ಮಾರ್ಚ್ 3ಕ್ಕೆ ಈ ವರ್ಷದ ಮೊದಲ ಪೂರ್ಣ ಚಂದ್ರಗ್ರಹಣ: ಆಕಾಶದಲ್ಲಿ ಕಾಣಿಸಲಿದೆ ‘ಬ್ಲಡ್ ಮೂನ್’ ಚಮತ್ಕಾರ!
Blood Moon | Lunar Eclipse in 2026 | Blood Moon timings in India: ಖಗೋಳ ಆಸಕ್ತರಿಗೆ 2026ರ ಆರಂಭದಲ್ಲೇ ಒಂದು ಅದ್ಭುತ ಸುದ್ಧಿ ಸಿಕ್ಕಿದೆ. ಬರುವ ಮಾರ್ಚ್ 3ರಂದು ಈ ವರ್ಷದ ಮೊದಲ ಪೂರ್ಣ ಚಂದ್ರಗ್ರಹಣ ಸಂಭವಿಸಲಿದ್ದು, ಅಂದು ಆಕಾಶದಲ್ಲಿ ಚಂದ್ರನು ಕೆಂಪು ಮಿಶ್ರಿತ ಕಿತ್ತಳೆ ಬಣ್ಣದಲ್ಲಿ ಕಂಗೊಳಿಸಲಿದ್ದಾನೆ. ಈ ಅಪರೂಪದ ವಿದ್ಯಮಾನವನ್ನು ‘ಬ್ಲಡ್ ಮೂನ್’ (Blood Moon) ಎಂದು ಕರೆಯಲಾಗುತ್ತದೆ.
ಏನಿದು ಬ್ಲಡ್ ಮೂನ್?
ನಾಸಾದ (NASA) ವಿಜ್ಞಾನಿಗಳ ಪ್ರಕಾರ, ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳರೇಖೆಯಲ್ಲಿ ಬಂದಾಗ ಭೂಮಿಯ ದಟ್ಟವಾದ ನೆರಳು (Umbra) ಚಂದ್ರನ ಮೇಲೆ ಬೀಳುತ್ತದೆ. ಈ ಸಮಯದಲ್ಲಿ ಸೂರ್ಯನ ಕಿರಣಗಳು ಭೂಮಿಯ ವಾತಾವರಣದ ಮೂಲಕ ಹಾದು ಚಂದ್ರನ ಮೇಲೆ ಬಿದ್ದಾಗ, ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸುತ್ತಾನೆ. ಇದು ಪ್ರಪಂಚದಾದ್ಯಂತದ ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಪ್ರತಿಬಿಂಬ ಚಂದ್ರನ ಮೇಲೆ ಬಿದ್ದಂತೆ ಭಾಸವಾಗುತ್ತದೆ.
ಗ್ರಹಣದ ಪ್ರಮುಖ ಸಮಯ
- ಗ್ರಹಣದ ಆರಂಭ: ಮುಂಜಾನೆ 1:44ಕ್ಕೆ ಚಂದ್ರನು ಭೂಮಿಯ ಮಸುಕಾದ ನೆರಳನ್ನು ಪ್ರವೇಶಿಸುತ್ತಾನೆ.
- ಭಾಗಶಃ ಗ್ರಹಣ: ಮುಂಜಾನೆ 2:50ಕ್ಕೆ ಚಂದ್ರನ ಒಂದು ಭಾಗ ಕಪ್ಪಾಗಲು ಶುರುವಾಗುತ್ತದೆ.
- ಪೂರ್ಣ ಗ್ರಹಣ (Totality): ಮುಂಜಾನೆ 4:04ಕ್ಕೆ ಚಂದ್ರ ಸಂಪೂರ್ಣವಾಗಿ ಕೆಂಪು ಬಣ್ಣಕ್ಕೆ ತಿರುಗುತ್ತಾನೆ.
- ಗ್ರಹಣದ ಅಂತ್ಯ: ಮುಂಜಾನೆ 5:03ಕ್ಕೆ ಪೂರ್ಣ ಗ್ರಹಣ ಮುಕ್ತಾಯವಾಗಿ, ಬೆಳಿಗ್ಗೆ 7:23ಕ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಎಲ್ಲೆಲ್ಲಿ ಕಾಣಿಸಲಿದೆ?
ಈ ಬಾರಿಯ ಚಂದ್ರಗ್ರಹಣವು ಉತ್ತರ ಮತ್ತು ಮಧ್ಯ ಅಮೇರಿಕಾ, ಪೆಸಿಫಿಕ್ ಸಾಗರ ಪ್ರದೇಶ, ಆಸ್ಟ್ರೇಲಿಯಾ ಮತ್ತು ಪೂರ್ವ ಏಷ್ಯಾದಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ. ಅಮೇರಿಕಾದ ಯುಟಾ (Utah) ಪ್ರಾಂತ್ಯದ ಜನರಿಗೆ ಇದು ಅತ್ಯುತ್ತಮವಾಗಿ ಕಾಣಿಸಲಿದ್ದು, ಅಲ್ಲಿನ ನಿವಾಸಿಗಳು ಮುಂಜಾನೆಯ ಅವಧಿಯಲ್ಲಿ ಈ ದೃಶ್ಯವನ್ನು ಸವಿಯಬಹುದು. ಆದರೆ, ಯುರೋಪ್ ಮತ್ತು ಆಫ್ರಿಕಾ ಖಂಡಗಳ ಜನರಿಗೆ ಈ ಗ್ರಹಣ ವೀಕ್ಷಿಸಲು ಸಾಧ್ಯವಾಗುವುದಿಲ್ಲ.
ವೀಕ್ಷಕರಿಗೆ ಸೂಚನೆ:
ಸೂರ್ಯಗ್ರಹಣದಂತೆ ಚಂದ್ರಗ್ರಹಣ ವೀಕ್ಷಿಸಲು ಯಾವುದೇ ವಿಶೇಷ ಕನ್ನಡಕಗಳ ಅಗತ್ಯವಿಲ್ಲ. ಇದನ್ನು ಬರಿಗಣ್ಣಿನಿಂದಲೇ ಸುರಕ್ಷಿತವಾಗಿ ನೋಡಬಹುದು. ನಗರದ ದೀಪಗಳಿಂದ ದೂರವಿರುವ ಕತ್ತಲೆ ಪ್ರದೇಶದಲ್ಲಿ ನಿಂತು ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್ ಬಳಸಿದರೆ ಈ ರಕ್ತಚಂದಿರನ ಸೌಂದರ್ಯವನ್ನು ಮತ್ತಷ್ಟು ಹತ್ತಿರದಿಂದ ಆನಂದಿಸಬಹುದು ಎಂದು ನಾಸಾ ಸಲಹೆ ನೀಡಿದೆ.



