ಕುಂದಾಪುರ: ಸತ್ತವರು ಬಂದು ಸಹಿ ಹಾಕಿದ್ರಾ ? ನಕಲಿ ಪಾನ್ ಕಾರ್ಡ್ ಸೃಷ್ಟಿಸಿ GPA ವಂಚನೆ; 6 ಮಂದಿ ವಿರುದ್ದ ಕ್ರಿಮಿನಲ್ ಪ್ರಕರಣ

25 ವರ್ಷಗಳ ಹಿಂದೆ ಸತ್ತವರ ಹೆಸರಲ್ಲೂ ನಕಲಿ ಪಾನ್ ಕಾರ್ಡ್‌ ರಚಿಸಿ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲೇ ಭೀಕರ ವಂಚನೆ ನಡೆದಿದೆ. ಮೃತರ ಹೆಸರಲ್ಲಿ ನಕಲಿ ಜಿಪಿಎ ಸೃಷ್ಟಿಸಿ ಕೋಟ್ಯಂತರ ಮೌಲ್ಯದ ಆಸ್ತಿ ವಂಚನೆ ನಡೆದಿದೆ. ಈ ಕುರಿತು ಕುಂದಾಪುರದಲ್ಲಿ ಆರು ಜನರ ವಿರುದ್ಧ ಗಂಭೀರ ಬಿಎನ್ಎಸ್ ಪ್ರಕರಣ ದಾಖಲು.

ಕುಂದಾಪುರ ( Kundapur) : ಮೃತರ ಹೆಸರಿನಲ್ಲಿ ನಕಲಿ ದಾಖಲೆ ಹಾಗೂ ನಕಲಿ ಪಾನ್ ಕಾರ್ಡ್‌ಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕಾನೂನುಬಾಹಿರವಾಗಿ ಜನರಲ್ ಪವರ್ ಆಫ್ ಅಟಾರ್ನಿ (GPA) ಮಾಡಿಸಿಕೊಂಡಿರುವ ಗಂಭೀರ ವಂಚನೆ ಪ್ರಕರಣವೊಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮುಂಬೈನ ದಹಿಸರ್ ನಿವಾಸಿ ಸುನೀಲ್ ದೇವ ಪೈ ಎಂಬುವರು ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದು, ರಾಮಚಂದ್ರ ಕಾಮತ್ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಸುನೀಲ್ ದೇವ ಪೈ ಅವರ ಅಜ್ಜ ಕೃಷ್ಣರಾಯ ಪೈ ಅವರಿಗೆ ಕುಂದಾಪುರ ಕಸಬಾ ಗ್ರಾಮದ ಸರ್ವೆ ನಂಬರ್ 115-2ಎ, 115/2ಸಿ, 111/13, 111/9ಎ ಮತ್ತು 111/9ಸಿ ಸೇರಿದಂತೆ ಒಟ್ಟು ಸುಮಾರು 15 ಸೆಂಟ್ಸ್ ಆಸ್ತಿ ಇತ್ತು. ಇದನ್ನು ಅವರು 1968 ರಲ್ಲಿ ಕ್ರಯಪತ್ರದ ಮೂಲಕ ಖರೀದಿಸಿ ಅನುಭವಿಸಿಕೊಂಡು ಬಂದಿದ್ದರು.

Also Read : Udupi: ಉಡುಪಿಯ ಕುಖ್ಯಾತ ‘ಗರುಡ ಗ್ಯಾಂಗ್’ ಸದಸ್ಯನಿಗೆ ಗೂಂಡಾ ಕಾಯ್ದೆ

1978 ರಲ್ಲಿ ಕೃಷ್ಣರಾಯ ಪೈ ಮೃತಪಟ್ಟ ಬಳಿಕ, ಈ ಆಸ್ತಿಗಳ ಪಹಣಿಯು ಅವರ ವಾರೀಸುದಾರರಾದ ಸುನೀಲ್ ಅವರ ತಂದೆ ಯು. ದೇವರಾಯ ಪೈ ಮತ್ತು ಇತರರ ಹೆಸರಿಗೆ 2015-16 ರಲ್ಲಿ (ಮ್ಯುಟೇಶನ್ ಆದೇಶ ಎಮ್‌ಆರ್‌ಎಚ್ 240/2015-2016) ವರ್ಗಾವಣೆಯಾಗಿತ್ತು. ಸುನೀಲ್ ಅವರ ತಂದೆ ಯು. ದೇವರಾಯ ಪೈ ಅವರು 2014 ರ ನವೆಂಬರ್ 10 ರಂದು ಮುಂಬೈನಲ್ಲಿ ನಿಧನರಾಗಿದ್ದರು.

ನಕಲಿ ದಾಖಲೆ, ಫೋರ್ಜರಿ ಜಾಲ

ಸುನೀಲ್ ದೇವ ಪೈ ತಂದೆ ದೇವರಾಯ ಪೈ ಹಾಗೂ 25 ವರ್ಷಗಳ ಹಿಂದೆಯೇ ಮೃತಪಟ್ಟಿದ್ದ ವಕೀಲ ಕೆ. ಆನಂದ ಯಾನೆ ಕೆ. ಆನಂದರಾವ್ ಅವರ ಹೆಸರಿನಲ್ಲಿ ಆರೋಪಿಗಳು ನಕಲಿ ಪಾನ್ ಕಾರ್ಡ್‌ಗಳನ್ನು ಸೃಷ್ಟಿಸಿದ್ದರು. ಈ ನಕಲಿ ಪಾನ್ ಕಾರ್ಡ್‌ಗಳಿಗೆ ಖೋಟಾ ನಂಬರ್‌ಗಳನ್ನು ನಮೂದಿಸಿ, 2025 ರ ಡಿಸೆಂಬರ್ 5 ರಂದು ನಕಲಿ ಜಿಪಿಎ (GPA) ದಾಖಲೆಯೊಂದನ್ನು ಸಿದ್ಧಪಡಿಸಿಕೊಂಡಿದ್ದರು.

2025 ರ ಡಿಸೆಂಬರ್ 6 ರಂದು 6ನೇ ಆರೋಪಿಯು ಈ ವಂಚನೆಯ ಜಿಪಿಎ ದಾಖಲೆಯನ್ನು ಕುಂದಾಪುರ ಉಪ ನೋಂದಣಾಧಿಕಾರಿ (Sub-Registrar) ಕಚೇರಿಗೆ ನೋಂದಣಿಗೆ ಹಾಜರುಪಡಿಸಿದ್ದಾನೆ. ಈ ವೇಳೆ ಮೃತ ದೇವರಾಯ ಪೈ ಅವರ ಸ್ಥಾನದಲ್ಲಿ 1ನೇ ಆರೋಪಿ ರಾಮಚಂದ್ರ ಕಾಮತ್ ಹಾಜರಾಗಿದ್ದರೆ, ಮೃತ ವಕೀಲ ಆನಂದರಾವ್ ಅವರ ಹೆಸರಿನಲ್ಲಿ ಮತ್ತೊಬ್ಬ ಅಪರಿಚಿತ ವ್ಯಕ್ತಿಯನ್ನು ನಿಲ್ಲಿಸಿ ಇವರಿಬ್ಬರ ಸಹಿ ಹಾಗೂ ಫೋಟೋವನ್ನು ಫೋರ್ಜರಿ ಮಾಡಲಾಗಿದೆ.

Also Read : ನಾಗರಮಠ ಮರಳು ದಕ್ಕೆ ಪರಿಶೀಲನೆ: ಲೋಕಾಯುಕ್ತ ಸೂಚನೆ ಮೇರೆಗೆ ತಜ್ಞರ ಜಂಟಿ ಸಮಿತಿ ಸ್ಥಳಕ್ಕೆ ಭೇಟಿ

ಈ ವಂಚನೆಯ ಜಿಪಿಎ ಪತ್ರಕ್ಕೆ 5ನೇ ಆರೋಪಿ ಲಕ್ಷ್ಮಣ ಶೆಟ್ಟಿ ಬರಹಗಾರನಾಗಿ ಸಹಿ ಮಾಡಿದ್ದು, ಕುಂದಾಪುರ ಉಪ ನೋಂದಣಾಧಿಕಾರಿ ಕಚೇರಿ ದಸ್ತಾವೇಜು ಸಂಖ್ಯೆ 471/2025-26 ರಂತೆ 2ನೇ ಆರೋಪಿಯ ಹೆಸರಿಗೆ ಆಸ್ತಿಯನ್ನು ಅಕ್ರಮವಾಗಿ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ನಕಲಿ ದಾಖಲೆ ಹಾಗೂ ನಕಲಿ ಜಿಪಿಎ ಸೃಷ್ಟಿಸಿ ಜಾಗ ನೋಂದಣಿ ಮಾಡಿರುವ ಆರೋಪದ ಅಡಿಯಲ್ಲಿ ರಾಮಚಂದ್ರ ಕಾಮತ್, ಗಣಪ , ರಾಧಾಕೃಷ್ಣ ಸಾರಂಗ, ಸಂಜೀವ, ಲಕ್ಷ್ಮಣ ಶೆಟ್ಟಿ ಮತ್ತು ನಾಗೇಶ್ ಕಾಮತ್ ಎಂಬುವವರ ವಿರುದ್ದ ಇದೀಗ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದೆ. ಸುನಿಲ್‌ ದೇವ ಪೈ ಅವರು ನೀಡಿದ ದೂರಿನ ಆಧಾರದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಕುಂದಾಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

kundapura dead person fake pan card fake gpa land scam fir

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories