ಆಂಧ್ರ ಪ್ರದೇಶದ ಜನಪ್ರಿಯ ಉಪಹಾರ ಪೆಸರಟ್ಟು : ಪ್ರೋಟೀನ್ ಭರಿತ ಈ ತಿಂಡಿ ತೂಕ ಇಳಿಕೆಗೂ ಬೆಸ್ಟ್
ಬೆಳಗ್ಗಿನ ಉಪಹಾರ ಪೋಷಕಾಂಶಗಳಿಂದ ಕೂಡಿದ್ದರೆ ದಿನವಿಡೀ ಕೆಲಸಕ್ಕೆ ಬೇಕಾಗುವ ಶಕ್ತಿಯನ್ನು ಒದಗಿಸಲು ಸಹಾಯಮಾಡುತ್ತದೆ. ಇದಕ್ಕೆ ಪ್ರೋಟೀನ್ ಆಗರವಾಗಿರುವ ಹೆಸರುಕಾಳಿನಿಂದ ತಯಾರಿಸುವ ಪೆಸರಟ್ಟು ಉತ್ತಮವಾಗಿದೆ.
ಬೆಳಗ್ಗಿನ ಉಪಹಾರ ಅತ್ಯಂತ ಮಹತ್ವದ್ದಾಗಿದೆ. ದಿನವಿಡೀ ಕೆಲಸ ಮಾಡಲು ಬೇಕಾಗುವ ಶಕ್ತಿಯನ್ನು ಒದಗಿಸಲು ಬೆಳಗ್ಗಿನ ಉಪಹಾರ ಮುಖ್ಯವಾಗಿದೆ. ಆಂಧ್ರಪ್ರದೇಶದ ಸಾಂಪ್ರದಾಯಿಕ ತಿಂಡಿ ಪೆಸರಟ್ಟು ಬೆಳಗಿನ ಉಪಹಾರಕ್ಕೆ ಪರ್ಫೆಕ್ಟ್ ಆಗಿದೆ. ಇದು ಪ್ರೊಟೀನ್ನ ಅತ್ಯುತ್ತಮ ಮೂಲವಾಗಿರುವುದರ ಜೊತೆಗೆ ತೂಕ ಇಳಿಕೆಗೂ ಬೆಸ್ಟ್ ಆಗಿದೆ. ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ತಿಂಡಿಯನ್ನು ಹೆಸರು ಕಾಳಿನಿಂದ ತಯಾರಿಸಲಾಗುತ್ತದೆ. ಉಪ್ಪು, ಖಾರ ಹದವಾಗಿ ಬೆರೆತಿರುವ ಪೆಸರಟ್ಟು ಮಕ್ಕಳ ಲಂಚ್ ಬಾಕ್ಸಿಗೂ ಉತ್ತಮವಾಗಿದೆ. ಮಕ್ಕಳಿಗೆ ದಿನವೊಂದಕ್ಕೆ ಅಗತ್ಯವಿರುವ ಪ್ರೋಟೀನ್ ಅನ್ನು ಇದು ಒದಗಿಸುತ್ತದೆ. ರುಚಿಯಾದ ಅಷ್ಟೆ ಗರಿಗರಿಯಾಗಿರುವ ಪೆಸರಟ್ಟು ತಯಾರಿಸುವುದು ಹೇಗೆ? ಇಲ್ಲಿದೆ ಓದಿ.
ಬೇಕಾಗುವ ಸಾಮಗ್ರಿಗಳು
ಹೆಸರುಕಾಳು: 1 ಕಪ್
ಅಕ್ಕಿ: 2-3 ಚಮಚ (ದೋಸೆ ಗರಿಗರಿಯಾಗಲು)
ಹಸಿಮೆಣಸಿನಕಾಯಿ: 2–3
ಶುಂಠಿ: 1 ಇಂಚು
ಜೀರಿಗೆ: 1 ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ: ದೋಸೆ ತಯಾರಿಸಲು
ಇದನ್ನೂ ಓದಿ: ಒಂದೇ ರೀತಿಯ ಪುಲಾವ್ ತಿಂದ ಬೇಜಾರಾಗಿದ್ರೆ ಕೇವಲ 15 ನಿಮಿಷದಲ್ಲಿ ಮಹಾರಾಷ್ಟ್ರ ಶೈಲಿಯ ‘ಥೇಚಾ ಪುಲಾವ್’ ತಯಾರಿಸಿ
ಪೆಸರಟ್ಟು ತಯಾರಿಸುವ ವಿಧಾನ
ಮೊದಲಿಗೆ ಹೆಸರು ಕಾಳು ಮತ್ತು ಅಕ್ಕಿಯನ್ನು ಒಟ್ಟಿಗೆ ತೊಳೆದು 5–6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
ನಂತರ ನೀರು ಬಸಿದು ಅದನ್ನು ಮಿಕ್ಸಿ ಜಾರ್ಗೆ ಹಾಕಿ. ಅದರ ಜೊತೆಗೆ ಹಸಿಮೆಣಸಿನಕಾಯಿ, ಶುಂಠಿ, ಜೀರಿಗೆ ಮತ್ತು ಉಪ್ಪು ಸೇರಿಸಿ. ಸ್ವಲ್ಪ ಸ್ವಲ್ಪವೇ ನೀರು ಸೇರಿಸಿಕೊಳ್ಳುತ್ತಾ ಹಿಟ್ಟನ್ನು ರುಬ್ಬಿಕೊಳ್ಳಿ.
ದೋಸೆ ಮಾಡುವ ತವಾ ತೆಗೆದುಕೊಂಡು ಹದವಾಗಿ ಬಿಸಿಮಾಡಿ. ಈಗ ಅದರ ಮೇಲೆ ಎಣ್ಣೆ ಸವರಿ. ಒಂದು ದೊಡ್ಡ ಚಮಚದ ಸಹಾಯದಿಂದ ಪೆಸರಿಟ್ಟು ದೋಸೆ ಹಿಟ್ಟನ್ನು ತೆಗೆದುಕೊಂಡು ತವಾ ಮೇಲೆ ಹಾಕಿ ತೆಳುವಾಗಿ ಹರಡಿ.
ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿ ಹೊಂಬಣ್ಣ ಬರುವವರೆಗೆ ಎರಡೂ ಕಡೆ ಬೇಯಿಸಿ.
ಗರಿಗರಿಯಾದ ಪೆಸರಟ್ಟು ಸವಿಯಲು ಸಿದ್ಧ. ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಸರ್ವ್ ಮಾಡಿ.



