RTI ನಿಯಮಗಳಿಗೆ ಹೈಕೋರ್ಟ್ ಮಹತ್ವದ ಟ್ವಿಸ್ಟ್! ಸರ್ಕಾರಿ ಅಧಿಕಾರಿಗಳ ಈ ವಿವರಗಳನ್ನು ಇನ್ಮುಂದೆ ಯಾರಿಗೂ ಕೊಡುವಂತಿಲ್ಲ!

ಒಬ್ಬ ವ್ಯಕ್ತಿ ಸರ್ಕಾರಿ ನೌಕರ ಎಂಬ ಏಕೈಕ ಕಾರಣಕ್ಕೆ ಆತನ ಪ್ರತಿಯೊಂದು ವೈಯಕ್ತಿಕ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಉಚ್ಛನ್ಯಾಯಾಲಯ ಸ್ಪಷ್ಟಪಡಿಸಿದೆ.

ಸರ್ಕಾರಿ ಅಧಿಕಾರಿಗಳ ಖಾಸಗಿ ವಿವರಗಳ ಸುರಕ್ಷತೆಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಅತ್ಯಂತ ಪ್ರಮುಖ ತೀರ್ಪೊಂದನ್ನು ನೀಡಿದೆ. ಒಬ್ಬ ವ್ಯಕ್ತಿ ಸರ್ಕಾರಿ ನೌಕರ ಎಂಬ ಏಕೈಕ ಕಾರಣಕ್ಕೆ ಆತನ ಪ್ರತಿಯೊಂದು ವೈಯಕ್ತಿಕ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಉಚ್ಛನ್ಯಾಯಾಲಯ ಸ್ಪಷ್ಟಪಡಿಸಿದೆ. ನಾಗರಿಕರಂತೆ ಸರ್ಕಾರಿ ನೌಕರರಿಗೂ ಸಂವಿಧಾನಬದ್ಧ ವೈಯಕ್ತಿಕ ಗೌಪ್ಯತೆಯ ಹಕ್ಕಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಬನಶಂಕರಿಯ ಸವಿತಮ್ಮ ಎಂಬುವರು ಕೆಎಸ್ಆರ್ಟಿಸಿ ನಿವೃತ್ತ ನೌಕರರೊಬ್ಬರ ಆಸ್ತಿ ವಿವರಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ಹೊರಡಿಸಿದೆ. ಈ ಮೂಲಕ ಈ ಹಿಂದೆ ಮಾಹಿತಿ ನೀಡಲು ನಿರಾಕರಿಸಿದ್ದ ರಾಜ್ಯ ಮಾಹಿತಿ ಆಯೋಗ ಮತ್ತು ಕೆಎಸ್ಆರ್ಟಿಸಿ ಇಲಾಖೆಯ ತೀರ್ಮಾನವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಇದನ್ನೂ ಓದಿ : ಗೃಹಲಕ್ಷ್ಮಿಯರೇ ಗಮನಿಸಿ: ₹2,000 ಹಣ ಮುಂದುವರಿಯಬೇಕಾದರೆ ತಕ್ಷಣ ಈ ಕೆಲಸ ಮಾಡಿ!

ಖಾಸಗಿ ವ್ಯಕ್ತಿಗಳ ನಡುವೆ ನಡೆಯುವ ಸಿವಿಲ್ ದಾವೆಗಳು ಅಥವಾ ಆಸ್ತಿ ವಿವಾದಗಳಿಗೆ ಕೋರ್ಟ್‌ನಲ್ಲಿ ಸಾಕ್ಷ್ಯ ಸಂಗ್ರಹಿಸುವ ಉದ್ದೇಶಕ್ಕಾಗಿ ಆರ್.ಟಿ.ಐ ಕಾಯ್ದೆಯನ್ನು ಒಂದು ಸಾಧನವಾಗಿ ದುರುಪಯೋಗಪಡಿಸಿಕೊಳ್ಳಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ. ಇಂತಹ ವೈಯಕ್ತಿಕ ಮಾಹಿತಿಗಳು ಸಾರ್ವಜನಿಕ ಹಿತಾಸಕ್ತಿಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೋರ್ಟ್ ವಿವರಿಸಿದೆ.
ಆರ್.ಟಿ.ಐ ಅಡಿಯಲ್ಲಿ ನೌಕರರ ವೈಯಕ್ತಿಕ ವಿವರಗಳನ್ನು ನೀಡಬೇಕಾದರೆ, ಅದರಲ್ಲಿ ವ್ಯಕ್ತಿಗತ ಹಿತಾಸಕ್ತಿಗಿಂತ ದೊಡ್ಡ ಮಟ್ಟದ ಸಾರ್ವಜನಿಕ ಹಿತಾಸಕ್ತಿ ಅಡಗಿರಬೇಕು. ಇಲಾಖೆಯ ಭ್ರಷ್ಟಾಚಾರವನ್ನು ಬಯಲಿಗೆಳೆಯಲು, ಸಾರ್ವಜನಿಕ ಹಣದ ದುರ್ಬಳಕೆ ತಡೆಯಲು ಅಥವಾ ಅಕ್ರಮ ಆಸ್ತಿ ಗಳಿಕೆಯನ್ನು ಸಾಬೀತುಪಡಿಸಲು ಕೋರಿದಾಗ ಮಾತ್ರ ನಿಯಮಾನುಸಾರ ಮಾಹಿತಿ ನೀಡಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories