ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಬೇಡಿಕೆ! ಪ್ರಕರಣ ದಾಖಲು
ಮದುವೆಯಾಗುವುದಾಗಿ ನಂಬಿಸಿ ಯುವತಿಯ ಕುಟುಂಬದಿಂದ ಲಕ್ಷಾಂತರ ರೂಪಾಯಿ ಹಾಗೂ ಚಿನ್ನಕ್ಕೆ ಬೇಡಿಕೆ ಇಟ್ಟ ಆರೋಪದಡಿ ವ್ಯಕ್ತಿಯೊಬ್ಬ ಮತ್ತು ಆತನ ತಾಯಿ ವಿರುದ್ಧ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಪರಿಚಯವಾಗಿ ಬಳಿಕ ವರದಕ್ಷಿಣೆ ಹೆಸರಿನಲ್ಲಿ ದೊಡ್ಡ ಮೊತ್ತದ ಹಣ ಮತ್ತು ಆಸ್ತಿ ಬೇಡಿಕೆ ಇಟ್ಟ ಆರೋಪ ಕೇಳಿಬಂದಿದೆ. ಈ ಸಂಬಂಧ ಮೈಸೂರು ಮೂಲದ ಪ್ರದೀಪ್ ಸೋಲೋಮನ್ ಹಾಗೂ ಆತನ ತಾಯಿ ಕಲಾವತಿ ವಿರುದ್ಧ Adugodi Police Stationನಲ್ಲಿ ಪ್ರಕರಣ ದಾಖಲಾಗಿದೆ.
ದೂರು ನೀಡಿರುವ ಪ್ಯಾಟ್ರಿಕ್ ರಾಜು ಅವರ ಪ್ರಕಾರ, ತಮ್ಮ 25 ವರ್ಷದ ಮಗಳಿಗೆ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ವರ ಹುಡುಕಲಾಗುತ್ತಿತ್ತು. ಇದೇ ವೇಳೆ ಆರೋಪಿ ಪ್ರದೀಪ್ ಸೋಲೋಮನ್ ಹಾಗೂ ಆತನ ತಾಯಿ ಸಂಪರ್ಕಿಸಿ ಮದುವೆ ಮಾತುಕತೆ ಆರಂಭಿಸಿದ್ದರು.
ಪ್ರದೀಪ್ ತಾನು ನ್ಯಾಯಾಧೀಶ ಹುದ್ದೆಗೆ ಪರೀಕ್ಷೆ ಬರೆದಿದ್ದು, ಶೀಘ್ರದಲ್ಲೇ ಜಡ್ಜ್ ಆಗುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಯುವತಿಯ ಕುಟುಂಬದವರು ಮೈಸೂರಿನಲ್ಲಿರುವ ಆರೋಪಿಯ ಮನೆಗೂ ಭೇಟಿ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವರದಕ್ಷಿಣೆ ಆರೋಪ
ಮಾತುಕತೆ ಮುಂದುವರಿದಂತೆ ಆರೋಪಿಗಳು ವರದಕ್ಷಿಣೆ ಹೆಸರಿನಲ್ಲಿ ಫಾರ್ಚೂನರ್ ಕಾರು, ಒಂದು ಕೆಜಿ ಚಿನ್ನ, ಬೆಂಗಳೂರಿನಲ್ಲಿ ಮನೆ ಹಾಗೂ ಚಿನ್ನದ ಸರ, ಉಂಗುರ ಮತ್ತು ವಾಚ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ನಿಶ್ಚಿತಾರ್ಥದ ನಂತರವೂ ಹಣ ಮತ್ತು ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿದರೆ ಮಾತ್ರ ಮದುವೆ ನಡೆಸುವುದಾಗಿ, ಇಲ್ಲವಾದರೆ ಮದುವೆ ರದ್ದು ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದಲ್ಲದೆ ಸುಮಾರು 20 ಲಕ್ಷ ರೂಪಾಯಿ ಹಣ ಪಡೆದಿರುವ ಆರೋಪವೂ ಕೇಳಿಬಂದಿದೆ.
ಆರೋಪ ತಳ್ಳಿ ಹಾಕಿದ ಪ್ರದೀಪ್
ಇನ್ನೊಂದೆಡೆ ತನ್ನ ವಿರುದ್ಧದ ಆರೋಪಗಳನ್ನು ಪ್ರದೀಪ್ ಸೋಲೋಮನ್ ತಳ್ಳಿಹಾಕಿದ್ದಾನೆ. ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಆತ, ತನ್ನ ಮನೆಗಳನ್ನು ಬಾಡಿಗೆಗೆ ನೀಡಿರುವುದಕ್ಕೆ ದಾಖಲೆಗಳಿವೆ ಎಂದು ಹೇಳಿಕೊಂಡಿದ್ದಾನೆ.
ಯುವತಿಯ ತಂದೆ ತಮ್ಮ ಕುಟುಂಬದೊಂದಿಗೆ ಗೌರವದಿಂದ ವರ್ತಿಸಿದ್ದು, ನಮ್ಮ ಮನೆಗೆ ಅಳಿಯನಾಗಿ ಬರಬೇಕೆಂದು ಕೇಳಿಕೊಂಡಿದ್ದರು ಎಂದು ಪ್ರದೀಪ್ ವಿಡಿಯೋದಲ್ಲಿ ಹೇಳಿದ್ದಾನೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮ್ಯಾಟ್ರಿಮೋನಿ ವಂಚನೆ ಬಗ್ಗೆ ಆತಂಕ
ಇತ್ತೀಚಿನ ದಿನಗಳಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳ ಮೂಲಕ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಮದುವೆ ಮಾತುಕತೆ ವೇಳೆ ಹಣಕಾಸು ವ್ಯವಹಾರಗಳ ಬಗ್ಗೆ ಸೂಕ್ತ ಪರಿಶೀಲನೆ ಮಾಡಿಕೊಳ್ಳುವುದು ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



