಮವೂ ಉಂಟಾಗುತ್ತದೆ.

ಅದಕ್ಕಾಗಿ ಸರಿಯಾದ ವಸ್ತುಗಳನ್ನು ನಿರ್ದಿಷ್ಟ ಜಾಗದಲ್ಲಿಡುವುದರಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತವೆ ಎಂದು ಶಾಸ್ತ್ರ ಹೇಳುತ್ತದೆ. ಆಮೆ, ಪ್ರತಿಮೆ, ಚಿತ್ರಪಟ ಹೀಗೆ ಮನೆಯಲ್ಲಿ ಹಲವಾರು ವಸ್ತುಗಳನ್ನು ಇಟ್ಟುಕೊಳ್ಳಲಾಗುತ್ತದೆ.

ಆದರೆ ಪ್ರಾಚೀನ ಕಾಲದಿಂದಲೂ ಪ್ರಭಾವ ಶಾಲಿ ಮತ್ತು ಶುಭ ಚಿಹ್ನೆಯಾಗಿ ಆನೆಯನ್ನು ಇಟ್ಟುಕೊಳ್ಳಲಾಗುತ್ತದೆ. ಹಿಂದಿನ ಕಾಲದಿಂದಲೂ ಆನೆಯನ್ನು ಸಂಪತ್ತು, ಶಕ್ತಿ ಮತ್ತು ಬುದ್ಧಿವಂತಿಕೆ ಪ್ರತೀಕ ಎಂದು ಪರಿಗಣಿಸಲಾಗಿದೆ.

ಮನೆ ಅಥವಾ ಕಚೇರಿಯಲ್ಲಿ ಆನೆಯ ಪ್ರತಿಮೆಯನ್ನು ಇಟ್ಟುಕೊಳ್ಳುವುದು ಪ್ರಗತಿಯ ಸಂಕೇತವೆಂದು ಹೇಳಲಾಗುತ್ತದೆ. ಇದು ಜೀವನದಲ್ಲಿ ಸಮತೋಲನವನ್ನು ಕಾಪಾಡುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನು ತರುತ್ತದೆ.

ಆದರೆ ಆನೆಯ ಪ್ರತಿಮೆಯಲ್ಲಿ ಹಲವು ವಿಧಗಳಿವೆ. ಸೊಂಡಿಲು ಮೇಲ್ಮುಖವಾಗಿರುವ ಆನೆ, ಕೆಳಮುಖವಾಗಿರುವ ಆನೆ, ಕುಳಿತಿರುವ ಆನೆ ಹೀಗೆ ಹಲವು ವಿಧಗಳಿವೆ. ಹಾಗಾದರೆ ಯಾವ ರೀತಿಯ ಆನೆಯ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ವಾಸ್ತು ಪ್ರಕಾರ ಸರಿಯಾಗಿದೆ ಎಂದು ತಿಳಿಯೋಣ.

ಇದನ್ನೂ ಓದಿ: ಹೊಸ ವರ್ಷದಲ್ಲಿ ನಿಮ್ಮ ಅದೃಷ್ಟ ಬದಲಿಸಲಿವೆ 4 ಸಸ್ಯಗಳು: ಈ ದಿಕ್ಕಿನಲ್ಲಿ ನೆಡುವುದನ್ನು ಮಾತ್ರ ಮರೆಯಬೇಡಿ

  • ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರದಲ್ಲಿ ಜೋಡಿ ಆನೆ ಪ್ರತಿಮೆಗಳನ್ನು ಇರಿಸಿದರೆ ಅದು ಮನೆಯ ರಕ್ಷಣೆಯ ಕಾರ್ಯವನ್ನು ನಿರ್ವಹಿಸುತ್ತದೆ. ಆದರೆ ಸೊಂಡಿಲುಗಳು ಮೇಲಕ್ಕೆತ್ತಿರಬೇಕು. ಮನೆಯ ಮುಂಬಾಗಿಲಿಗೆ ಮುಖ ಮಾಡಿರಬೇಕು. ಇದರಿಂದ ಸಂಪತ್ತು, ಅದೃಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ.
  • ವಾಸ್ತು ಪ್ರಕಾರ ದಿಕ್ಕುಗಳು ಮಹತ್ವದ ಪಾತ್ರವಹಿಸುತ್ತವೆ. ಮನೆಯ ದಕ್ಷಿಣ ದಿಕ್ಕಿನಲ್ಲಿ ಆನೆಯ ಪ್ರತಿಮೆಯನ್ನು ಇಡುವುದರಿಂದ ಹೆಚ್ಚು ಲಾಭ ಸಿಗುತ್ತದೆ. ಇದು ಮಂಗಳ ಗ್ರಹದ ಶುಭ ಪ್ರಭಾವವನ್ನು ಹೆಚ್ಚಿಸುತ್ತದೆ. ಆಸ್ತಿ, ಭೂಮಿ ಮತ್ತು ಹೂಡಿಕೆ ವಿಷಯದಲ್ಲಿ ಲಾಭವನ್ನು ಹೆಚ್ಚಿಸುತ್ತದೆ.
  • ಆನೆಯ ಪ್ರತಿಮೆಯನ್ನು ಇಟ್ಟುಕೊಳ್ಳುವುದರಿಂದ ಗ್ರಹಗತಿಗಳ ದೋಷವೂ ನಿವಾರಣೆಯಾಗುತ್ತದೆ. ಮನೆಯಲ್ಲಿ ಬೆಳ್ಳಿ ಅಥವಾ ಹಿತ್ತಾಳೆಯ ಆನೆ ಇಡುವುದರಿಂದ ರಾಹು ದೋಷ ದೂರವಾಗಿ ಮಾನಸಿಕ ನೆಮ್ಮದಿ ಸಿಗುತ್ತದೆ.
  • ಆನೆಯ ಪ್ರತಿಮೆ ಖರೀದಿಸುವಾಗ ಅದರ ಸೊಂಡಿಲಿಗೆ ಹೆಚ್ಚು ಮಹತ್ವ ನೀಡಬೇಕು.ಸೊಂಡಿಲು ಮೇಲ್ಮುಖವಾಗಿರುವ ಆನೆಯ ಪ್ರತಿಮೆ ಹೆಚ್ಚು ಶುಭಕರವಾಗಿದ್ದು ಗೆಲುವು, ಯಶಸ್ಸು ಮತ್ತು ಪ್ರಗತಿಯ ಸಂಕೇತವಾಗಿದೆ.
  • ಅದೇ ರೀತಿ ಸೊಂಡಿಲು ಕೆಳಮುಖವಾಗಿರುವ ಪ್ರತಿಮೆಯು ತಾಳ್ಮೆ ಮತ್ತು ಸ್ಥಿರ ಮನಸ್ಸನ್ನು ಸೂಚಿಸುತ್ತದೆ.
  • ಆನೆಯ ಪ್ರತಿಮೆ ಖರೀದಿಸುವಾಗ ಹಿತ್ತಾಳೆ, ಬೆಳ್ಳಿ, ತಾಮ್ರ ಅಥವಾ ಕಲ್ಲಿನಿಂದ ಮಾಡಿದ ಪ್ರತಿಮೆ ಅತ್ಯುತ್ತಮವೆಂದು ವಾಸ್ತು ಹೇಳುತ್ತದೆ. ಆದರೆ ಮುರಿದ ಪ್ರತಿಮೆಯನ್ನು ಎಂದಿಗೂ ಮನೆಯಲ್ಲಿ ಇಟ್ಟುಕೊಳ್ಳಬಾರದು ಎಂದು ಹೇಳಲಾಗಿದೆ. ಇದರಿಂದ ವಾಸ್ತು ದೋಷ ಉಂಟಾಗುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories