ಗ್ಯಾಸ್ ಬಳಕೆದಾರರಿಗೆ ಬಿಗಿ ನಿಯಮಗಳು! OTP ಹೇಳದಿದ್ದರೆ ಗ್ಯಾಸ್ ಸಿಗೋದಿಲ್ಲ, ಹೊಸ ಡೆಲಿವರಿ ರೂಲ್ಸ್ ಜಾರಿ
ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸರ್ಕಾರದಿಂದ ಹೊಸ ನಿಯಮಗಳು ಜಾರಿಗೆ ಬರುತ್ತಿವೆ. ಬುಕ್ಕಿಂಗ್ ಅವಧಿ, OTP ಡೆಲಿವರಿ, QR ಕೋಡ್ ಪರಿಶೀಲನೆ ಸೇರಿದಂತೆ ಹಲವು ಬದಲಾವಣೆಗಳು ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತಿವೆ.

ದೇಶದಲ್ಲಿ ಕೆಲ ಸಮಯಗಳಿಂದ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ಕಾಣಿಸಿಕೊಂಡ ಹಿನ್ನೆಲೆ, ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಗ್ಯಾಸ್ ತಲುಪಿಸಲು ಕೇಂದ್ರ ಸರ್ಕಾರ ಹಲವು ಹೊಸ ಕ್ರಮಗಳನ್ನು ಜಾರಿಗೆ ತರುತ್ತಿದೆ. ಮನೆ ಬಳಕೆಯ LPG ಸಿಲಿಂಡರ್ ಬಳಸುವವರು ಈ ಹೊಸ ನಿಯಮಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.
ಇದೀಗ ನಗರ ಪ್ರದೇಶಗಳಲ್ಲಿ ಒಂದು ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ನಂತರ ಮತ್ತೊಂದು ಬುಕ್ಕಿಂಗ್ ಮಾಡಲು ಕನಿಷ್ಠ 25 ದಿನಗಳ ಅಂತರ ಕಡ್ಡಾಯವಾಗಲಿದೆ. ಗ್ರಾಮೀಣ ಭಾಗಗಳಲ್ಲಿ ಈ ಅವಧಿಯನ್ನು 45 ದಿನಗಳವರೆಗೆ ನಿಗದಿಪಡಿಸುವ ಸಾಧ್ಯತೆ ಇದೆ. ನಿಗದಿತ ಅವಧಿಗೆ ಮುನ್ನ ಬುಕ್ ಮಾಡಲು ಪ್ರಯತ್ನಿಸಿದರೆ, ಸಿಸ್ಟಂ ಸ್ವಯಂಚಾಲಿತವಾಗಿ ಬುಕ್ಕಿಂಗ್ ತಡೆಯಲಿದೆ.
ಇನ್ನೊಂದೆಡೆ, ಗ್ಯಾಸ್ ಸಿಲಿಂಡರ್ ಡೆಲಿವರಿ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆ ತರಲಾಗಿದೆ. ಈಗ ಗ್ರಾಹಕರು ಕೇವಲ ರಸೀದಿ ತೋರಿಸಿದರೆ ಸಾಕಾಗುವುದಿಲ್ಲ. ಬುಕ್ಕಿಂಗ್ ವೇಳೆ ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನೀಡಿದ ಬಳಿಕವೇ ಸಿಲಿಂಡರ್ ಹಸ್ತಾಂತರ ಮಾಡಲಾಗುತ್ತದೆ. ಈಗಾಗಲೇ ಬಹುತೇಕ ಡೆಲಿವರಿಗಳಲ್ಲಿ ಈ ವಿಧಾನ ಯಶಸ್ವಿಯಾಗಿ ಜಾರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಣಿಜ್ಯ ಬಳಕೆಯ LPG ಸಿಲಿಂಡರ್ ದರದಲ್ಲೂ ಏರಿಕೆ ಕಂಡುಬಂದಿದೆ. ಸರ್ಕಾರಿ ತೈಲ ಕಂಪನಿಗಳು ಹಲವು ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದ್ದು, ಕೆಲವು ಕಡೆಗಳಲ್ಲಿ ದರವು ₹3,000 ಗಡಿ ದಾಟಿದೆ. ಇದರಿಂದ ಹೋಟೆಲ್, ಸಣ್ಣ ವ್ಯಾಪಾರಿಗಳು ಹಾಗೂ ವಾಣಿಜ್ಯ ಬಳಕೆದಾರರಿಗೆ ಹೆಚ್ಚುವರಿ ಹೊರೆ ಉಂಟಾಗಿದೆ.
ಸುರಕ್ಷತೆಯ ವಿಚಾರದಲ್ಲಿಯೂ ಸರ್ಕಾರ ಹೆಚ್ಚು ಗಮನ ಹರಿಸಿದೆ. ಗ್ರಾಹಕರು ಸಿಲಿಂಡರ್ ಪಡೆಯುವ ಮೊದಲು ಅದರ ಸೀಲ್, ಅವಧಿ ದಿನಾಂಕ ಹಾಗೂ QR ಕೋಡ್ ಪರಿಶೀಲನೆ ಮಾಡಬೇಕು ಎಂದು ಸೂಚಿಸಲಾಗಿದೆ. QR ಕೋಡ್ ಸ್ಕ್ಯಾನ್ ಮಾಡಿದರೆ ಸಿಲಿಂಡರ್ ತಯಾರಿಸಿದ ದಿನಾಂಕ, ಲೀಕೆಜ್ ಪರಿಶೀಲನೆ ಮಾಹಿತಿ ಹಾಗೂ ರಿಫಿಲ್ ಇತಿಹಾಸವನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಡಿಜಿಟಲ್ ಸೇವೆಗಳನ್ನು ಮತ್ತಷ್ಟು ಸುಲಭಗೊಳಿಸಲು ಮೊಬೈಲ್ ಆ್ಯಪ್, UPI ಮತ್ತು ವಾಯ್ಸ್ ಸಹಾಯಕ ಸೇವೆಗಳ ಮೂಲಕ ಗ್ಯಾಸ್ ಬುಕ್ಕಿಂಗ್ ವ್ಯವಸ್ಥೆಯನ್ನು ಏಕೀಕೃತಗೊಳಿಸುವ ಕೆಲಸವೂ ನಡೆಯುತ್ತಿದೆ. ಇದರಿಂದ ತಂತ್ರಜ್ಞಾನ ತಿಳಿಯದವರಿಗೂ ಸರಳವಾಗಿ ಸೇವೆ ಪಡೆಯುವ ಅವಕಾಶ ಸಿಗಲಿದೆ.



