ಬಾತು ಸಾಕಾಣಿಕೆ ಲಾಭದಾಯಕ ಉದ್ಯಮ! ಕಡಿಮೆ ಹೂಡಿಕೆ, ಕಡಿಮೆ ಖರ್ಚು
ಕಡಿಮೆ ಹೂಡಿಕೆ, ಕಡಿಮೆ ಖರ್ಚು ಮತ್ತು ಕಡಿಮೆ ಅಪಾಯದಲ್ಲಿ ಸ್ವಂತ ಉದ್ಯಮ ಆರಂಭಿಸಲು ಬಾತು ಸಾಕಾಣಿಕೆ ಉತ್ತಮ ಆಯ್ಕೆ. ಸರಿಯಾದ ನಿರ್ವಹಣೆ ಮಾಡಿದರೆ ತಿಂಗಳಿಗೆ ಲಕ್ಷಾಂತರ ಆದಾಯ ಗಳಿಸುವ ಅವಕಾಶವೂ ಇದೆ.

ಬೇಸಾಯದ ಜೊತೆಗೆ ಹೆಚ್ಚುವರಿ ಆದಾಯಕ್ಕಾಗಿ ರೈತರು ಈಗ ಹೊಸ ಉದ್ಯಮಗಳತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ ಕಡಿಮೆ ಶ್ರಮದಲ್ಲಿ ಸ್ಥಿರ ಆದಾಯ ತರುವ ಉದ್ಯಮಗಳಲ್ಲಿ ಬಾತು ಸಾಕಾಣಿಕೆ ಪ್ರಮುಖವಾಗಿದೆ. ಕೋಳಿ ಸಾಕಾಣಿಕೆಗೆ ಹೋಲಿಸಿದರೆ ಬಾತು ಸಾಕುವುದು ಸುಲಭವಾಗಿದ್ದು, ಆಹಾರ ವೆಚ್ಚವೂ ಕಡಿಮೆ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಬಾತು ಸಾಕಾಣಿಕೆ ಯಾಕೆ ವಿಶೇಷ?
ಬಾತುಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಅವುಗಳಿಗೆ ಸಾಮಾನ್ಯವಾಗಿ ಹೆಚ್ಚು ಕಾಯಿಲೆಗಳು ಬರುವುದಿಲ್ಲ. ಇದರಿಂದ ಔಷಧಿ ವೆಚ್ಚ ಕಡಿಮೆಯಾಗುತ್ತದೆ. ಉತ್ತಮ ತಳಿಯ ಬಾತುಗಳು ವರ್ಷಕ್ಕೆ ಸುಮಾರು 250 ರಿಂದ 300 ಮೊಟ್ಟೆ ಇಡುತ್ತವೆ. ಈ ಮೊಟ್ಟೆಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತವೆ.
ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸಣ್ಣ ರೈತರು, ಮಹಿಳೆಯರು ಮತ್ತು ಯುವಕರು ತಮ್ಮ ಮನೆಯ ಹಿತ್ತಲಲ್ಲೇ ಈ ಉದ್ಯಮವನ್ನು ಆರಂಭಿಸಬಹುದು. ಆರಂಭದಲ್ಲಿ 20 ರಿಂದ 25 ಬಾತುಗಳಿಂದ ಶುರು ಮಾಡಿ, ನಂತರ ಅನುಭವ ಬಂದಂತೆ ಸಂಖ್ಯೆಯನ್ನು ಹೆಚ್ಚಿಸಬಹುದು.
ನೀರಿನ ವ್ಯವಸ್ಥೆ ಇದ್ದರೆ ಇನ್ನಷ್ಟು ಲಾಭ
ಬಾತುಗಳಿಗೆ ನೀರಿನ ವಾತಾವರಣ ಇಷ್ಟವಾಗುತ್ತದೆ. ಮನೆಯ ಸಮೀಪ ಸಣ್ಣ ಕೆರೆ ಅಥವಾ ನೀರಿನ ಕೊಳ ಇದ್ದರೆ ಸಾಕಾಣಿಕೆ ಇನ್ನಷ್ಟು ಸುಲಭವಾಗುತ್ತದೆ. ಒಂದು ವೇಳೆ ಕೆರೆ ಇಲ್ಲದಿದ್ದರೂ ಕೃತಕ ಟ್ಯಾಂಕ್ ಅಥವಾ ಸಣ್ಣ ನೀರಿನ ಕಾಲುವೆ ನಿರ್ಮಿಸಿ ಸಾಕಬಹುದು.
ಬಾತುಗಳು ಕೆರೆಯಲ್ಲಿರುವ ಕೀಟಗಳು, ನತ್ತೆಗಳು, ಸಣ್ಣ ಮೀನುಗಳು ಮತ್ತು ಧಾನ್ಯಗಳನ್ನು ತಿನ್ನುವ ಗುಣ ಹೊಂದಿರುವುದರಿಂದ ಆಹಾರ ವೆಚ್ಚ ಸಹಜವಾಗಿಯೇ ಕಡಿಮೆಯಾಗುತ್ತದೆ. ತರಕಾರಿ ತ್ಯಾಜ್ಯ ಹಾಗೂ ಮಾರುಕಟ್ಟೆಯ ಉಳಿದ ಆಹಾರವನ್ನು ಕೂಡ ಇವು ತಿನ್ನುತ್ತವೆ.
ಯಾವ ತಳಿ ಉತ್ತಮ?
ಮೊಟ್ಟೆ ಉತ್ಪಾದನೆಗಾಗಿ ‘ಖಾಕಿ ಕ್ಯಾಂಪ್ಬೆಲ್’ ಮತ್ತು ‘ಇಂಡಿಯನ್ ರನ್ನರ್’ ತಳಿಗಳು ಉತ್ತಮ ಎಂದು ಪರಿಗಣಿಸಲಾಗಿದೆ. ಮಾಂಸ ಉತ್ಪಾದನೆಗಾಗಿ ‘ವೈಟ್ ಪೆಕಿನ್’ ತಳಿ ಹೆಚ್ಚು ಲಾಭ ನೀಡುತ್ತದೆ. ಈ ತಳಿಯ ಬಾತುಗಳು ಬೇಗ ತೂಕ ಹೆಚ್ಚಿಸಿಕೊಳ್ಳುತ್ತವೆ.
ಆದಾಯ ಹೇಗೆ ಬರುತ್ತದೆ?
ಬಾತು ಸಾಕಾಣಿಕೆಯಲ್ಲಿ ಎರಡು ರೀತಿಯಲ್ಲಿ ಆದಾಯ ಪಡೆಯಬಹುದು. ಒಂದು ಮೊಟ್ಟೆ ಮಾರಾಟದಿಂದ, ಮತ್ತೊಂದು ಮಾಂಸ ಮಾರಾಟದಿಂದ. ಹೋಟೆಲ್, ಬೇಕರಿ ಹಾಗೂ ಪೌಷ್ಟಿಕ ಆಹಾರ ಸೇವಿಸುವವರಲ್ಲಿ ಬಾತು ಮೊಟ್ಟೆಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಒಂದು ಬಾತು ಮರಿ ಬೆಲೆ ಸುಮಾರು ₹150 ರಿಂದ ₹200ರವರೆಗೆ ಇರುತ್ತದೆ. ಸುಮಾರು 100 ಬಾತುಗಳಿಂದ ಉದ್ಯಮ ಆರಂಭಿಸಲು ₹35 ಸಾವಿರದಿಂದ ₹45 ಸಾವಿರವರೆಗೆ ವೆಚ್ಚವಾಗಬಹುದು. ಆದರೆ ಸರಿಯಾದ ನಿರ್ವಹಣೆ ಮತ್ತು ಮಾರುಕಟ್ಟೆ ವ್ಯವಸ್ಥೆ ಇದ್ದರೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಅವಕಾಶ ಇದೆ ಎಂದು ಸಾಕಾಣಿಕಾರರು ಹೇಳುತ್ತಾರೆ.
ಸರ್ಕಾರದಿಂದ ಸಹಾಯ
ರಾಷ್ಟ್ರೀಯ ಪಶುಸಂಗೋಪನಾ ಯೋಜನೆಗಳಡಿ ಸರ್ಕಾರವೂ ಬಾತು ಸಾಕಾಣಿಕೆಗೆ ಸಾಲ ಹಾಗೂ ಸಬ್ಸಿಡಿ ಸೌಲಭ್ಯ ಒದಗಿಸುತ್ತಿದೆ. ಆದ್ದರಿಂದ ಕಡಿಮೆ ಹೂಡಿಕೆಯಲ್ಲಿ ಸ್ವಂತ ಉದ್ಯಮ ಆರಂಭಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿ ಪರಿಣಮಿಸಿದೆ.



