ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ಚಾರ್ಜ್ ಮಾಡುವವರೇ ಎಚ್ಚರ – ಕ್ಷಣಮಾತ್ರದಲ್ಲಿ ನಿಮ್ಮ ಖಾತೆಯ ಹಣ ಮಂಗಮಾಯ

ಇನ್ನು ಮುಂದೆ ಸಾರ್ವಜನಿಕ ಜಾಗಗಳಲ್ಲಿ ಫೋನ್ ಚಾರ್ಜ್ ಮಾಡುವ ಮುನ್ನ ನೂರು ಬಾರಿ ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಅಥವಾ ಬಸ್ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಬ್ಯಾಟರಿ ಖಾಲಿಯಾದಾಗ ಅಲ್ಲಿರುವ ಯುಎಸ್ಬಿ  ಚಾರ್ಜಿಂಗ್ ಪೋರ್ಟ್‌ಗಳನ್ನು ಬಳಸುವುದು ನಮ್ಮಲ್ಲಿ ಬಹುತೇಕರ ಅಭ್ಯಾಸ.

ಆದರೆ, ಇನ್ನು ಮುಂದೆ ಇಂತಹ ಜಾಗಗಳಲ್ಲಿ ಫೋನ್ ಚಾರ್ಜ್ ಮಾಡುವ ಮುನ್ನ ನೂರು ಬಾರಿ ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಏಕೆಂದರೆ, ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್‌ಗಳ ಮೂಲಕವೇ ಜನರ ವೈಯಕ್ತಿಕ ಮಾಹಿತಿ ಮತ್ತು ಹಣವನ್ನು ಲೂಟಿ ಮಾಡುವ ಹೊಸ ಜಾಲ ಸಕ್ರಿಯವಾಗಿದ್ದು, ಈ ಕುರಿತು ರಾಜ್ಯ ಸೈಬರ್ ಪೊಲೀಸ್ ಇಲಾಖೆ ಜನರಿಗೆ ತೀವ್ರ ಎಚ್ಚರಿಕೆ ನೀಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ಸಿಗುವ ಯುಎಸ್ಬಿ ಪೋರ್ಟ್‌ಗಳಲ್ಲಿ ಹ್ಯಾಕರ್ಗಳು ಮೊದಲೇ ಅತ್ಯಾಧುನಿಕ ಚಿಪ್‌ಗಳನ್ನು ಅಥವಾ ಮಾಲ್ವೇರ್ ಸಾಫ್ಟ್‌ವೇರ್‌ಗಳನ್ನು ಅಳವಡಿಸಿರುತ್ತಾರೆ. ಇಂತಹ ಪೋರ್ಟ್‌ಗಳಿಗೆ ಸಾರ್ವಜನಿಕರು ತಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್‌ಗಳನ್ನು ಕನೆಕ್ಟ್ ಮಾಡಿದ ತಕ್ಷಣ, ಆ ಡಿವೈಸ್‌ಗಳಲ್ಲಿರುವ ಫೋಟೋಗಳು, ಖಾಸಗಿ ವಿಡಿಯೋಗಳು, ಬ್ಯಾಂಕ್ ಖಾತೆಯ ವಿವರಗಳು ಹಾಗೂ ಪಾಸ್‌ವರ್ಡ್‌ಗಳನ್ನು ಸೈಬರ್ ಕಳ್ಳರು ಸುಲಭವಾಗಿ ಕದಿಯುತ್ತಾರೆ.

ಪೊಲೀಸ್ ಇಲಾಖೆ ಈ ಅತ್ಯಂತ ಅಪಾಯಕಾರಿ ತಂತ್ರಜ್ಞಾನದ ವಂಚನೆಗೆ ‘ಜ್ಯೂಸ್ ಜಾಕಿಂಗ್’  ಎಂದು ಕರೆದಿದೆ. ಮೊಬೈಲ್‌ನಲ್ಲಿರುವ ಬ್ಯಾಂಕಿಂಗ್ ಆ್ಯಪ್‌ಗಳು, ಯುಪಿಐ (UPI) ಐಡಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ಆನ್‌ಲೈನ್ ಶಾಪಿಂಗ್ ಅಥವಾ ನೇರವಾಗಿ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ.

ನಿಮ್ಮ ಫೋನ್‌ನಲ್ಲಿರುವ ವೈಯಕ್ತಿಕ ಫೋಟೋ ಹಾಗೂ ವಿಡಿಯೋಗಳನ್ನು ಕದ್ದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ನಿಮ್ಮ ಆಧಾರ್, ಪ್ಯಾನ್ ಕಾರ್ಡ್ ಸೇರಿದಂತೆ ಪ್ರಮುಖ ವೈಯಕ್ತಿಕ ದಾಖಲೆಗಳನ್ನು ಇತರೆ ಅಪರಾಧ ಕೃತ್ಯಗಳನ್ನು ಎಸಗಲು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲಾಗುತ್ತದೆ.

ಇಂತಹ ವಂಚನೆಗಳ ತಡೆಗೆ ಪೊಲೀಸ್ ಇಲಾಖೆ ಹಲವು ನಿರ್ದೇಶನಗಳನ್ನು ನೀಡಿದ್ದು, ಸಾರ್ವಜನಿಕ ಯುಎಸ್ಬಿ ಸಾಕೆಟ್‌ಗಳ ಬದಲಿಗೆ, ನಿಮ್ಮದೇ ಆದ ಸ್ವಂತ ಅಡಾಪ್ಟರ್ ಅನ್ನು ನೇರವಾಗಿ ಎಲೆಕ್ಟ್ರಿಕಲ್ ಪ್ಲಗ್ ಪಾಯಿಂಟ್‌ಗೆ ಹಾಕಿ ಚಾರ್ಜ್ ಮಾಡುವುದು ಅತ್ಯಂತ ಸುರಕ್ಷಿತ ಎಂದಿದೆ.

ಮಾತ್ರವಲ್ಲದೇ ಪ್ರಯಾಣದ ಸಮಯದಲ್ಲಿ ಬ್ಯಾಟರಿ ಸಮಸ್ಯೆಯಿಂದ ಪಾರಾಗಲು ಯಾವಾಗಲೂ ಒಂದು ಪವರ್ ಬ್ಯಾಂಕ್ ಅನ್ನು ನಿಮ್ಮ ಜೊತೆಯಲ್ಲಿಟ್ಟುಕೊಳ್ಳಿ ಹಾಗೂ ಅನಿವಾರ್ಯ ಪರಿಸ್ಥಿತಿಯಲ್ಲಿ ಸಾರ್ವಜನಿಕ ಯುಎಸ್ಬಿ ಪೋರ್ಟ್ ಬಳಸಬೇಕಾಗಿ ಬಂದರೆ, ಮಾರುಕಟ್ಟೆಯಲ್ಲಿ ಸಿಗುವ ‘ಯುಎಸ್ಬಿ ಡೇಟಾ ಬ್ಲಾಕರ್’  ಸಾಧನವನ್ನು ಬಳಸಿ ಚಾರ್ಜ್ ಮಾಡಿ ಎಂದು ಹೇಳಿದೆ.

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories