ಏಪ್ರಿಲ್ 1 ರಿಂದ ಬದಲಾಗಲಿವೆ ಈ 6 ಆರ್ಥಿಕ ನಿಯಮಗಳು : ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ

ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜಾರಿಗೆ ತಂದಿರುವ ಹೊಸ ನಿಯಮಗಳು ಸಾಮಾನ್ಯ ಜನರ ದೈನಂದಿನ ಬದುಕಿನಲ್ಲಿ ಮಹತ್ವದ ಬದಲಾವಣೆ ತರಲಿವೆ.

ಇಂದಿನಿಂದ (ಏಪ್ರಿಲ್ 1, 2026) ಹೊಸ ಹಣಕಾಸು ವರ್ಷ 2026-27 ಆರಂಭವಾಗುತ್ತಿದೆ. ಇದರೊಂದಿಗೆ ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜಾರಿಗೆ ತಂದಿರುವ ಹೊಸ ನಿಯಮಗಳು ಸಾಮಾನ್ಯ ಜನರ ದೈನಂದಿನ ಬದುಕಿನಲ್ಲಿ ಮಹತ್ವದ ಬದಲಾವಣೆ ತರಲಿವೆ. ಆದಾಯ ತೆರಿಗೆಯಿಂದ ಹಿಡಿದು ಡಿಜಿಟಲ್ ಪಾವತಿಯವರೆಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.

1. ಹೊಸ ಆದಾಯ ತೆರಿಗೆ ಕಾಯ್ದೆ 2025 ಜಾರಿ

ದಶಕಗಳ ಹಳೆಯದಾದ 1961ರ ಆದಾಯ ತೆರಿಗೆ ಕಾಯ್ದೆಯ ಬದಲಿಗೆ ‘ಆದಾಯ ತೆರಿಗೆ ಕಾಯ್ದೆ 2025’ ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಈ ಹೊಸ ಕಾಯ್ದೆಯು ತೆರಿಗೆ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಪಾರದರ್ಶಕತೆ ಹೆಚ್ಚಿಸುವ ಗುರಿ ಹೊಂದಿದೆ. ಇನ್ನು ಮುಂದೆ ತೆರಿಗೆ ಸಲ್ಲಿಕೆಯಲ್ಲಿ ‘ಅಸೆಸ್‌ಮೆಂಟ್ ಇಯರ್’ ಎಂಬ ಗೊಂದಲ ಇರುವುದಿಲ್ಲ, ಬದಲಿಗೆ ನೇರವಾಗಿ ‘ಟ್ಯಾಕ್ಸ್ ಇಯರ್’ (Tax Year) ಎಂದು ಕರೆಯಲಾಗುತ್ತದೆ.

2. ಡಿಜಿಟಲ್ ಪಾವತಿಗೆ ‘ಟೂ-ಫ್ಯಾಕ್ಟರ್ ಅಥೆಂಟಿಕೇಶನ್’ ಕಡ್ಡಾಯ

ಆನ್‌ಲೈನ್ ವಂಚನೆಗಳನ್ನು ತಡೆಗಟ್ಟಲು ಆರ್‌ಬಿಐ ಹೊಸ ಸುರಕ್ಷತಾ ನಿಯಮ ತಂದಿದೆ. ಇಂದಿನಿಂದ ಯುಪಿಐ (UPI), ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಮಾಡುವ ಎಲ್ಲಾ ಪಾವತಿಗಳಿಗೆ Two-Factor Authentication (2FA) ಕಡ್ಡಾಯ. ಅಂದರೆ ಕೇವಲ ಪಿನ್ (PIN) ಮಾತ್ರವಲ್ಲದೆ, ಬಯೋಮೆಟ್ರಿಕ್ (ಬೆರಳಚ್ಚು ಅಥವಾ ಫೇಸ್ ಐಡಿ) ಅಥವಾ ಒಟಿಪಿ (OTP) ಮೂಲಕವೂ ಪಾವತಿಯನ್ನು ದೃಢೀಕರಿಸುವುದು ಅನಿವಾರ್ಯವಾಗಲಿದೆ.

3. ಎಟಿಎಂ ಮತ್ತು ಬ್ಯಾಂಕಿಂಗ್ ಶುಲ್ಕ ಏರಿಕೆ

HDFC ಬ್ಯಾಂಕ್: ಎಟಿಎಂನಲ್ಲಿ ಯುಪಿಐ ಬಳಸಿ ಹಣ ತೆಗೆಯುವುದನ್ನು (Cardless Cash) ಸಾಮಾನ್ಯ ಎಟಿಎಂ ವ್ಯವಹಾರವೆಂದೇ ಪರಿಗಣಿಸಲಾಗುತ್ತದೆ. ಉಚಿತ ಮಿತಿ ಮುಗಿದ ನಂತರ ಪ್ರತಿ ವ್ಯವಹಾರಕ್ಕೆ ₹23 ಮತ್ತು ಟ್ಯಾಕ್ಸ್ ಪಾವತಿಸಬೇಕಾಗುತ್ತದೆ.

PNB ಬ್ಯಾಂಕ್: ಆಯ್ದ ಡೆಬಿಟ್ ಕಾರ್ಡ್‌ಗಳ (Platinum, Gold) ದೈನಂದಿನ ಹಣ ಹಿಂತೆಗೆತದ ಮಿತಿಯನ್ನು ₹1 ಲಕ್ಷದಿಂದ ₹50 ಸಾವಿರಕ್ಕೆ ಕಡಿತಗೊಳಿಸಲಾಗಿದೆ.

Also Read : 50-30-20 ರೂಲ್ಸ್‌ : ಈ 3 ನಿಯಮ ಪಾಲಿಸಿದ್ರೆ ನಿಮ್ಮ ಕೈಯಲ್ಲಿ ಉಳಿಯುತ್ತೆ ಲಕ್ಷಾಂತರ ರೂಪಾಯಿ ಹಣ

4. ಪ್ಯಾನ್ (PAN) ಕಾರ್ಡ್ ಅರ್ಜಿಗೆ ಹೊಸ ನಿಯಮ

ಇಂದಿನಿಂದ ಹೊಸ ಪ್ಯಾನ್ ಕಾರ್ಡ್ ಪಡೆಯಲು ಕೇವಲ ಆಧಾರ್ ಕಾರ್ಡ್ ಸಾಲದು. ಅರ್ಜಿಯೊಂದಿಗೆ ಓಟರ್ ಐಡಿ, ಪಾಸ್‌ಪೋರ್ಟ್ ಅಥವಾ ಜನನ ಪ್ರಮಾಣ ಪತ್ರದಂತಹ ಹೆಚ್ಚುವರಿ ದಾಖಲೆಗಳನ್ನು ನೀಡಬೇಕು. ಅಲ್ಲದೆ, ಹಳೆಯ 49A ಫಾರ್ಮ್ ಬದಲಿಗೆ ಈಗ ‘ಫಾರ್ಮ್ 93’ ಬಳಸಿ ಅರ್ಜಿ ಸಲ್ಲಿಸಬೇಕಾಗುತ್ತದೆ.

5. ಷೇರು ಮಾರುಕಟ್ಟೆ ಮತ್ತು ಎಸ್‌ಜಿಬಿ (SGB) ಮೇಲೆ ತೆರಿಗೆ

ಎಸ್‌ಟಿಟಿ ಏರಿಕೆ : ಫ್ಯೂಚರ್ಸ್ ಹಾಗೂ ಆಪ್ಷನ್ಸ್ (F&O) ವ್ಯವಹಾರದ ಮೇಲೆ ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ ಹೆಚ್ಚಳ ಆಗಲಿದೆ.. ಜೊತೆಗೆ ಟ್ರೇಡರ್ಸ್‌ಗಳ ವೆಚ್ಚ ಏರಿಕೆಯಾಗಲಿದೆ.

SGB ಟ್ಯಾಕ್ಸ್: ಸಾವರಿನ್ ಗೋಲ್ಡ್ ಬಾಂಡ್ (SGB) ಮೆಚ್ಯೂರಿಟಿ ಅವಧಿಯಲ್ಲಿ ಸಿಗುವ ಲಾಭದ ಮೇಲಿನ ತೆರಿಗೆ ವಿನಾಯಿತಿ ಇನ್ನು ಮುಂದೆ ಕೇವಲ ಮೂಲ ಹೂಡಿಕೆದಾರರಿಗೆ ಮಾತ್ರ ಸಿಗಲಿದೆ. ಮಾರುಕಟ್ಟೆಯಲ್ಲಿ ಬೇರೆಯವರಿಂದ ಬಾಂಡ್ ಖರೀದಿಸಿದವರು ಲಾಭದ ಮೇಲೆ ತೆರಿಗೆ ಪಾವತಿಸಬೇಕು.

Also Read : ಷೇರು ಮಾರುಕಟ್ಟೆಯಲ್ಲಿ ಭಾರಿ ಜಿಗಿತ : ಇನ್ಫೋಸಿಸ್ ಮತ್ತು ಎಲ್‌ಆಂಡ್‌ಟಿ ಷೇರು ಖರೀದಿಸಲು ಇದು ಸಕಾಲವೇ? ತಜ್ಞರ ಸಲಹೆ 

6. ಫಾಸ್ಟ್ಯಾಗ್ (FASTag) ವಾರ್ಷಿಕ ಪಾಸ್ ಬೆಲೆ ಏರಿಕೆ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಖಾಸಗಿ ವಾಹನಗಳ ಫಾಸ್ಟ್ಯಾಗ್ ವಾರ್ಷಿಕ ಪಾಸ್ ದರವನ್ನು ಎನ್‌ಹೆಚ್‌ಎಐ (NHAI) ಏರಿಕೆ ಮಾಡಿದೆ. ಈ ಮೊದಲು ₹3,000 ಇದ್ದ ಪಾಸ್ ದರ ಇಂದಿನಿಂದ ₹3,075 ಕ್ಕೆ ಏರಿಕೆಯಾಗಿದೆ.

ಹೊಸ ಆರ್ಥಿಕ ವರ್ಷದ ಈ ಬದಲಾವಣೆಗಳು ನಿಮ್ಮ ಹಣಕಾಸಿನ ಯೋಜನೆಗಳ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಹೂಡಿಕೆ ಅಥವಾ ಬ್ಯಾಂಕಿಂಗ್ ವ್ಯವಹಾರ ಮಾಡುವ ಮುನ್ನ ಈ ನಿಯಮಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಉತ್ತಮ.

New financial rules april 1 2026 karnataka Kannada News

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories