ಪಿಎಂ ಕಿಸಾನ್ ಹಣ ಬರಲಿಲ್ಲವೇ? ಹಾಗಾದ್ರೆ ದೂರು ನೀಡಿ ಪರಿಹಾರ ಪಡೆಯಿರಿ

ಪಿಎಂ ಕಿಸಾನ್ ಯೋಜನೆಯ 23ನೇ ಕಂತಿನ ಹಣ ಕೆಲ ರೈತರ ಖಾತೆಗೆ ಜಮೆಯಾಗದಿದ್ದರೆ ಆತಂಕ ಬೇಡ. ಕಾರಣ ತಿಳಿದು ಸರಿಯಾದ ಕ್ರಮ ಕೈಗೊಂಡರೆ ಬಾಕಿ ಮೊತ್ತವನ್ನು ಪಡೆಯುವ ಅವಕಾಶವಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 23ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ಇದರಡಿ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ತಲಾ ₹2,000 ಜಮೆಯಾಗಿದ್ದು, ದೇಶದ ಕೋಟ್ಯಂತರ ರೈತರು ಇದರ ಲಾಭ ಪಡೆದಿದ್ದಾರೆ. ಆದರೂ ಕೆಲ ರೈತರಿಗೆ ಹಣ ಖಾತೆಗೆ ಬಂದಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನು ಮೂರು ಸಮಾನ ಕಂತುಗಳಾಗಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000 ಬಿಡುಗಡೆ ಮಾಡುವ ವ್ಯವಸ್ಥೆ ಇದೆ.

ಹಣ ಖಾತೆಗೆ ಜಮೆಯಾಗದಿದ್ದರೆ ಮೊದಲು ಕಾರಣ ತಿಳಿದುಕೊಳ್ಳುವುದು ಮುಖ್ಯ. ಇ-ಕೆವೈಸಿ ಪೂರ್ಣಗೊಳಿಸದಿರುವುದು, ಭೂ ದಾಖಲೆಗಳ ಪರಿಶೀಲನೆ ಆಗದಿರುವುದು, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ವೈಯಕ್ತಿಕ ಮಾಹಿತಿಯಲ್ಲಿ ತಪ್ಪುಗಳಿರುವುದು ಸೇರಿದಂತೆ ಹಲವು ಕಾರಣಗಳಿಂದ ಹಣ ತಡೆಹಿಡಿಯಲ್ಪಡುವ ಸಾಧ್ಯತೆ ಇದೆ.

ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದ್ದರೂ ಹಣ ಬಂದಿಲ್ಲದಿದ್ದರೆ 1800 180 1551 ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಸಂಬಂಧಿತ ಅಧಿಕಾರಿಗಳು ನಿಮ್ಮ ವಿವರಗಳನ್ನು ಪರಿಶೀಲಿಸಿ ಸಮಸ್ಯೆಯ ಕಾರಣವನ್ನು ತಿಳಿಸುತ್ತಾರೆ. ಬಳಿಕ ಅಗತ್ಯ ತಿದ್ದುಪಡಿ ಮಾಡಿದರೆ ಬಾಕಿ ಹಣ ಜಮೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಇ-ಕೆವೈಸಿ ಅಥವಾ ಅರ್ಜಿಯ ತಿದ್ದುಪಡಿ ಅಗತ್ಯವಿದ್ದರೆ ಸಮೀಪದ ಕಾಮನ್ ಸರ್ವಿಸ್ ಸೆಂಟರ್ (CSC)ಗೆ ಭೇಟಿ ನೀಡಬಹುದು. ಅಲ್ಲದೆ ಆನ್‌ಲೈನ್ ಮೂಲಕ CPGRAMS ಪೋರ್ಟಲ್‌ನಲ್ಲಿ ದೂರು ದಾಖಲಿಸುವ ಅವಕಾಶವೂ ಇದೆ. ದೂರು ಸಲ್ಲಿಸಿದ ನಂತರ ಅಧಿಕಾರಿಗಳು ಪರಿಶೀಲನೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಾರೆ.

ಆನ್‌ಲೈನ್ ಸೌಲಭ್ಯ ಬಳಸಲು ಸಾಧ್ಯವಾಗದವರು ತಮ್ಮ ಸಮೀಪದ ರೈತ ಸೇವಾ ಕೇಂದ್ರ ಅಥವಾ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಕೆಲ ಪ್ರಕರಣಗಳಲ್ಲಿ ಅನರ್ಹರು ತಪ್ಪು ದಾಖಲೆಗಳ ಮೂಲಕ ಯೋಜನೆಯ ಲಾಭ ಪಡೆದಿರುವುದು ಪತ್ತೆಯಾಗಿದ್ದು, ಅಂತಹ ಹೆಸರುಗಳನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ.

Related Stories