ಕಾಫಿ ಕುಡಿಯುವುದರಿಂದ ಮೈಗ್ರೇನ್ ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ? ವೈದ್ಯರು ಹೇಳುವುದೇನು?
ಕೆಲವರಿಗೆ ಕೆಲವು ರೀತಿಯ ಆಹಾರಗಳನ್ನು ತಿನ್ನುವುದರಿಂದಲೂ ಮೈಗ್ರೇನ್ ಉಂಟಾಗಬಹುದು. ಇನ್ನು ಕೆಲವರಿಗೆ ಅತಿ ಒತ್ತಡದಿಂದಲೂ ಬರಬಹುದು. ಹಾಗಾದ್ರೆ ಇದಕ್ಕೆ ಕಾಫಿಯಿಂದ ಪರಿಹಾರ ಸಿಗುತ್ತಾ? ಇಲ್ಲಿದೆ ಓದಿ.
ಇಂದಿನ ಜಗತ್ತು ಇರುವುದೇ ಹೀಗೆ. ಆಧುನಿಕ ಜೀವನಶೈಲಿ, ಪ್ರತಿಯೊಂದಕ್ಕೂ ಸಮಯದ ಅಭಾವ, ಒತ್ತಡ. ಇದರ ಪರಿಣಾಮ ಮಾತ್ರ ಮಾನವನ ಆರೋಗ್ಯದ ಮೇಲೆ. ಇತ್ತೀಚೆಗೆ ಮೈಗ್ರೇನ್ನಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ. ಕೆಲವರಿಗೆ ಕೆಲವು ರೀತಿಯ ಆಹಾರಗಳನ್ನು ತಿನ್ನುವುದರಿಂದಲೂ ಮೈಗ್ರೇನ್ ಉಂಟಾಗಬಹುದು. ಇನ್ನು ಕೆಲವರಿಗೆ ಅತಿ ಒತ್ತಡದಿಂದಲೂ ಬರಬಹುದು. ಅಂದರೆ ಮೈಗ್ರೇನ್ ಅಥವಾ ಅರೆ ತಲೆನೋವಿಗೆ ಸ್ಪಷ್ಟ ಕಾರಣಗಳಿಲ್ಲ. ಇದಕ್ಕೆ ಕೆಲವರು ಕಾಫಿ ಪರಿಹಾರವೆಂದು ಹೇಳುತ್ತಾರೆ. ಇನ್ನು ಕೆಲವರು ಕಾಫಿಯಿಂದಲೇ ಮೈಗ್ರೇನ್ ಹೆಚ್ಚಾಗುತ್ತದೆ ಎಂದೂ ಹೇಳುತ್ತಾರೆ. ಆದರೆ ತಜ್ಞರ ಪ್ರಕಾರ ಇದಕ್ಕೆ ಉತ್ತರ ಒಂದೇ ರೀತಿಯಾಗಿಲ್ಲ. ಕಾಫಿಯ ಪರಿಣಾಮವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಎಂದು ಅವರು ಹೇಳುತ್ತಾರೆ. ಹಾಗಾದರೆ ಕಾಫಿ, ಮೈಗ್ರೇನ್ಗೆ ಯಾವ ರೀತಿ ಸ್ಪಂದಿಸುತ್ತದೆ ಎಂದು ನೋಡೋಣ.
ಮೈಗ್ರೇನ್ಗೆ ಕಾಫಿ ಪರಿಹಾರವೇ?
ಈ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ತಜ್ಞರ ಪ್ರಕಾರ ಕಾಫಿಯಲ್ಲಿರುವ ಕೆಫೀನ್ ಮೆದುಳಿನಲ್ಲಿ ಅಡೆನೊಸಿನ್ ಅನ್ನು ನಿರ್ಬಂಧಿಸುತ್ತದೆ ಮತ್ತು ರಕ್ತನಾಳಗಳು ಸಂಕುಚಿತಗೊಳ್ಳಲು ಕಾರಣವಾಗುತ್ತದೆ. ಮೈಗ್ರೇನ್ ಸಮಯದಲ್ಲಿ, ಮೆದುಳಿನಲ್ಲಿರುವ ರಕ್ತನಾಳಗಳು ಹಿಗ್ಗುತ್ತವೆ. ಇದು ನೋವನ್ನು ಹೆಚ್ಚಿಸುತ್ತದೆ. ಅಂತಹ ಸಮಯದಲ್ಲಿ ಕೆಫೀನ್ ರಕ್ತನಾಳಗಳನ್ನು ಸಂಕುಚಿತಗೊಳಿಸಲು ಸಹಾಯ ಮಾಡುತ್ತದೆ, ಇದು ಕೆಲವು ಜನರಲ್ಲಿ ತಲೆನೋವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ಕೆಫೀನ್ ಅನ್ನು ಕೆಲವು ತಲೆನೋವಿನ ಔಷಧಿಗಳಲ್ಲಿಯೂ ಬಳಸಲಾಗುತ್ತದೆ. ಆದರೆ ಎಲ್ಲಾ ಮೈಗ್ರೇನ್ ಪೀಡಿತರಿಗೂ ಕಾಫಿ ಒಂದೇ ರೀತಿ ಕೆಲಸ ಮಾಡುವುದಿಲ್ಲ. ಕೆಲವರಿಗೆ ಕಾಫಿ ಕುಡಿದ ತಕ್ಷಣ ಮೈಗ್ರೇನ್ ಕಾಣಿಸಿಕೊಳ್ಳಬಹುದು. ಅಂತಹವರು ಕಾಫಿಯಿಂದ ದೂರವಿರುವುದೇ ಉತ್ತಮ. ಇನ್ನೊಂದು ಅತಿ ಮುಖ್ಯ ವಿಷಯವೆಂದರೆ ಪ್ರತಿದಿನ ಕಾಫಿ ಕುಡಿಯುವವರು ಕಾಫಿ ತಪ್ಪಿಸಿದಾಗಲೂ ಮೈಗ್ರೇನ್ ಬರಬಹುದು. ಅಂತಹ ದಿನಗಳಲ್ಲಿ ಒಮ್ಮೆಲೆ ಕಾಫಿ ಕುಡಿಯುವುದನ್ನು ಬಿಡುವ ಬದಲು ಕ್ರಮೇಣ ಕಡಿಮೆ ಮಾಡುವುದು ಉತ್ತಮ. ಆದರೆ ತಜ್ಞರ ಪ್ರಕಾರ ಕಾಫಿ ಕುಡಿದ ನಂತರ ಮೈಗ್ರೇನ್ ಬರುತ್ತಿದ್ದರೆ ಕಾಫಿ ಕುಡಿಯುವುದನ್ನು ನಿಲ್ಲಿಸುವುದು ಉತ್ತಮ.
ಇದನ್ನೂ ಓದಿ : ಮನೆ ಊಟನೂ ಸೇಫ್ ಅಲ್ಲ! ನೀವು ದಿನಾ ತಿನ್ನೋ ಆಹಾರದಲ್ಲಿದೆ ‘ಸ್ಲೋ ಪಾಯ್ಸನ್’.. ಹುಷಾರ್!
ಕಾಫಿಯನ್ನು ಹೇಗೆ ಬಳಸಬೇಕು?
ಕಾಫಿಯನ್ನು ಮಿತವಾಗಿ ಕುಡಿಯುದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಎಂದು ತಜ್ಞರು ಸಲಹೆ ನೀಡುತ್ತಾರೆ. ದಿನಕ್ಕೆ ಒಂದು ಅಥವಾ ಎರಡು ಕಪ್ ಕಾಫಿ ಕುಡಿಯುವುದು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಆದರೆ ದಿನಕ್ಕೆ ಮೂರರಿಂದ ನಾಲ್ಕು ಕಪ್ಗಿಂತ ಅಧಿಕ ಕಾಫಿ ಕುಡಿಯುವ ಅಭ್ಯಾಸ ಅನಾರೋಗ್ಯಕರ ಎನ್ನಲಾಗುತ್ತದೆ. ಇದರಿಂದ ಮೈಗ್ರೇನ್ ಅಪಾಯವೂ ಹೆಚ್ಚುತ್ತದೆ. ಆದರೆ ಕಾಫಿಯಿಂದಲೇ ಮೈಗ್ರೇನ್ ಬರುತ್ತಿದ್ದರೆ ಕಾಫಿಯಿಂದ ದೂರವಿರುವುದೇ ಉತ್ತಮ. ಹಾಗೆಂದು ತಕ್ಷಣ ನಿಲ್ಲಿಸಬಾರದು, ದಿನಕ್ಕೆ ನಾಲ್ಕು ಕಪ್ ಕಾಫಿ ಕುಡಿಯುತ್ತಿದ್ದರೆ ಕ್ರಮೇಣ ಅದನ್ನು ಮೂರು ಕಪ್, ಎರಡು ಕಪ್ ನಂತರ ಒಂದು ಕಪ್ ಹೀಗೆ ಕಡಿಮೆ ಮಾಡುತ್ತಾ ಬರಬೇಕು. ನಂತರ ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ ಎಂದು ತಜ್ಞರು ಸೂಚಿಸುತ್ತಾರೆ.

