ಎಸ್‌ಬಿಐ ಬ್ಯಾಂಕ್ ಗ್ರಾಹಕರೇ ಎಚ್ಚರ! ಈ ಮೆಸೇಜ್ ಕ್ಲಿಕ್ ಮಾಡಿದರೆ ಖಾತೆ ಖಾಲಿ ಖಾಲಿ

ಎಸ್‌ಬಿಐ ರಿವಾರ್ಡ್ ಪಾಯಿಂಟ್ ಹೆಸರಿನಲ್ಲಿ ನಕಲಿ ಸಂದೇಶಗಳು ಹರಿದಾಡುತ್ತಿವೆ. ಅಪರಿಚಿತ ಲಿಂಕ್ ಅಥವಾ APK ಫೈಲ್ ಡೌನ್‌ಲೋಡ್ ಮಾಡಿದರೆ ಬ್ಯಾಂಕ್ ಖಾತೆಯ ಮಾಹಿತಿ ಕಳುವಾಗುವ ಅಪಾಯವಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಎಸ್‌ಬಿಐ (SBI) ಗ್ರಾಹಕರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚಕರು ಹೊಸ ತಂತ್ರ ಬಳಸುತ್ತಿದ್ದಾರೆ. ‘SBI Rewards’ ಹೆಸರಿನಲ್ಲಿ ನಕಲಿ ಎಸ್‌ಎಂಎಸ್ ಮತ್ತು ಸಾಮಾಜಿಕ ಜಾಲತಾಣಗಳ ಸಂದೇಶಗಳನ್ನು ಕಳುಹಿಸಿ, ಗ್ರಾಹಕರ ಬ್ಯಾಂಕ್ ಖಾತೆಯ ಮಾಹಿತಿಯನ್ನು ಕದಿಯಲು ಯತ್ನಿಸಲಾಗುತ್ತಿದೆ.

ಸಾಮಾನ್ಯವಾಗಿ ಬ್ಯಾಂಕುಗಳು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಕೆಗೆ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತವೆ. ಈ ಪಾಯಿಂಟ್‌ಗಳನ್ನು ಶಾಪಿಂಗ್, ಮೊಬೈಲ್ ರೀಚಾರ್ಜ್ ಸೇರಿದಂತೆ ವಿವಿಧ ಸೇವೆಗಳಿಗೆ ಬಳಸಬಹುದು. ಇದೇ ವಿಚಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ವಂಚಕರು, ರಿವಾರ್ಡ್ ಪಾಯಿಂಟ್ ರಿಡೀಮ್ ಮಾಡುವ ನೆಪದಲ್ಲಿ ಗ್ರಾಹಕರಿಗೆ ನಕಲಿ ಲಿಂಕ್‌ಗಳನ್ನು ಕಳುಹಿಸುತ್ತಿದ್ದಾರೆ.

ಈ ಕುರಿತು ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟ ಎಚ್ಚರಿಕೆ ನೀಡಿದೆ. ಎಸ್‌ಬಿಐ ತನ್ನ ಗ್ರಾಹಕರಿಗೆ ಎಸ್‌ಎಂಎಸ್ ಅಥವಾ ವಾಟ್ಸ್ಆಪ್ ಮೂಲಕ APK ಫೈಲ್ ಅಥವಾ ಅನುಮಾನಾಸ್ಪದ ಲಿಂಕ್ ಕಳುಹಿಸಿ ಡೌನ್‌ಲೋಡ್ ಮಾಡಲು ಎಂದಿಗೂ ಸೂಚಿಸುವುದಿಲ್ಲ ಎಂದು ತಿಳಿಸಿದೆ. ಇಂತಹ ಸಂದೇಶಗಳು ಸಂಪೂರ್ಣ ನಕಲಿ ಎಂದು ಗ್ರಾಹಕರಿಗೆ ಎಚ್ಚರಿಕೆ ನೀಡಲಾಗಿದೆ.

ಒಂದು ವೇಳೆ ಗ್ರಾಹಕರು ಆ ಲಿಂಕ್ ಕ್ಲಿಕ್ ಮಾಡಿ APK ಫೈಲ್ ಡೌನ್‌ಲೋಡ್ ಮಾಡಿದರೆ, ಮೊಬೈಲ್‌ನಲ್ಲಿ ಮಾಲ್‌ವೇರ್ ಇನ್‌ಸ್ಟಾಲ್ ಆಗುವ ಸಾಧ್ಯತೆ ಇದೆ. ನಂತರ ವಂಚಕರು ನಿಮ್ಮ ಬ್ಯಾಂಕಿಂಗ್ ವಿವರಗಳು, OTP, ಪಾಸ್‌ವರ್ಡ್ ಹಾಗೂ ಇತರ ವೈಯಕ್ತಿಕ ಮಾಹಿತಿಯನ್ನು ಕದಿದು ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ದುರ್ಬಳಕೆ ಮಾಡಬಹುದು.

ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಲು ಅಪರಿಚಿತ ಸಂಖ್ಯೆಯಿಂದ ಬಂದ ಯಾವುದೇ ಲಿಂಕ್ ಅಥವಾ ಫೈಲ್ ತೆರೆಯಬಾರದು. ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, OTP ಅಥವಾ PIN ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅನುಮಾನಾಸ್ಪದ ಸಂದೇಶ ಬಂದರೆ ನೇರವಾಗಿ ಎಸ್‌ಬಿಐ ಅಧಿಕೃತ ಗ್ರಾಹಕ ಸೇವೆ ಅಥವಾ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ದೃಢಪಡಿಸಿಕೊಳ್ಳುವುದು ಸುರಕ್ಷಿತ.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »