ಪರ್ಸನಲ್ ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಲೋನ್! ಯಾವುದು ಸೂಕ್ತ?
ತುರ್ತು ಹಣದ ಅಗತ್ಯ ಬಂದಾಗ ಹಲವರು ಪರ್ಸನಲ್ ಲೋನ್ ಮತ್ತು ಕ್ರೆಡಿಟ್ ಕಾರ್ಡ್ ಲೋನ್ ನಡುವೆ ಗೊಂದಲಕ್ಕೀಡಾಗುತ್ತಾರೆ. ಕಡಿಮೆ ಬಡ್ಡಿ ಹಾಗೂ ಸ್ಥಿರ EMI ಇರುವ ಪರ್ಸನಲ್ ಲೋನ್ ಹೆಚ್ಚು ಸುರಕ್ಷಿತ ಆಯ್ಕೆ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.

ತುರ್ತು ಪರಿಸ್ಥಿತಿಯಲ್ಲಿ ಹಣದ ಅವಶ್ಯಕತೆ ಎದುರಾದಾಗ ಜನರು ಸಾಮಾನ್ಯವಾಗಿ ಪರ್ಸನಲ್ ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಲೋನ್ ಕಡೆ ಮುಖ ಮಾಡುತ್ತಾರೆ. ಆದರೆ ಈ ಎರಡು ಸಾಲುಗಳ ನಡುವೆ ಬಡ್ಡಿದರ, ಶುಲ್ಕ ಹಾಗೂ ಮರುಪಾವತಿ ವಿಧಾನದಲ್ಲಿ ದೊಡ್ಡ ವ್ಯತ್ಯಾಸವಿದೆ.
ಸರಿಯಾದ ಆಯ್ಕೆ ಮಾಡದಿದ್ದರೆ ಸಣ್ಣ ಸಾಲವೇ ದೊಡ್ಡ ಆರ್ಥಿಕ ಒತ್ತಡವಾಗುವ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ಎಚ್ಚರಿಸುತ್ತಿದ್ದಾರೆ.
ಪರ್ಸನಲ್ ಲೋನ್ ಹೇಗೆ ಕೆಲಸ ಮಾಡುತ್ತದೆ?
ಪರ್ಸನಲ್ ಲೋನ್ ಎಂದರೆ ನಿಗದಿತ ಅವಧಿಗೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ನೀಡುವ ಸಾಲ. ಇದರಲ್ಲಿ ಸಾಮಾನ್ಯವಾಗಿ ಸ್ಥಿರ ಬಡ್ಡಿದರ ಇರುತ್ತದೆ ಮತ್ತು ಪ್ರತೀ ತಿಂಗಳು ನಿಗದಿತ EMI ಪಾವತಿಸಬೇಕಾಗುತ್ತದೆ.
ಹೀಗಾಗಿ ಸಾಲದ ಒಟ್ಟು ಭಾರ ಎಷ್ಟು ಎಂಬುದನ್ನು ಮೊದಲೇ ಅಂದಾಜು ಮಾಡಬಹುದು. ವೈದ್ಯಕೀಯ ತುರ್ತು ಪರಿಸ್ಥಿತಿ, ಮದುವೆ, ಶಿಕ್ಷಣ ಅಥವಾ ದೊಡ್ಡ ಖರ್ಚುಗಳಿಗೆ ಹಲವರು ಈ ಆಯ್ಕೆಯನ್ನು ಬಳಸುತ್ತಿದ್ದಾರೆ.
ಕ್ರೆಡಿಟ್ ಕಾರ್ಡ್ ಲೋನ್ ಏಕೆ ದುಬಾರಿ?
ಕ್ರೆಡಿಟ್ ಕಾರ್ಡ್ ಲೋನ್ ರಿವಾಲ್ವಿಂಗ್ ಕ್ರೆಡಿಟ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕಾರ್ಡ್ ಮಿತಿಯೊಳಗೆ ಯಾವಾಗ ಬೇಕಾದರೂ ಹಣ ಬಳಸಬಹುದು. ಆದರೆ ಬಾಕಿ ಮೊತ್ತವನ್ನು ಸಂಪೂರ್ಣ ಪಾವತಿಸದಿದ್ದರೆ ಭಾರಿ ಬಡ್ಡಿ ವಿಧಿಸಲಾಗುತ್ತದೆ.
ಕೆಲವು ಬ್ಯಾಂಕ್‌ಗಳಲ್ಲಿ ತಿಂಗಳಿಗೆ 2% ರಿಂದ 3.5%ರವರೆಗೆ ಬಡ್ಡಿ ವಿಧಿಸಲಾಗುತ್ತದೆ. ವರ್ಷಕ್ಕೆ ಇದು 40%ರಿಂದ 50%ಕ್ಕೂ ಹೆಚ್ಚು ಆಗುವ ಸಾಧ್ಯತೆ ಇದೆ. ಜೊತೆಗೆ ಲೇಟ್ ಫೀ ಹಾಗೂ ಪೆನಾಲ್ಟಿ ಶುಲ್ಕವೂ ಸೇರಬಹುದು.
ಯಾವುದು ಸುರಕ್ಷಿತ ಆಯ್ಕೆ?
ಹಣಕಾಸು ತಜ್ಞರ ಪ್ರಕಾರ, ದೀರ್ಘಾವಧಿಯ ಅಗತ್ಯಗಳಿಗೆ ಪರ್ಸನಲ್ ಲೋನ್ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದರಲ್ಲಿ EMI ನಿಗದಿತವಾಗಿದ್ದು ಬಡ್ಡಿದರವೂ ಸ್ಥಿರವಾಗಿರುತ್ತದೆ.
ಆದರೆ ಕೆಲವೇ ದಿನಗಳಲ್ಲಿ ಸಂಪೂರ್ಣ ಹಣ ಮರುಪಾವತಿಸುವ ಸಾಮರ್ಥ್ಯ ಇದ್ದರೆ ಮಾತ್ರ ಕ್ರೆಡಿಟ್ ಕಾರ್ಡ್ ಲೋನ್ ಬಳಸುವುದು ಉತ್ತಮ. ಇಲ್ಲದಿದ್ದರೆ ಸಣ್ಣ ಮೊತ್ತವೂ ದೊಡ್ಡ ಸಾಲವಾಗಿ ಮಾರ್ಪಡುವ ಅಪಾಯವಿದೆ.
ಹೆಚ್ಚುವರಿ ಶುಲ್ಕಗಳೂ ಇವೆ
ಪರ್ಸನಲ್ ಲೋನ್‌ಗಳ ಮೇಲೆ ಪ್ರೊಸೆಸಿಂಗ್ ಫೀ ಹಾಗೂ ಮುಂಗಡ ಪಾವತಿ ಶುಲ್ಕ ಇರುತ್ತದೆ. ಕೆಲವು ಬ್ಯಾಂಕ್‌ಗಳು ಸಾಲದ ಮೊತ್ತದ 1%ರಿಂದ 5%ರವರೆಗೆ ಶುಲ್ಕ ವಸೂಲಿ ಮಾಡುತ್ತವೆ.
ಆದರೂ ಬಡ್ಡಿದರ ನಿಯಂತ್ರಿತವಾಗಿರುವುದರಿಂದ ಒಟ್ಟು ಸಾಲದ ಭಾರವನ್ನು ನಿರ್ವಹಿಸುವುದು ಸುಲಭವಾಗುತ್ತದೆ. ಇತ್ತೀಚಿನ RBI ಬಡ್ಡಿದರ ಕಡಿತದಿಂದ ಪರ್ಸನಲ್ ಲೋನ್‌ಗಳು ಇನ್ನಷ್ಟು ಕೈಗೆಟುಕುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



