ಅಯೋಧ್ಯೆ ಹುಂಡಿ ಕಳ್ಳತನ ಪ್ರಕರಣ : ರಾಜ್ಯದ ದೇಗುಲಗಳಲ್ಲಿ ಕಾಣಿಕೆ ಹುಂಡಿಕೆ ಹೈಟೆಕ್​ ಭದ್ರತೆ

ದೇಶಾದ್ಯಂತ ಸಂಚಲನ ಮೂಡಿಸಿರುವ ಅಯೋಧ್ಯೆಯ ರಾಮಮಂದಿರದ ಹುಂಡಿ ಹಣ ಕಳ್ಳತನ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ರಾಜ್ಯದ ಮುಜರಾಯಿ ದೇವಸ್ಥಾನಗಳ ಭದ್ರತೆಯನ್ನು ಸಂಪೂರ್ಣವಾಗಿ ಹೈಟೆಕ್ ಮಾಡಲು ನಿರ್ಧರಿಸಿದೆ.

ದೇಶಾದ್ಯಂತ ಸಂಚಲನ ಮೂಡಿಸಿರುವ ಅಯೋಧ್ಯೆಯ ರಾಮಮಂದಿರದ ಹುಂಡಿ ಹಣ ಕಳ್ಳತನ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ರಾಜ್ಯದ ಮುಜರಾಯಿ ದೇವಸ್ಥಾನಗಳ ಭದ್ರತೆಯನ್ನು ಸಂಪೂರ್ಣವಾಗಿ ಹೈಟೆಕ್ ಮಾಡಲು ನಿರ್ಧರಿಸಿದೆ. ಈ ಸಂಬಂಧ ಕಂದಾಯ ಹಾಗೂ ಧಾರ್ಮಿಕ ದತ್ತಿ ಇಲಾಖೆಯು 19 ಕಟ್ಟುನಿಟ್ಟಿನ ನಿಯಮಗಳನ್ನೊಳಗೊಂಡ ನೂತನ ಮಾರ್ಗಸೂಚಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ಇನ್ಮುಂದೆ ರಾಜ್ಯದ ದೇವಸ್ಥಾನಗಳಲ್ಲಿ ಹುಂಡಿ ಇರುವ ಜಾಗಗಳನ್ನು ಗುರುತಿಸಿ, ಎಲ್ಲರಿಗೂ ಸ್ಪಷ್ಟವಾಗಿ ಕಾಣುವಂತೆ ಹುಂಡಿಗಳನ್ನು ಇಡಬೇಕು. ಈ ಹುಂಡಿಗಳಿಗೆ ನಾಲ್ಕೂ ದಿಕ್ಕಿನಿಂದ ಕಾವಲು ಇರುವಂತೆ ವೆಬ್ ಕ್ಯಾಮೆರಾಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ. ಈ ಹಿಂದೆ ಸಿಸಿಟಿವಿ ಕ್ಯಾಮೆರಾಗಳನ್ನು ಉದ್ದೇಶಪೂರ್ವಕವಾಗಿ ತಿರುಗಿಸುವುದು, ಆಫ್ ಮಾಡುವುದು ಅಥವಾ ಕರ್ಪೂರದ ಹೊಗೆಯಿಂದ ಲೆನ್ಸ್ ಮರೆಯಾಗುವಂತೆ ಮಾಡಿ ಕಳ್ಳತನ ಮಾಡಲಾಗುತ್ತಿತ್ತು.

ಇದನ್ನು ತಡೆಯಲು ಈಗ ಅಳವಡಿಸುವ ವೆಬ್ ಕ್ಯಾಮೆರಾಗಳ ನೇರ ದೃಶ್ಯಾವಳಿಗಳನ್ನು ಜಿಲ್ಲಾಧಿಕಾರಿ ಕಚೇರಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಚೇರಿಯ ಸರ್ವರ್‌ನಲ್ಲಿ ಕಡ್ಡಾಯವಾಗಿ ಸಂಗ್ರಹಿಸಿಡಬೇಕು. ಜೊತೆಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೂ ಇದರ ಸಂಪರ್ಕ ಕಲ್ಪಿಸಲಾಗುತ್ತದೆ.

ನಗದು ರೂಪದ ಕಳ್ಳತನ ಹಾಗೂ ಜೇಬುಗಳ್ಳತನಕ್ಕೆ ಬ್ರೇಕ್ ಹಾಕಲು ಮುಜರಾಯಿ ಇಲಾಖೆಯು ಇನ್ನು ಮುಂದೆ ಡಿಜಿಟಲ್ ಪಾವತಿ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಿದೆ. ಭಕ್ತರು ಯುಪಿಐ ಮತ್ತು ಕ್ಯೂಆರ್ ಕೋಡ್ ಮೂಲಕ ನೇರವಾಗಿ ದೇವಸ್ಥಾನದ ಬ್ಯಾಂಕ್ ಖಾತೆಗೆ ಡಿಜಿಟಲ್ ದೇಣಿಗೆ ನೀಡಲು ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಈ ಕ್ಯೂಆರ್ ಕೋಡ್‌ಗಳನ್ನು ಕೇವಲ ಹುಂಡಿ ಇರುವ ನಿಗದಿತ ಜಾಗದಲ್ಲಿ ಮಾತ್ರವೇ ಪ್ರದರ್ಶಿಸಬೇಕು ಹಾಗೂ ಇದರ ದುರ್ಬಳಕೆಯಾಗದಂತೆ ತೀವ್ರ ನಿಗಾ ವಹಿಸಬೇಕು.

ಈ ಎಲ್ಲ ಡಿಜಿಟಲ್ ವ್ಯವಹಾರಗಳನ್ನು ದೇವಸ್ಥಾನದ ಅಧಿಕೃತ ಲೆಕ್ಕಪತ್ರಕ್ಕೆ ಲಿಂಕ್ ಮಾಡಲಾಗುತ್ತದೆ.
ಹುಂಡಿ ಹಣ ಎಣಿಕೆ ಪ್ರಕ್ರಿಯೆಯಲ್ಲೂ ದೊಡ್ಡ ಬದಲಾವಣೆ ತರಲಾಗಿದೆ. ದೇವಸ್ಥಾನದ ಆದಾಯಕ್ಕೆ ಅನುಗುಣವಾಗಿ ಹುಂಡಿ ಎಣಿಕೆಯ ದಿನಗಳನ್ನು ಮುಂಚಿತವಾಗಿಯೇ ಕ್ಯಾಲೆಂಡರ್‌ನಲ್ಲಿ ನಿಗದಿಪಡಿಸಬೇಕು. ಹೆಚ್ಚು ಆದಾಯ ಬರುವ ದೇಗುಲಗಳಲ್ಲಿ ವಾರಕ್ಕೊಮ್ಮೆ ಹಾಗೂ ಸಾಧಾರಣ ಆದಾಯ ಇರುವ ಕಡೆಗಳಲ್ಲಿ 15 ದಿನಗಳಿಗೊಮ್ಮೆ ಕಡ್ಡಾಯವಾಗಿ ಎಣಿಕೆ ಕಾರ್ಯ ನಡೆಯಬೇಕು.

ಈ ಇಡೀ ಪ್ರಕ್ರಿಯೆಯು ಸಂಬಂಧಪಟ್ಟ ತಹಶೀಲ್ದಾರ್ ಸಮ್ಮುಖದಲ್ಲೇ ನಡೆಯಲಿದ್ದು, ಹುಂಡಿಯಲ್ಲಿ ಸಿಗುವ ಚಿನ್ನ, ಬೆಳ್ಳಿ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಅದೇ ದಿನವೇ ಮೌಲ್ಯಮಾಪನ ಮಾಡಿ, ಜಿಲ್ಲಾ ಉಪಖಜಾನೆಯಲ್ಲಿ ಜಮಾ ಮಾಡಬೇಕೆಂದು ಕಂದಾಯ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

Ayodhya Hundi Theft Case High-tech security for temple offering boxes across the state

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »