5 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ

Shirahatti BJP MLA Dr Chandru Lamani | Lokayukta Raid: ಗದಗ: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಸಮರ ಮುಂದುವರೆದಿದ್ದು, ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರು ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲಕ್ಷ್ಮೇಶ್ವರದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಶಾಸಕರೊಂದಿಗೆ ಅವರ ಇಬ್ಬರು ಆಪ್ತ ಸಹಾಯಕರು (PA) ಕೂಡ ಸಿಕ್ಕಿಬಿದ್ದಿದ್ದಾರೆ.

ಘಟನೆಯ ಹಿನ್ನೆಲೆ:

ಸಣ್ಣ ನೀರಾವರಿ ಇಲಾಖೆಯ ಕ್ಲಾಸ್ 1 ಗುತ್ತಿಗೆದಾರ ವಿಜಯ್ ಎಂಬುವವರಿಗೆ ರಸ್ತೆ ಬದಿಯ ತಡೆಗೋಡೆ ನಿರ್ಮಾಣದ ಕಾಮಗಾರಿ ವಹಿಸಲು ಶಾಸಕರು ಕಮಿಷನ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಒಟ್ಟು 11 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಡಲಾಗಿದ್ದು, ಮುಂಗಡವಾಗಿ 5 ಲಕ್ಷ ರೂ. ಸ್ವೀಕರಿಸುವಾಗ ಶಾಸಕ ಚಂದ್ರು ಲಮಾಣಿ, ಅವರ ಪಿಎಗಳಾದ ಮಂಜುನಾಥ್ ಮತ್ತು ಗುರು ಅವರನ್ನು ಲೋಕಾಯುಕ್ತ ಎಸ್​ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ವಶಕ್ಕೆ ಪಡೆದಿದೆ.

ಯಾರು ಈ ಸ್ನೇಹಮಯಿ ಕೃಷ್ಣ? ಮುಡಾ ದೂರುದಾರನ ಬಂಧನಕ್ಕೆ ಕಾರಣವಾದ ಆ ಆಡಿಯೋ ರಹಸ್ಯವೇನು?

ಆಸ್ಪತ್ರೆ ಮೇಲೂ ದಾಳಿ:

ಲಂಚದ ಹಣ ಪಡೆಯುತ್ತಿದ್ದ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಶಾಸಕರಿಗೆ ಸೇರಿದ ಬಾಲಾಜಿ ಆಸ್ಪತ್ರೆ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಶಾಸಕರು ಮತ್ತು ಅವರ ಸಹಚರರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

  • ಗುತ್ತಿಗೆದಾರರ ಸಂಘದ ಸಂತಸ: ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್, “ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ. ಶಾಸಕರೇ ಇಂತಹ ಕೃತ್ಯಕ್ಕೆ ಇಳಿಯಬಾರದಿತ್ತು. ನಾವು ಮಾಡುತ್ತಿದ್ದ ಕಮಿಷನ್ ಆರೋಪಕ್ಕೆ ಈ ಘಟನೆ ಒಂದು ದೊಡ್ಡ ಸಾಕ್ಷಿಯಾಗಿದೆ” ಎಂದಿದ್ದಾರೆ.
  • ಬಿಜೆಪಿ ಪ್ರತಿಕ್ರಿಯೆ: ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, “ಘಟನೆಯ ಸತ್ಯಾಸತ್ಯತೆ ತಿಳಿಯಬೇಕಿದೆ. ನಮ್ಮ ಪಕ್ಷ ಲಂಚ ಪಡೆಯಲು ಎಂದೂ ಉತ್ತೇಜನ ನೀಡುವುದಿಲ್ಲ, ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ” ಎಂದಿದ್ದಾರೆ.

ಶಾಸಕರೊಬ್ಬರು ಲಂಚ ಪ್ರಕರಣದಲ್ಲಿ ನೇರವಾಗಿ ಸಿಕ್ಕಿಬಿದ್ದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಭ್ರಷ್ಟಾಚಾರದ ವಿರುದ್ಧದ ಈ ಕಾರ್ಯಾಚರಣೆ ಜನಸಾಮಾನ್ಯರಲ್ಲಿ ಲೋಕಾಯುಕ್ತದ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories