ರಾಜ್ಯದ ಮಹಿಳಾ ಕ್ರಿಕೆಟಿಗರಿಗೆ ಪಿಂಚಣಿ ಭಾಗ್ಯ..! ಮಾಜಿ ಸಿಂಹಿಣಿಯರಿಗೆ ಸಿಗಲಿದೆ ಮಾಸಿಕ ಪೆನ್ಶನ್
ವೆಂಕಟೇಶ್ ಪ್ರಸಾದ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಕರ್ನಾಟಕ ಕ್ರಿಕೆಟ್ ಕ್ಷೇತ್ರದಲ್ಲಿ ಅನೇಕ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಇನ್ನು ಇತಿಹಾಸದ ಪುಟ ಸೇರಲಿದೆ ಎಂದು ಅಭಿಮಾನಿಗಳು ಅಂದುಕೊಳ್ಳುವಾಗಲೇ ಸತತ ಪ್ರಯತ್ನದ ಮೂಲಕ ಐಪಿಎಲ್ ಉದ್ಘಾಟನಾ ಪಂದ್ಯವೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವಂತೆ ಮಾಡಿದ್ದಾರೆ. ಇದೇ ರೀತಿ ಇದೀಗ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಮಾಜಿ ಮಹಿಳಾ ಕ್ರಿಕೆಟ್ ಆಟಗಾರರಿಗೆ (pension for former Karnataka cricket players) ಕೆಎಸ್ಸಿಎನಿಂದ ಗುಡ್ನ್ಯೂಸ್ ಒಂದು ಹೊರಬಿದ್ದಿದೆ.
ಹೌದು..! ಕರ್ನಾಟಕ ತಂಡದಲ್ಲಿ ಆಡಿ 55 ವರ್ಷ ಮೇಲ್ಪಟ್ಟಿರುವ ಮಹಿಳಾ ಆಟಗಾರರಿಗೆ ಇನ್ಮುಂದೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ವತಿಯಿಂದ ಪಿಂಚಣಿ ಸೌಲಭ್ಯ ದೊರಕಲಿದೆ. ಆದರೆ ಬಿಸಿಸಿಐನಿಂದ ಈಗಾಗಲೇ ಪಿಂಚಣಿ ಸೌಲಭ್ಯ ಹೊಂದಿರುವವರು ಈ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ ಎಂದು ಕೆಎಸ್ಸಿಎ ತಿಳಿಸಿದೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ನಿಂದ ಕೇಳಲಾಗುವ ದಾಖಲೆಗಳನ್ನು ಸೂಕ್ತವಾಗಿ ಒದಗಿಸುವ ಮಾಜಿ ಕ್ರಿಕೆಟ್ ಆಟಗಾರ್ತಿಯರು ಈ ಪಿಂಚಣಿ ಸೌಲಭ್ಯಕ್ಕೆ ಪಾತ್ರರಾಗಲಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಮಟ್ಟದ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ಶಿಪ್ : ಬ್ರಹ್ಮಾವರದ ಅದ್ವಿತ ಗುರುಪ್ರಸಾದ್ ಶೆಟ್ಟಿಗಾರ್ ಗೆ ಚಿನ್ನದ ಪದಕ
ಇನ್ನು ಈ ವಿಚಾರವಾಗಿ ಮಾತನಾಡಿದ ಕೆಎಸ್ಸಿಎ ಕಾರ್ಯದರ್ಶಿ ಸಂತೋಷ್ ಮೆನನ್, ರಾಜ್ಯದ ಮಹಿಳಾ ಕ್ರಿಕೆಟಿಗರನ್ನು ಹುರಿದುಂಬಿಸುವ ಉದ್ದೇಶದಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ಪ್ರಸ್ತುತ ನಮ್ಮ ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್ ಹಾಗೂ ಶ್ರೇಯಾಂಕಾ ಪಟೇಲ್ ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ.ಇಂತಹ ಯುವ ಆಟಗಾರ್ತಿಯರ ಸಂಖ್ಯೆ ಮತ್ತಷ್ಟು ಹೆಚ್ಚಬೇಕು. ಕರ್ನಾಟಕ ಕ್ರಿಕೆಟ್ ಮಂಡಳಿಯು ಸದಾ ತನ್ನ ಆಟಗಾರರೊಂದಿಗೆ ಇರಲಿದೆ ಎಂಬುದನ್ನು ಸಾಬೀತುಪಡಿಸಲು ಈ ಸೌಲಭ್ಯ ಪರಿಚಯಿಸಿದ್ದೇವೆ ಎಂದಿದ್ದಾರೆ.
ಬಿಸಿಸಿಐ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಮಹಿಳಾ ಆಟಗಾರ್ತಿಯರಿಗೆ ಮಾಸಿಕ 52,000 ರೂಪಾಯಿ ಪಿಂಚಣಿ ನೀಡುತ್ತಿದೆ.25ಕ್ಕೂ ಅಧಿಕ ಪಂದ್ಯಗಳನ್ನು ಆಡಿದ ಹಾಗೂ 1993ಕ್ಕಿಂತ ಮೊದಲ ನಿವೃತ್ತರಾದ ಮಹಿಳಾ ಆಟಗಾರರು 70 ಸಾವಿರ ರೂಪಾಯಿ ಮಾಸಿಕ ಪಿಂಚಣಿ ಪಡೆಯುತ್ತಿದ್ದಾರೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ತನ್ನ ಮಾಜಿ ಮಹಿಳಾ ಕ್ರಿಕೆಟಿಗರಿಗೆ ಯಾವ ಮೊತ್ತದ ಪಿಂಚಣಿ ನೀಡುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.



