ಸರ್ಕಾರಿ ಶಾಲೆಗಳ ರಕ್ಷಣೆಗೆ ಹೊಸ ಬಿಲ್​ : 12 ವರ್ಷ ಶಾಲೆ, ಕಾಲೇಜು ಇದ್ದ ಭೂಮಿ ಸರ್ಕಾರಕ್ಕೆ

12 ವರ್ಷಗಳಿಂದ ಯಾವುದೇ ಸ್ಥಿರಾಸ್ತಿಗಳ ಮೇಲೆ ಸರ್ಕಾರಿ ಶಾಲೆಗಳು ಹಾಗೂ ಕಟ್ಟಡಗಳು ಕಾರ್ಯನಿರ್ವಹಿಸುತ್ತಾ ಇದ್ದರೆ ಆ ಭೂಮಿಯು ಸರ್ಕಾರದ ವಶವಾಗಲಿದೆ.

ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳನ್ನು ಹೊಂದಿರುವ ಭೂಮಿ ಸರ್ಕಾರದ ವಶವಾಗಿಸುವ ಸಂಬಂಧ ವಿಧಾನಸಭೆಯಲ್ಲಿ ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ ಭೂಮಿ ವಿಧೇಯಕ ಮಂಡಿಸಲಾಗಿದೆ.

ಈ ಮಸೂದೆಯ ಪ್ರಕಾರ 12 ವರ್ಷಗಳಿಂದ ಯಾವುದೇ ಸ್ಥಿರಾಸ್ತಿಗಳ ಮೇಲೆ ಸರ್ಕಾರಿ ಶಾಲೆಗಳು ಹಾಗೂ ಕಟ್ಟಡಗಳು ಕಾರ್ಯನಿರ್ವಹಿಸುತ್ತಾ ಇದ್ದರೆ ಆ ಭೂಮಿಯು ಸರ್ಕಾರದ ವಶವಾಗಲಿದೆ.

ಈ ಭೂಮಿಯು ಉತ್ತರಾಧಿಕಾರಿಗಳು ಹಾಗೂ ಋಣಭಾರಗಳಿಂದ ಮುಕ್ತಗೊಳ್ಳಲಿದೆ. ದಾನಿ ನಿಧನರಾಗಿದ್ದರೂ ಸಹ ಆ ಭೂಮಿಯೂ ಸರ್ಕಾರದ ವಶವೇ ಆಗಿರಲಿದೆ. 1982ರ ಆಸ್ತಿ ವರ್ಗಾವಣೆ ನಿಯಮ ಈ ಭೂಮಿಗೆ ಮಾನ್ಯವಾಗುವುದಿಲ್ಲ ಎಂದು ಈ ಮಸೂದೆ ಹೇಳಿದೆ.

ಯಾವುದೇ ಸ್ಥಿರಾಸ್ತಿಯನ್ನು ಸರ್ಕಾರಿ ಶಾಲೆಗೆ ನೋಂದಾವಣಿ ಮಾಡಿರುವ ದಾಸ್ತಾವೇಜು ಲಭ್ಯವಿಲ್ಲದಿದ್ದರೂ ಸಹ, ಉಯಿಲು ಮಾಡಿರುವ ಅಥವಾ ಮಾಡದಿರುವ ದಾನಿಯ ಮರಣ ಹಾಗೂ ಸ್ವತ್ತು ವರ್ಗಾವಣೆ ಅಧಿನಿಯಮ 1882, ಭಾರತೀಯ ಉತ್ತರಾಧಿಕಾರ ಅಧಿನಿಯಮ 1925ರ ಉಪಬಂಧಗಳಿಗೆ ಇದು ಪರಿಣಾಮ ಬೀರುವುದಿಲ್ಲ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಶಾಲಾ ಶಿಕ್ಷಕರಿಗೆ ಹೊಸದೊಂದು ಹೊಣೆ : ಮೊಟ್ಟೆ ಬೇಯಿಸುವುದು ಇನ್ನು ಗುರುಗಳ ಜವಾಬ್ದಾರಿ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಈ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ರಾಜ್ಯದಲ್ಲಿ ಒಟ್ಟೂ 48 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳಿದ್ದು, ಇವುಗಳಲ್ಲಿ 13 ಸಾವಿರಕ್ಕೂ ಅಧಿಕ ಶಾಲಾ, ಕಾಲೇಜುಗಳು ಸರ್ಕಾರದ ಭೂಮಿ ಮೇಲೆ ನಿರ್ಮಾಣಗೊಂಡಿಲ್ಲ. ದಾನವಾಗಿ ಪಡೆದ ಜಾಗದಲ್ಲಿ ನಿರ್ಮಾಣಗೊಂಡ ಈ ಶಾಲೆಗಳ ಭೂಮಿಗೆ ದಾಖಲೆಯೂ ಇಲ್ಲ.

ಹೀಗಾಗಿ ಅಂತಹ ಕುಟುಂಬ ಸದಸ್ಯರು ಶಾಲೆ ಇರುವ ಜಾಗವನ್ನು ಪುನಃ ಪಡೆಯಲು ಕಾನೂನು ಹೋರಾಟ ನಡೆಸುತ್ತಿದ್ದು, 13 ಸಾವಿರ ಶಾಲೆ, ಕಾಲೇಜುಗಳ ಭವಿಷ್ಯ ಏನಾಗಲಿದೆ ಎಂಬ ಚಿಂತೆ ಕೂಡ ಎದುರಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »