ವಾಟ್ಸಪ್‌ನಲ್ಲಿ ಮತ್ತೊಂದು ಸ್ಮಾರ್ಟ್ ಅಪ್ಡೇಟ್! ಹೊಸ ಫೀಚರ್ ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯ

ಚಾಟ್ ತೆರೆಯದೇ ಯಾರು ವಾಟ್ಸಪ್‌ನಲ್ಲಿ ಸಕ್ರಿಯರಾಗಿದ್ದಾರೆ ಎಂಬ ಮಾಹಿತಿ ಒಂದೇ ವಿಭಾಗದಲ್ಲಿ ಕಾಣುವ ಹೊಸ ಫೀಚರ್ ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆ ಇದೆ.

ವಾಟ್ಸಪ್ ತನ್ನ ಬಳಕೆದಾರರಿಗೆ ಮತ್ತೆ ಹೊಸ ಅನುಭವ ನೀಡಲು ಸಜ್ಜಾಗಿದೆ. ಪ್ರತೀ ಕೆಲ ತಿಂಗಳಿಗೊಮ್ಮೆ ಹೊಸ ಆಯ್ಕೆಗಳು, ಭದ್ರತಾ ವ್ಯವಸ್ಥೆಗಳು ಹಾಗೂ ಬಳಕೆ ಸುಲಭಗೊಳಿಸುವ ಫೀಚರ್‌ಗಳನ್ನು ಪರಿಚಯಿಸುವ ಕಂಪನಿ, ಈಗ ಮತ್ತೊಂದು ಆಕರ್ಷಕ ಅಪ್ಡೇಟ್ ಮೇಲೆ ಕೆಲಸ ಮಾಡುತ್ತಿದೆ. ಈ ಬಾರಿ ಬಳಕೆದಾರರಿಗೆ ಹೆಚ್ಚು ಉಪಯುಕ್ತವಾಗುವ “ಆನ್‌ಲೈನ್ ಕಂಟಾಕ್ಟ್ ವ್ಯೂ” ಸೌಲಭ್ಯ ತರಲು ಯೋಜನೆ ರೂಪಿಸಿದೆ.

ಪ್ರಸ್ತುತ ಯಾರಾದರೂ ಆನ್‌ಲೈನ್‌ನಲ್ಲಿ ಇದ್ದಾರೆಯೇ ಎಂದು ನೋಡಬೇಕಾದರೆ ಅವರ ಚಾಟ್ ತೆರೆಯಬೇಕಾಗುತ್ತದೆ. ಆದರೆ ಮುಂದಿನ ಅಪ್ಡೇಟ್‌ನಲ್ಲಿ ಈ ಪ್ರಕ್ರಿಯೆ ಸಂಪೂರ್ಣ ಬದಲಾಗಬಹುದು. ವಾಟ್ಸಪ್ ಹೊಸ ವಿಭಾಗದಲ್ಲಿ ಆನ್‌ಲೈನ್‌ನಲ್ಲಿರುವ ಎಲ್ಲ ಸಂಪರ್ಕಗಳ ಪಟ್ಟಿಯನ್ನು ನೇರವಾಗಿ ತೋರಿಸುವ ವ್ಯವಸ್ಥೆ ತರಲು ಪ್ರಯತ್ನಿಸುತ್ತಿದೆ.

ಒಂದೇ ಪರದೆಯಲ್ಲಿ ಸಕ್ರಿಯ ಕಂಟಾಕ್ಟ್‌ಗಳು

ಹೊಸ ಫೀಚರ್ “ಕಂಟಾಕ್ಟ್ಸ್ ಹಬ್” ಮಾದರಿಯಲ್ಲಿ ಕೆಲಸ ಮಾಡುವ ಸಾಧ್ಯತೆ ಇದೆ. ಇಲ್ಲಿ ಈಗ ಆನ್‌ಲೈನ್‌ನಲ್ಲಿ ಇರುವ ಸ್ನೇಹಿತರು ಅಥವಾ ಕುಟುಂಬ ಸದಸ್ಯರ ವಿವರಗಳು ಪ್ರತ್ಯೇಕವಾಗಿ ಕಾಣಿಸುತ್ತವೆ. ಇದರಿಂದ ಬೇಗನೆ ಯಾರಿಗೆ ಮೆಸೇಜ್ ಮಾಡಬೇಕು ಎಂಬುದು ತಿಳಿದು ಸಂವಹನ ಇನ್ನಷ್ಟು ಸುಲಭವಾಗಲಿದೆ.

ಈ ಫೀಚರ್ ಮೊದಲು ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ಕಂಡುಬಂದಿತ್ತು. ಈಗ ಐಫೋನ್ ಬಳಕೆದಾರರಿಗಾಗಿ ಇರುವ iOS ಟೆಸ್ಟ್ ಫ್ಲೈಟ್ ಆವೃತ್ತಿಯಲ್ಲಿಯೂ ಇದರ ಸುಳಿವು ದೊರೆತಿದೆ. ಇದರಿಂದ ಶೀಘ್ರದಲ್ಲೇ ಸಾಮಾನ್ಯ ಬಳಕೆದಾರರಿಗೂ ಈ ಸೌಲಭ್ಯ ಸಿಗುವ ನಿರೀಕ್ಷೆ ಹೆಚ್ಚಾಗಿದೆ.

ಗ್ರೀನ್ ಇಂಡಿಕೇಟರ್ ಮೂಲಕ ಸ್ಟೇಟಸ್

ಹೊಸ ವ್ಯವಸ್ಥೆಯಲ್ಲಿ ಆನ್‌ಲೈನ್‌ನಲ್ಲಿ ಇರುವವರ ಪ್ರೊಫೈಲ್ ಫೋಟೋ ಬಳಿ ಹಸಿರು ಗುರುತು ಕಾಣಬಹುದು. ಇದರಿಂದ ಯಾರು ಈಗ ಸಕ್ರಿಯರಾಗಿದ್ದಾರೆ ಎಂಬುದನ್ನು ತಕ್ಷಣ ಗುರುತಿಸಬಹುದು. ಜೊತೆಗೆ ಹೊಸ ಕಂಟಾಕ್ಟ್ ಸೇರಿಸಲು ಸರ್ಚ್ ಬಾರ್ ಮತ್ತು QR ಕೋಡ್ ಸ್ಕ್ಯಾನ್ ಆಯ್ಕೆಯನ್ನೂ ಸೇರಿಸುವ ಸಾಧ್ಯತೆ ಇದೆ.

ಪ್ರೈವಸಿ ಆಯ್ಕೆ ಮುಂದುವರಿಕೆ

ವಾಟ್ಸಪ್ ಬಳಕೆದಾರರ ಗೌಪ್ಯತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಹೀಗಾಗಿ “ಲಾಸ್ಟ್ ಸೀನ್” ಅಥವಾ “ಆನ್‌ಲೈನ್ ಸ್ಟೇಟಸ್” ಅನ್ನು ಮರೆಮಾಡಿರುವವರು ಈ ಪಟ್ಟಿಯಲ್ಲಿ ಕಾಣಿಸುವುದಿಲ್ಲ. ಅಂದರೆ ಬಳಕೆದಾರರ ನಿಯಂತ್ರಣ ಅವರ ಕೈಯಲ್ಲೇ ಇರುತ್ತದೆ.

ಸಂದೇಶ ಕಳುಹಿಸುವ ವಿಧಾನವನ್ನು ಇನ್ನಷ್ಟು ವೇಗವಾಗಿ ಹಾಗೂ ಸುಲಭವಾಗಿ ಮಾಡಲು ವಾಟ್ಸಪ್ ಮುಂದಿನ ದಿನಗಳಲ್ಲಿ ಹಲವು ಹೊಸ ಅಪ್ಡೇಟ್‌ಗಳನ್ನು ತರಲು ಯೋಜಿಸುತ್ತಿದೆ. ಈ ಹೊಸ ಫೀಚರ್ ಯುವ ಬಳಕೆದಾರರಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories