ದೃಶ್ಯಂ 3 ರಿಲೀಸ್: ರವಿಚಂದ್ರನ್ ಗೆ ರಿಮೇಕ್ ಚಾನ್ಸ್ ಮಿಸ್..!?
ಮಲಯಾಳಂ ಚಿತ್ರರಂಗದ ಅತ್ಯಂತ ಯಶಸ್ಸಿನ ಸಿನಿಮಾ ಇದಾಗಿದ್ದು, ಜಿತು ಜೋಸೇಫ್ ನಿರ್ದೇಶನದಲ್ಲಿ ದೃಶ್ಯಂ 3 ಸಿನಿಮಾ ಮೂಡಿಬಂದಿದೆ.
ದೃಶ್ಯಂ ಸಿನಿಮಾ ಎಂದರೆ ಗೊತ್ತಿಲ್ಲ ಎನ್ನುವವರು ಯಾರೂ ಇಲ್ಲ. ಭಾರತೀಯ ಚಿತ್ರರಂಗದ ಯಶಸ್ವಿ ಥ್ರಿಲ್ಲರ್ ಸಿನಿಮಾ ಎನಿಸಿಕೊಂಡಿರುವ ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ದೃಶ್ಯಂ ಹಾಗೂ ದೃಶ್ಯಂ 2 ಎರಡೂ ಸಿನಿಮಾಗಳು ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕುಳಿತು ಫಿಲಂ ವೀಕ್ಷಿಸುವಂತೆ ಮಾಡಿತ್ತು. ಇಂದು ಈ ಸಿನಿಮಾದ ಮೂರನೇ ಭಾಗ ರಿಲೀಸ್ ಆಗುತ್ತಿದ್ದು, ಪ್ರೇಕ್ಷಕರು ಸಿನಿಮಾ ವೀಕ್ಷಣೆಗೆ ಕಾತುರರಾಗಿದ್ದಾರೆ.
ಮಲಯಾಳಂ ಚಿತ್ರರಂಗದ ಅತ್ಯಂತ ಯಶಸ್ಸಿನ ಸಿನಿಮಾ ಇದಾಗಿದ್ದು, ಜಿತು ಜೋಸೇಫ್ ನಿರ್ದೇಶನದಲ್ಲಿ ದೃಶ್ಯಂ 3 ಸಿನಿಮಾ ಮೂಡಿಬಂದಿದೆ. ಎಂದಿನಂತೆಯೇ ಜಾರ್ಜ್ ಕುಟ್ಟಿ ಪಾತ್ರದಲ್ಲಿ ಮೋಹನ್ ಲಾಲ್ ಬಣ್ಣ ಹಚ್ಚಿದ್ದಾರೆ.
ತನ್ನ ಮಗಳಿಗೆ ಹಿಂಸೆ ನೀಡುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿ, ಬಳಿಕ ತನ್ನ ಇಡೀ ಕುಟುಂಬವನ್ನು ಈ ಕೊಲೆ ಪ್ರಕರಣದಿಂದ ಪಾರು ಮಾಡಿಕೊಂಡೇ ಬರುವ ಜಾರ್ಜ್ ಕುಟ್ಟಿಯ ಪ್ಲಾನ್ ಗಳು ನ್ಯಾಯಾಲವನ್ನೇ ದಂಗು ಬಡಿಸುವಂತೆ ಮಾಡುತ್ತದೆ.
ಪೊಲೀಸ್ ಇಲಾಖೆಗೆ ದೊಡ್ಡ ಸವಾಲಿನಂತೆ ಕಾಣುವ ಈ ಕೊಲೆ ಪ್ರಕರಣದ ಸಸ್ಪೆನ್ಸ್ ಥ್ರಿಲ್ಲರ್ ರೋಚಕ ಕತೆ ದೃಶ್ಯಂ ಸಿನಿಮಾಗೆ ಅಪಾರ ಅಭಿಮಾನಿ ಬಳಗವೇ ಇದೆ. ಇದೀಗ ದೃಶ್ಯಂ 3 ಸಿನಿಮಾ ಇಂದಿನಿಂದ ತೆರೆ ಮೇಲೆ ಕಾಣಲಿದ್ದು ಜಾರ್ಜ್ ಕುಟ್ಟಿ ಈ ಬಾರಿಯಾದರೂ ಸಿಕ್ಕಿಬಿಳ್ತಾನಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಪ್ರತಿಬಾರಿ ಮಲಯಾಳಂನಲ್ಲಿ ಈ ಸಿನಿಮಾ ರಿಲೀಸ್ ಆದಾಗಲೆಲ್ಲ, ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದವರು ರವಿಚಂದ್ರನ್. ಮಲಯಾಳಂನಲ್ಲಿ ಜಾರ್ಜ್ ಕುಟ್ಟಿಯಾಗಿ ಮೋಹನ್ ಲಾಲ್ ಮಿಂಚಿದ್ರೆ, ಚಂದನವನದಲ್ಲಿ ರಾಜೇಂದ್ರ ಪೊನ್ನಪ್ಪನಾಗಿ ರವಿಚಂದ್ರನ್ ಛಾಪು ಮೂಡಿಸಿದ್ದಾರೆ.
ನಿರ್ದೇಶಕ ಪಿ. ವಾಸು ಹಾಗೂ ರವಿಚಂದ್ರನ್ ಕಾಂಬಿನೇಶನ್ ನಲ್ಲಿ ದೃಶ್ಯಂ ಹಾಗೂ ದೃಶ್ಯಂ 2 ಸಿನಿಮಾ ರಿಮೇಕ್ ತೆರೆಕಂಡಿದ್ದು ಭರ್ಜರಿ ಯಶಸ್ಸು ಸಾಧಿಸಿದೆ. ಆದರೆ ಈ ಬಾರಿ ದೃಶ್ಯಂ 3 ಸಿನಿಮಾ ರಿಮೇಕ್ ಚಾನ್ಸ್ ರವಿಚಂದ್ರನ್ ಕೈ ತಪ್ಪುವ ಅನುಮಾನ ಮೂಡಿದೆ.
ಈ ಬಾರಿ ಮಲಯಾಳಂ ಭಾಷೆಯ ಸಿನಿಮಾವನ್ನೇ ಕನ್ನಡಕ್ಕೆ ಡಬ್ ಮಾಡಲಾಗಿದೆ. ರಾಜ್ಯದ ಪ್ರಮುಖ ಸಿನಿಮಾ ಮಂದಿರಗಳಲ್ಲಿ ಇದನ್ನು ಬಿಡುಗಡೆ ಕೂಡ ಮಾಡಲಾಗಿದೆ. ಥಿಯೇಟರ್ ಹೋಗಿ ಡಬ್ಬಿಂಗ್ ಸಿನಿಮಾ ವೀಕ್ಷಿಸುವವರ ಸಂಖ್ಯೆ ಕಡಿಮೆಯಿದ್ದರೂ, ಒಟಿಟಿಗೆ ಬಂದಮೇಲಂತೂ ಬಹುತೇಕರು ಈ ಸಿನಿಮಾ ನೋಡಲಿದ್ದಾರೆ. ಹೀಗಾಗಿ ಈ ಬಾರಿ ರವಿಚಂದ್ರನ್ ದೃಶ್ಯಂ 3 ಸಿನಿಮಾ ರಿಮೇಕ್ ಕಾರ್ಯಕ್ಕೆ ಕೈ ಹಾಕುವುದಿಲ್ಲವಾ ಎಂಬ ಅನುಮಾನ ದಟ್ಟವಾಗಿದೆ .



