ಬೆಳಗಿನ ಉಪಹಾರಕ್ಕೆ ಆರೋಗ್ಯಕರ ‘ಸ್ಟಫ್ಡ್ ಪಾಲಕ್ ಇಡ್ಲಿ’: ಇಲ್ಲಿದೆ ಸುಲಭ ರೆಸಿಪಿ.
ಬೆಳಿಗ್ಗೆ ಎದ್ದ ತಕ್ಷಣ 'ಇವತ್ತು ತಿಂಡಿಗೆ ಏನು ಮಾಡುವುದು?' ಎಂಬ ಗೊಂದಲ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಅದರಲ್ಲೂ ಮಕ್ಕಳಿಗೆ ಸೊಪ್ಪು ಮತ್ತು ತರಕಾರಿಗಳನ್ನು ತಿನ್ನಿಸುವುದು ಪೋಷಕರಿಗೆ ಒಂದು ದೊಡ್ಡ ಸವಾಲು. ಈ ಎಲ್ಲಾ ಚಿಂತೆಗಳಿಗೆ ಇಲ್ಲಿದೆ ಒಂದು ಸೂಪರ್ ಪರಿಹಾರ!

ಬೆಳಿಗ್ಗೆ ಎದ್ದ ತಕ್ಷಣ ‘ಇವತ್ತು ತಿಂಡಿಗೆ ಏನು ಮಾಡುವುದು?’ ಎಂಬ ಗೊಂದಲ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಅದರಲ್ಲೂ ಮಕ್ಕಳಿಗೆ ಸೊಪ್ಪು ಮತ್ತು ತರಕಾರಿಗಳನ್ನು ತಿನ್ನಿಸುವುದು ಪೋಷಕರಿಗೆ ಒಂದು ದೊಡ್ಡ ಸವಾಲು. ಈ ಎಲ್ಲಾ ಚಿಂತೆಗಳಿಗೆ ಇಲ್ಲಿದೆ ಒಂದು ಸೂಪರ್ ಪರಿಹಾರ! ನಿಮ್ಮ ದೈನಂದಿನ ಇಡ್ಲಿಗೆ ಕೊಂಚ ಡಿಫರೆಂಟ್ ಟ್ವಿಸ್ಟ್ ನೀಡಿ, ಪಾಲಕ್ ಸೊಪ್ಪು ಮತ್ತು ಆಲೂಗಡ್ಡೆ ಮಸಾಲೆಯನ್ನು ಬಳಸಿ ಆರೋಗ್ಯಕರ ಹಾಗೂ ರುಚಿಕರವಾದ ‘ಸ್ಟಫ್ಡ್ ಪಾಲಕ್ ಇಡ್ಲಿ’ ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು:
ಇಡ್ಲಿ ಹಿಟ್ಟಿಗೆ:
- ಇಡ್ಲಿ ಹಿಟ್ಟು
- ಪಾಲಕ್ ಸೊಪ್ಪು
- ಹಸಿರು ಮೆಣಸಿನಕಾಯಿ
- ಶುಂಠಿ
- ಉಪ್ಪು (ರುಚಿಗೆ ತಕ್ಕಷ್ಟು)
ಮಸಾಲಾ ಸ್ಟಫಿಂಗ್ಗೆ:
- ಬೇಯಿಸಿದ ಆಲೂಗಡ್ಡೆ
- ಈರುಳ್ಳಿ (ಸಣ್ಣಗೆ ಹೆಚ್ಚಿದ್ದು)
- ಸಾಸಿವೆ & ಜೀರಿಗೆ
- ಅರಿಶಿನ ಪುಡಿ
- ಗರಂ ಮಸಾಲಾ
- ಕೊತ್ತಂಬರಿ ಸೊಪ್ಪು
- ಎಣ್ಣೆ ಮತ್ತು ಉಪ್ಪು
ಮಾಡುವ ಸರಳ ವಿಧಾನ:
ಹಂತ 1: ಹಸಿರು ಇಡ್ಲಿ ಹಿಟ್ಟು ಸಿದ್ಧಪಡಿಸುವುದು
- ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಕಾಯಿಸಿ, ಅದರಲ್ಲಿ ತೊಳೆದ ಪಾಲಕ್ ಸೊಪ್ಪನ್ನು ಕೇವಲ 2 ನಿಮಿಷಗಳ ಕಾಲ ಬೇಯಿಸಿ (ಬ್ಲಾಂಚ್ ಮಾಡಿ) ನಂತರ ತಣ್ಣಗಾಗಲು ಬಿಡಿ.
- ಈಗ ಮಿಕ್ಸಿ ಜಾರ್ಗೆ ಬೆಂದ ಪಾಲಕ್ ಸೊಪ್ಪು, ಹಸಿರು ಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
- ಈ ಪಾಲಕ್ ಪೇಸ್ಟ್ ಅನ್ನು ಇಡ್ಲಿ ಹಿಟ್ಟಿಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಿ.
ಹಂತ 2: ಆಲೂಗಡ್ಡೆ ಮಸಾಲೆ ಸಿದ್ಧಪಡಿಸುವುದು
- ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ ಹಾಕಿ ಒಗ್ಗರಣೆ ಕೊಡಿ. ನಂತರ ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
- ಇದಕ್ಕೆ ಅರಿಶಿನ ಪುಡಿ, ಗರಂ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೇಯಿಸಿ ಪುಡಿ ಮಾಡಿದ ಆಲೂಗಡ್ಡೆ ಸೇರಿಸಿ ಚೆನ್ನಾಗಿ ಕೈಯಾಡಿಸಿ.
- ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ ಕೆಳಗಿಳಿಸಿ. ಮಿಶ್ರಣ ತಣ್ಣಗಾದ ಮೇಲೆ, ಸಣ್ಣ ಸಣ್ಣ ಚಪ್ಪಟೆಯಾದ (ಟಿಕ್ಕಿ ಆಕಾರದ) ಉಂಡೆಗಳನ್ನು ಮಾಡಿಟ್ಟುಕೊಳ್ಳಿ.
ಹಂತ 3: ಸ್ಟಫ್ಡ್ ಇಡ್ಲಿ ಬೇಯಿಸುವುದು
- ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ, ಮೊದಲು 1 ಚಮಚ ಸಿದ್ಧಪಡಿಸಿದ ಪಾಲಕ್ ಇಡ್ಲಿ ಹಿಟ್ಟನ್ನು ಹಾಕಿ.
- ಅದರ ಮಧ್ಯದಲ್ಲಿ ನಾವು ರೆಡಿ ಮಾಡಿಟ್ಟುಕೊಂಡ ಆಲೂಗಡ್ಡೆ ತಟ್ಟೆಯನ್ನು (ಮಸಾಲೆ) ಇಡಿ.
- ಈಗ ಆ ಆಲೂಗಡ್ಡೆ ಮಸಾಲೆಯ ಮೇಲೆ ಮತ್ತೊಂದು ಚಮಚ ಇಡ್ಲಿ ಹಿಟ್ಟನ್ನು ಹಾಕಿ, ಮಸಾಲೆ ಸಂಪೂರ್ಣವಾಗಿ ಮುಚ್ಚುವಂತೆ ಕವರ್ ಮಾಡಿ.
- ಕೊನೆಯದಾಗಿ ಇಡ್ಲಿ ಪಾತ್ರೆಯಲ್ಲಿ ಇಟ್ಟು ಸುಮಾರು 10 ರಿಂದ 12 ನಿಮಿಷಗಳ ಕಾಲ ಆವಿಯಲ್ಲಿ ಚೆನ್ನಾಗಿ ಬೇಯಿಸಿ.
ಸೇವಿಸುವ ವಿಧಾನ: ಈಗ ಬಿಸಿಬಿಸಿಯಾದ, ಸಾಫ್ಟ್ ಆದ ಸ್ಟಫ್ಡ್ ಪಾಲಕ್ ಇಡ್ಲಿ ಸಿದ್ಧ! ಇದನ್ನು ಕಾಯಿ ಚಟ್ನಿ ಅಥವಾ ಬಿಸಿ ಸಾಂಬಾರ್ ಜೊತೆ ಸವಿಯಲು ಅದ್ಭುತವಾಗಿರುತ್ತದೆ. ಮಕ್ಕಳ ಲಂಚ್ ಬಾಕ್ಸ್ಗೂ ಇದು ಬೆಸ್ಟ್ ಆಪ್ಷನ್.

