ಆಧಾರ್ ಕಾರ್ಡ್ ಡೌನ್ಲೋಡ್ ಈಗ ಇನ್ನಷ್ಟು ಸುಲಭ! ವಾಟ್ಸ್ಆಪ್ನಲ್ಲೇ ಕ್ಷಣಗಳಲ್ಲಿ
ಮೈಗವ್ ಸಹಾಯವಾಣಿ ವಾಟ್ಸ್ಆಪ್ ಸೇವೆ ಮೂಲಕ ಯಾವುದೇ ಹೆಚ್ಚುವರಿ ಆ್ಯಪ್ ಅಗತ್ಯವಿಲ್ಲದೆ ಕೆಲವೇ ಕ್ಷಣಗಳಲ್ಲಿ ಆಧಾರ್ ಕಾರ್ಡ್ ಅನ್ನು ಸುರಕ್ಷಿತವಾಗಿ ಡೌನ್ಲೋಡ್ ಮಾಡಬಹುದು. ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಡಿಜಿಲಾಕರ್ ಖಾತೆ ಸಾಕು.

ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಪ್ರತಿಯೊಬ್ಬ ಭಾರತೀಯನಿಗೂ ಅತ್ಯಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರಿ ಯೋಜನೆಗಳು, ಬ್ಯಾಂಕಿಂಗ್ ಸೇವೆಗಳು, ಗುರುತಿನ ದೃಢೀಕರಣ ಸೇರಿದಂತೆ ಹಲವು ಕೆಲಸಗಳಿಗೆ ಇದು ಕಡ್ಡಾಯವಾಗಿದೆ. ಆದರೆ ಕೆಲವೊಮ್ಮೆ ಕಾರ್ಡ್ ಕೈಯಲ್ಲಿ ಇಲ್ಲದಿರುವುದು ಅಥವಾ ಮೊಬೈಲ್ನಲ್ಲಿ ಅದರ ಪ್ರತಿಯಿಲ್ಲದಿರುವುದು ಸಮಸ್ಯೆಯಾಗಬಹುದು. ಇಂತಹ ಸಂದರ್ಭಗಳಲ್ಲಿ ವಾಟ್ಸ್ಆಪ್ ಮೂಲಕವೇ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ಸುಲಭ ವ್ಯವಸ್ಥೆ ಲಭ್ಯವಿದೆ.
ಕೇಂದ್ರ ಸರ್ಕಾರದ ಅಧಿಕೃತ ಮೈಗವ್ ಸಹಾಯವಾಣಿ ಚಾಟ್ಬಾಟ್ ಬಳಸಿಕೊಂಡು ಕೆಲವೇ ಕ್ಷಣಗಳಲ್ಲಿ ಆಧಾರ್ ಕಾರ್ಡ್ ಅನ್ನು ಪಿಡಿಎಫ್ ರೂಪದಲ್ಲಿ ಪಡೆಯಬಹುದು. ಇದಕ್ಕಾಗಿ ಹೆಚ್ಚುವರಿ ಆ್ಯಪ್ ಇನ್ಸ್ಟಾಲ್ ಮಾಡುವ ಅಗತ್ಯವಿಲ್ಲ. ನಿಮ್ಮ ಡಿಜಿಲಾಕರ್ ಖಾತೆಯಲ್ಲಿರುವ ದಾಖಲೆಗಳನ್ನು ವಾಟ್ಸ್ಆಪ್ನಲ್ಲೇ ಸುರಕ್ಷಿತವಾಗಿ ಪಡೆಯಬಹುದು.
ಈ ಸೇವೆಯನ್ನು ಬಳಸಲು ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಸಕ್ರಿಯವಾಗಿರಬೇಕು. ಜೊತೆಗೆ ಡಿಜಿಲಾಕರ್ ಖಾತೆ ಹೊಂದಿರಬೇಕು. ನಂತರ 9013151515 ಸಂಖ್ಯೆಯನ್ನು MyGov Helpdesk ಎಂದು ಮೊಬೈಲ್ನಲ್ಲಿ ಉಳಿಸಿಕೊಂಡು ವಾಟ್ಸ್ಆಪ್ನಲ್ಲಿ ಚಾಟ್ ಆರಂಭಿಸಬೇಕು.
ಚಾಟ್ನಲ್ಲಿ ಹಾಯ್ ಅಥವಾ ನಮಸ್ತೆ ಎಂದು ಕಳುಹಿಸಿದ ಬಳಿಕ DigiLocker Services ಆಯ್ಕೆಯನ್ನು ಆರಿಸಬೇಕು. ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ದಾಖಲಿಸಬೇಕು.
ಒಟಿಪಿ ದೃಢೀಕರಣ ಪೂರ್ಣಗೊಂಡ ಬಳಿಕ ಡಿಜಿಲಾಕರ್ನಲ್ಲಿ ಲಭ್ಯವಿರುವ ದಾಖಲೆಗಳ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ಆಧಾರ್ ಕಾರ್ಡ್ ಆಯ್ಕೆ ಮಾಡಿದರೆ ಪಿಡಿಎಫ್ ರೂಪದಲ್ಲಿರುವ ಇ ಆಧಾರ್ ವಾಟ್ಸ್ಆಪ್ ಚಾಟ್ನಲ್ಲೇ ಲಭ್ಯವಾಗುತ್ತದೆ. ಅದನ್ನು ಡೌನ್ಲೋಡ್ ಮಾಡಿಕೊಂಡು ಅಗತ್ಯವಿದ್ದಾಗ ಬಳಸಬಹುದು.
ಡಿಜಿಟಲ್ ಸೇವೆಗಳ ಬಳಕೆ ಹೆಚ್ಚುತ್ತಿರುವ ಈ ಸಮಯದಲ್ಲಿ, ಆಧಾರ್ ಕಾರ್ಡ್ ಅನ್ನು ಎಲ್ಲೆಂದರಲ್ಲಿ ಸುಲಭವಾಗಿ ಪಡೆಯುವ ಈ ವಿಧಾನ ಸಾರ್ವಜನಿಕರಿಗೆ ಸಮಯ ಉಳಿತಾಯದ ಜೊತೆಗೆ ಅನುಕೂಲಕರ ಸೇವೆಯಾಗಿ ಪರಿಣಮಿಸಿದೆ.

