ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ.. ಎಚ್ಚರ ವಹಿಸುವಂತೆ ಸಾರ್ವಜನಿಕರಲ್ಲಿ ಜಿಲ್ಲಾಡಳಿತ ಮನವಿ
ಕರಾವಳಿ ತೀರ ಹಾಗೂ ಪಶ್ಚಿಮ ಘಟ್ಟದ ಮಲೆನಾಡು ಭಾಗಗಳಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಪ್ರಸ್ತುತ ಹವಾಮಾನದ ಏರುಪೇರನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಹವಾಮಾನ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಆರು ಪ್ರಮುಖ ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಮುನ್ಸೂಚನೆ ನೀಡಿದೆ.

ಈ ಬಾರಿ ಬರಗಾಲ ಎಂದುಕೊಂಡಿದ್ದ ರಾಜ್ಯದ ಜನತೆಗೆ ಜುಲೈ ತಿಂಗಳ ಮಳೆ ಸಂತಸದ ಜೊತೆ ಶಾಕ್ ಕೊಟ್ಟಿದೆ. ಜೂನ್ ತಿಂಗಳ ಮಳೆಯ ಅಭಾವವನ್ನೆಲ್ಲ ಜುಲೈ ತಿಂಗಳ ಮಳೆ ಸರಿದೂರಿಗಿಸಿಕೊಂಡು ಹೋಗ್ತಿದೆ. ಕರ್ನಾಟಕದಾದ್ಯಂತ ಮುಂಗಾರು ಮಳೆಯ ತೀವ್ರತೆಯು ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಕರಾವಳಿ ತೀರ ಹಾಗೂ ಪಶ್ಚಿಮ ಘಟ್ಟದ ಮಲೆನಾಡು ಭಾಗಗಳಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಪ್ರಸ್ತುತ ಹವಾಮಾನದ ಏರುಪೇರನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಹವಾಮಾನ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಆರು ಪ್ರಮುಖ ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಮುನ್ಸೂಚನೆಯನ್ನು ಅಧಿಕೃತವಾಗಿ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಮುಂದಿನ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ಅತ್ಯಧಿಕ ಪ್ರಮಾಣದ ಮಳೆ ಸುರಿಯುವ ಸಾಧ್ಯತೆ ದಟ್ಟವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಪ್ರವಾಹ ಸದೃಶ ಮಳೆಯಿಂದಾಗಿ ಈಗಾಗಲೇ ಕರಾವಳಿಯ ಪ್ರಮುಖ ನದಿಗಳು ಮತ್ತು ಉಪನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಇದರಿಂದಾಗಿ ತಗ್ಗು ಪ್ರದೇಶಗಳ ಜಲಾವೃತ ಭೀತಿ ಎದುರಾಗಿದ್ದು, ಜನಜೀವನ ಸಂಪೂರ್ಣವಾಗಿ ಸ್ತಬ್ದಗೊಂಡಿದೆ.
ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಸೇರಿದಂತೆ ಮಳೆಯ ಆರ್ಭಟ ಹೆಚ್ಚಿರುವ ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾಡಳಿತಗಳು ಮುಂಜಾಗ್ರತಾ ರಜೆಯನ್ನು ಘೋಷಿಸಿವೆ. ಪಶ್ಚಿಮ ಘಟ್ಟದ ಹೆದ್ದಾರಿ ವಲಯಗಳಲ್ಲಿ ತೀವ್ರ ಸ್ವರೂಪದ ಭೂಕುಸಿತ ಉಂಟಾಗುವ ಆತಂಕ ಇರುವುದರಿಂದ ವಾಹನ ಸವಾರರು ರಾತ್ರಿ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಮತ್ತು ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಇಲಾಖೆಯು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಜಲಾಶಯಗಳ ನೀರಿನ ಒಳಹರಿವು ಹೆಚ್ಚುತ್ತಿದ್ದು, ತಟದ ನಿವಾಸಿಗಳು ನಿಯಂತ್ರಣ ಕೊಠಡಿಯ ಸಂಪರ್ಕದಲ್ಲಿರಲು ಕೋರಲಾಗಿದೆ.

