ಉಡುಪಿ : ಸಾಸ್ತಾನ, ಹೆಬ್ರಿಯಲ್ಲಿ ಮಟ್ಕಾ ದಂಧೆಗೆ ಪೊಲೀಸರ ಬಿಗ್ ಬ್ರೇಕ್ : ಪೊಲೀಸರ ದಾಳಿ; ಇಬ್ಬರ ಬಂಧನ
ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ಸಾಸ್ತಾನ ಜಂಕ್ಷನ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

ಉಡುಪಿ: ಕರಾವಳಿ ಜಿಲ್ಲೆಯಾದ್ಯಂತ ಅಕ್ರಮ ಜುಗಾರಿ ಹಾಗೂ ಮಟ್ಕಾ ದಂಧೆಯ ವಿರುದ್ಧ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಕೋಟ ಮತ್ತು ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಸರಣಿ ದಾಳಿಗಳಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನಗದು ಹಾಗೂ ಮಟ್ಕಾ ಪರಿಕರಗಳನ್ನು ಜಪ್ತಿ ಮಾಡಿದ್ದಾರೆ.
ಸಾಸ್ತಾನ ಜಂಕ್ಷನ್ ಬಳಿ ಕೋಟ ಪೊಲೀಸರ ಭರ್ಜರಿ ಬೇಟೆ
ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ಸಾಸ್ತಾನ ಜಂಕ್ಷನ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಜುಲೈ 3 ರಂದು ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ (ತನಿಖೆ) ಮಹಾಂತೇಶ್ ಜಾಬಗೌಡ ಅವರು ಸಿಬ್ಬಂದಿಯೊಂದಿಗೆ ರೌಂಡ್ಸ್ನಲ್ಲಿದ್ದಾಗ ಈ ದಾಳಿ ನಡೆಸಿದ್ದಾರೆ.
ಪೊಲೀಸರು ಬರುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಓಟ ಕಿತ್ತಿದ್ದಾರೆ. ಆದರೆ, ಸ್ಥಳದಲ್ಲಿದ್ದ ಸಾಸ್ತಾನದ ಶಶಿಧರ (30) ಎಂಬಾತನನ್ನು ಪೊಲೀಸರು ಸುತ್ತುವರಿದು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಿದಾಗ, ವಂಡ್ಸೆಯ ಸಂಜೀವ ಪೂಜಾರಿ ಎಂಬಾತನ ಸೂಚನೆಯಂತೆ ತಾನು ಮಟ್ಕಾ ಆಟವಾಡಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತನಿಂದ 1,065/- ರೂ. ನಗದು, ಮಟ್ಕಾ ಚೀಟಿ ಹಾಗೂ ಬಾಲ್ ಪೆನ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿಯಲ್ಲಿಯೂ ಮಟ್ಕಾ ದಾಳಿ
ಹೆಬ್ರಿಯಲ್ಲಿ ಬಾರ್ ಎದುರೇ ಮಟ್ಕಾ ಬುಕ್ಕಿಂಗ್; ಉಡುಪಿಯ ಯುವಕ ಅರೆಸ್ಟ್
ಇನ್ನೊಂದೆಡೆ ಜುಲೈ 2 ರಂದು ಹೆಬ್ರಿ ಗ್ರಾಮದ ವಿಜಯಲಕ್ಷ್ಮಿ ಬಾರ್ ಎಂಡ್ ರೆಸ್ಟೋರೆಂಟ್ ಎದುರಿನ ರಸ್ತೆ ಬದಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುವಂತೆ ಮಟ್ಕಾ ಜುಗಾರಿ ಆಟ ಆಡಿಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಹೆಬ್ರಿ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಚಂದ್ರ ಎ. ಕೆ. ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ.
ಸ್ಥಳದಲ್ಲಿ ಮಟ್ಕಾ ಚೀಟಿ ಬರೆಯುತ್ತಿದ್ದ ಉಡುಪಿ ಪುತ್ತೂರು ಗ್ರಾಮದ ಚೇತನ (24) ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಮಟ್ಕಾ ಆಟದ ಮೂಲಕ ಸಾರ್ವಜನಿಕರಿಂದ ಸಂಗ್ರಹಿಸಲಾಗಿದ್ದ 1,670/- ರೂ. ನಗದು, ಮಟ್ಕಾ ನಂಬ್ರ ಬರೆದಿದ್ದ ಪುಸ್ತಕ ಹಾಗೂ ಬಾಲ್ ಪೆನ್ನುಗಳನ್ನು ಜಪ್ತಿ ಮಾಡಲಾಗಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
udupi kota hebri police matka gambling raid arrest

