ಪದವೀಧರರಿಗೊಂದು ಸುವರ್ಣಾವಕಾಶ ! ಎಸ್‌ಬಿಐನ 7150 ಅಪ್ರೆಂಟಿಸ್‌ಶಿಪ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
ಎಸ್‌ಬಿಐ 7150 ಅಪ್ರೆಂಟಿಸ್‌ಶಿಪ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಆಸಕ್ತ ಪದವೀಧರರು ಸರಿಯಾದ ದಾಖಲೆಗಳೊಂದಿಗೆ ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
ದೇಶದ ಪ್ರತಿಷ್ಠಿತ ಬ್ಯಾಂಕ್ ಎಸ್‌ಬಿಐ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಇದನ್ನು ಅಪ್ರೆಂಟಿಸ್ ಆಕ್ಟ್ 1961 ನ ಅಡಿಯಲ್ಲಿ ಬಿಡುಗಡೆ ಮಾಡಿದೆ. ಡಿಗ್ರಿ ಮುಗಿಸಿ, ಬ್ಯಾಂಕ್ ಉದ್ಯೋಗಿಯಾಗಬೇಕೆಂದು ಪ್ರಯತ್ನ ನಡೆಸುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ. ಎಸ್‌ಬಿಐ ನ ಈ ಅಧಿಸೂಚನೆಯ ಪ್ರಕಾರ ಖಾಲಿ ಇರುವ ಒಟ್ಟು 7,150 ಅಪ್ರೆಂಟಿಸ್‌ಶಿಪ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮೇ 19 ರಿಂದಲೇ ಪ್ರಾರಂಭವಾಗಿದ್ದು ಅಭ್ಯರ್ಥಿಗಳು ಜೂನ್ 8 ರ ಒಳಗೆ ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಈ ಅರ್ಹತಾ ಮಾನದಂಡಗಳನ್ನು ತಿಳಿಯುವುದು ಅವಶ್ಯಕವಾಗಿದೆ.
ವಿದ್ಯಾರ್ಹತೆ
ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಯಾವುದೇ ಸ್ಟ್ರೀಮ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ
ಅಪ್ರೆಂಟಿಸ್‌ಶಿಪ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 20 ರಿಂದ 28 ವರ್ಷಗಳ ಒಳಗಿನವರಾಗಿರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ಅರ್ಜಿ ಶುಲ್ಕ
ಈ ನೇಮಕಾತಿಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಶುಲ್ಕವನ್ನು ಪಾವತಿಸಬೇಕಾಗಿದೆ. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗಗಳ ಅಭ್ಯರ್ಥಿಗಳು ಅರ್ಜಿ ನಮೂನೆಯೊಂದಿಗೆ ₹300 ಅರ್ಜಿ ಶುಲ್ಕವನ್ನು ಸಲ್ಲಿಸಬೇಕು ಮತ್ತು ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಡಿ ವರ್ಗಗಳ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಉಚಿತವಾಗಿ ಭರ್ತಿ ಮಾಡಬಹುದು.
ಇದನ್ನೂ ಓದಿ: ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಕಮೀಶನ್ಡ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ : ಎನ್‌ಸಿಸಿ ಕ್ಯಾಂಡಿಡೇಟ್‌ಗಳು ಶುಲ್ಕವಿಲ್ಲದೇ ಅರ್ಜಿ ಸಲ್ಲಿಸಿ
ಆಯ್ಕೆ ಪ್ರಕ್ರಿಯೆ
ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳಲ್ಲಿ ನಡೆಯಲಿದೆ.
- ಲಿಖಿತ ಪರೀಕ್ಷೆ
- ಸ್ಥಳೀಯ ಭಾಷಾ ಪರೀಕ್ಸೆ
- ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಕೆ ಹೇಗೆ?
ಎಸ್‌ಬಿಐ ಅಪ್ರೆಂಟಿಸ್‌ಶಿಪ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೊದಲಿಗೆ ಎಸ್‌ಬಿಐನ ಅಧಿಕೃತ ವೆಬ್‌ಸೈಟ್ sbi.co.in ಗೆ ಹೋಗಿ. ಮುಖಪುಟದಲ್ಲಿರುವ ಕೆರಿಯರ್ ಲಿಂಕ್ ಕ್ಲಿಕ್ಕಿಸಿ. ಅಲ್ಲಿ ಹೊಸ ಪುಟ ತೆರೆದುಕೊಳ್ಳುತ್ತದೆ. ಆ ಪುಟದಲ್ಲಿರುವ ಅಪ್ರೆಂಟಿಸ್ ನೇಮಕಾತಿ ಲಿಂಕ್ ಮೇಲೆ ಕ್ಲಿಕ್ಕಿಸಿ. ಈಗ ಅಲ್ಲಿ ಕೇಳಿರುವ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ. ತದನಂತರ ಅರ್ಜಿ ಶುಲ್ಕ ಪಾವತಿಸಿ. ಕೊನೆಯಲ್ಲಿ ಇನ್ನೊಮ್ಮೆ ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅರ್ಜಿ ಸಲ್ಲಿಸಿ. ಭವಿಷ್ಯದ ಉಲ್ಲೇಖಕ್ಕಾಗಿ ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ.



