ತೆಕ್ಕಟ್ಟೆ : ಆನ್ಲೈನ್ ಸರ್ವೀಸ್ ಸೆಂಟರ್ನಲ್ಲಿ ಅಗ್ನಿ ಅವಘಡ : ಲಕ್ಷಾಂತರ ಮೌಲ್ಯದ ವಸ್ತು ಸುಟ್ಟು ಭಸ್ಮ
ಶಾರ್ಟ್ ಸರ್ಕ್ಯೂಟ್ನಿಂದಾಗಿ ಆನ್ಲೈನ್ ಸರ್ವೀಸ್ ಸೆಂಟರ್ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆಯು ಉಡುಪಿ ಜಿಲ್ಲೆ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ಕಣ್ಣುಕೆರೆ ಎಂಬಲ್ಲಿ ಸಂಭವಿಸಿದೆ. ಅಗ್ನಿ ಅವಘಡದಿಂದಾಗಿ 6 ಲಕ್ಷ ರೂಪಾಯಿಗಳಿಗೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ.
ಆಶ್ಲೇಷ ಆನ್ಲೈನ್ ಸರ್ವೀಸ್ ಸೆಂಟರ್ನಲ್ಲಿ ಸೋಮವಾರ ತಡರಾತ್ರಿ ಈ ಅಗ್ನಿ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಅಂಗಡಿಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಅಂಗಡಿ ಮಾಲೀಕ ಫಣಿರಾಜ ಎಂಬವರು ರಾತ್ರಿ 10 ಗಂಟೆ ವೇಳೆಗೆ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಇದಾದ ಬಳಿಕ ಈ ದುರಂತ ಸಂಭವಿಸಿದೆ.
ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಆನ್ಲೈನ್ ಸರ್ವೀಸ್ ಸೆಂಟರ್ನಲ್ಲಿದ್ದ ಕಂಪ್ಯೂಟರ್, ಪ್ರಿಂಟರ್, ಸ್ಟೇಷನರಿ ವಸ್ತುಗಳು, ಇನ್ವರ್ಟರ್ ಬ್ಯಾಟರಿ, ಕುರ್ಚಿ ಹಾಗೂ ಮೇಜು ಸೇರಿದಂತೆ ಎಲ್ಲಾ ಪೀಠೋಪಕರಣಗಳು ಸುಟ್ಟು ಕರಕಲಾಗಿದೆ.
ಇದನ್ನೂ ಓದಿ: ನಟಿ ರಚಿತಾ ರಾಮ್ ಚಾಲಕನಿಂದ ಕರ್ತವ್ಯನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ
ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಸ್ಥಳೀಯ ಯುವಕರು ನೆರವಿಗೆ ಧಾವಿಸಿದ್ದಾರೆ. ಅಗ್ನಿಶಾಮಕ ದಳಕ್ಕೆ ಫೋನಾಯಿಸಲಾಗಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಈ ಘಟನೆಯಲ್ಲಿ ಯಾವುದೇ ಸಾವು – ನೋವು ಸಂಭವಿಸಿಲ್ಲ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



