ಜಗತ್ತಿರುವರೆಗೂ ಜಾನಕಮ್ಮನಿಗೆ ಸಾವಿಲ್ಲ; ಎಸ್‌ ಜಾನಕಿ ಒಡನಾಟ ನೆನೆದು ಪಿ ಸುಶೀಲಾ ಕಣ್ಣೀರು!

ಗಾನಕೋಗಿಲೆ ಎಸ್. ಜಾನಕಿ (S Janaki) ಅವರ ನಿಧನದ ಬೆನ್ನಲ್ಲೇ, ಅವರ ಸಮಕಾಲೀನ ಹಿರಿಯ ಗಾಯಕಿ ಪಿ. ಸುಶೀಲಾ (P Susheela) ಅವರು ಹಂಚಿಕೊಂಡಿರುವ ವಿಡಿಯೋ ಸಂದೇಶವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬೆಂಗಳೂರು: ಭಾರತೀಯ ಚಿತ್ರರಂಗದ ಇಬ್ಬರು ಧ್ರುವತಾರೆಗಳು, ಕೋಗಿಲೆ ಕಂಠದ ಗಾಯಕಿಯರಾದ ಎಸ್‌‌. ಜಾನಕಿ ಹಾಗೂ ಪಿ. ಸುಶೀಲ ಅವರ ಸ್ನೇಹ ಜಗತ್ಪ್ರಸಿದ್ಧ. ಇದೀಗ ಗಾನಕೋಗಿಲೆ ಎಸ್. ಜಾನಕಿ (S Janaki) ಅವರ ನಿಧನದ ಬೆನ್ನಲ್ಲೇ, ಅವರ ಸಮಕಾಲೀನ ಹಿರಿಯ ಗಾಯಕಿ ಪಿ. ಸುಶೀಲಾ (P Susheela) ಅವರು ಹಂಚಿಕೊಂಡಿರುವ ವಿಡಿಯೋ ಸಂದೇಶವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜಾನಕಮ್ಮನೊಂದಿಗಿನ ಒಡನಾಟ, ಸ್ನೇಹ ಹಾಗೂ ಕೆಲವರು ಇಬ್ಬರ ಮಧ್ಯೆ ತಂದಿಡುತ್ತಿದ್ದ ಜಗಳದ ಬಗ್ಗೆ ಸುಶೀಲಾ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ನನ್ನ ಒಡಹುಟ್ಟಿದ ಸಹೋದರಿಯನ್ನೇ ಕಳೆದುಕೊಂಡಂತಾಗಿದೆ!

ಎಸ್. ಜಾನಕಿ ಅವರ ನಿಧನವನ್ನು ತಮ್ಮ ವೈಯಕ್ತಿಕ ನಷ್ಟ ಎಂದು ಕಣ್ಣೀರಿಟ್ಟಿರುವ ಪಿ. ಸುಶೀಲಾ, “ಇದು ನನ್ನ ಜೀವನದ ಅತ್ಯಂತ ದುಃಖಕರ ದಿನ. 50 ವರ್ಷಗಳಿಗೂ ಹೆಚ್ಚು ಕಾಲ ನನ್ನೊಂದಿಗೆ ಒಡನಾಟ ಹೊಂದಿದ್ದ ನನ್ನ ಆತ್ಮೀಯ ಸ್ನೇಹಿತೆ, ಸಹೋದರಿ ಜಾನಕಿಯವರ ಹಠಾತ್ ನಿಧನವನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಾವಿಬ್ಬರೂ ಸುಮಾರು ಐದು ದಶಕಗಳ ಕಾಲ ಸಂಗೀತ ಲೋಕದಲ್ಲಿ ಒಟ್ಟಿಗೆ ಪ್ರಯಾಣ ಮಾಡಿದ್ದೇವೆ. ಅನೇಕ ಭಾಷೆಗಳಲ್ಲಿ ಲೆಕ್ಕವಿಲ್ಲದಷ್ಟು ಹಾಡುಗಳನ್ನು ಹಾಡಿದ್ದೇವೆ. ಇಂದು ನಾನು ಒಬ್ಬ ಶ್ರೇಷ್ಠ ಸಹೋದ್ಯೋಗಿಯನ್ನು ಮಾತ್ರವಲ್ಲ, ನನ್ನ ಪ್ರೀತಿಯ ತಂಗಿಯನ್ನೇ ಕಳೆದುಕೊಂಡಿದ್ದೇನೆ” ಎಂದು ಭಾವುಕರಾಗಿದ್ದಾರೆ.

‘ನಮ್ಮ ಮಧ್ಯೆ ಜಗಳ ತಂದಿಟ್ಟು ತಮಾಷೆ ನೋಡಿದ್ರು…’

ತಮ್ಮ ಮತ್ತು ಜಾನಕಿ ಅವರ ನಡುವೆ ಮೂರನೇ ವ್ಯಕ್ತಿಗಳು ಹುಟ್ಟುಹಾಕುತ್ತಿದ್ದ ವದಂತಿಗಳ ಬಗ್ಗೆಯೂ ಸುಶೀಲಾ ಇದೇ ವೇಳೆ ಆಕ್ರೋಶ ಹೊರಹಾಕಿದ್ದಾರೆ.”ನಾವು ಚಿತ್ರರಂಗದಲ್ಲಿದ್ದಷ್ಟು ದಿನವೂ ಅನೇಕರು ನಮ್ಮನ್ನು ಟಾರ್ಗೆಟ್‌ ಮಾಡಿದ್ದರು. ನನ್ನ ಬಗ್ಗೆ ಆಕೆಗೆ ಚಾಡಿ ಹೇಳಿ, ಆಕೆಯ ಬಗ್ಗೆ ನನಗೆ ತಪ್ಪು ತಿಳುವಳಿಕೆ ಮೂಡಿಸಿ, ನಮ್ಮ ಮಧ್ಯೆ ಜಗಳ ತಂದಿಟ್ಟು ತಮಾಷೆ ನೋಡುತ್ತಿದ್ದರು. ಇದೆಲ್ಲಾ ಮಾಡಿ ಅವರೆಲ್ಲ ಏನು ಸಾಧಿಸಿದ್ರು? ಈಗಲಾದರೂ ಅವರು ತಂಪಾಗಿರಲಿ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, “ಆಕೆಗೆ ಸಾವೇ ಇಲ್ಲ, ಅವಳು ನೇರವಾಗಿ ದೇವರ ಬಳಿಗೆ ಹೋಗಿದ್ದಾಳೆ. ಇಂತಹ ಅದೃಷ್ಟ ಯಾರಿಗೂ ಸಿಗಲ್ಲ. ಜನ ಪುಣ್ಯ ಮಾಡಿದ್ದಕ್ಕೆ ಆಕೆಯ ಸುಮಧುರ ದನಿಯನ್ನು ಕೇಳುವ ಅವಕಾಶ ಸಿಕ್ಕಿತ್ತು. ‘ಸಿಂಗಾರವಲೆ ದೇವ’ ಹಾಡನ್ನು ಜಾನಕಿ ಹಾಡಿದ ರೀತಿಯಲ್ಲಿ ಬೇರೆ ಯಾರೂ ಹಾಡಲು ಸಾಧ್ಯವಿಲ್ಲ” ಎಂದು ಸುಶೀಲಾ ಕೊಂಡಾಡಿದ್ದಾರೆ.

ಕನ್ನಡದಲ್ಲಿ ಮೂಡಿಬಂದಿದ್ದ ಇಬ್ಬರ ಸೂಪರ್ ಹಿಟ್ ಜುಗಲ್‌ಬಂದಿ

ಎಸ್. ಜಾನಕಿ ಹಾಗೂ ಪಿ. ಸುಶೀಲ ಇಬ್ಬರೂ ಸೇರಿ ಚಿತ್ರರಂಗಕ್ಕೆ ನೂರಾರು ಹಿಟ್ ಹಾಡುಗಳನ್ನು ನೀಡಿದ್ದಾರೆ. ಕನ್ನಡದಲ್ಲಿಯೂ ಇವರಿಬ್ಬರ ಕಾಂಬಿನೇಷನ್ ಸೂಪರ್ ಹಿಟ್ ಆಗಿತ್ತು.

  • ‘ಚದುರಂಗ’ ಚಿತ್ರದ ‘ಮಮತೆಯ ತೋಟದ ಮಲ್ಲಿಗೆಯೆ’

  • ‘ಚಕ್ರವ್ಯೂಹ’ ಚಿತ್ರದ ‘ನಿಜ ಹೇಳುವೆನು ಅಮ್ಮ ನಿನ್ನ ಕಂಡರೆ ಪ್ರೀತಿ’

ಸೇರಿದಂತೆ ಅನೇಕ ಕ್ಲಾಸಿಕ್ ಹಾಡುಗಳಿಗೆ ಈ ಇಬ್ಬರು ಗಾನಕೋಕಿಲೆಯರು ಜಂಟಿಯಾಗಿ ಧ್ವನಿಯಾಗಿದ್ದರು.

ಜಗತ್ತಿರುವರೆಗೂ ಜಾನಕಮ್ಮನಿಗೆ ಸಾವಿಲ್ಲ!

“ಜಾನಕಿ ಇಲ್ಲದ ಸಂಗೀತ ಲೋಕವನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಈ ತಲೆಮಾರಿನ ಜನ ಜಾನಕಮ್ಮನ ಧ್ವನಿ ಕೇಳಿ ಧನ್ಯರಾಗಿದ್ದಾರೆ. ಭೌತಿಕವಾಗಿ ಅವರು ನಮ್ಮನ್ನು ಅಗಲಿದ್ದರೂ, ಅವರು ಹಾಡಿರುವ ಸಾವಿರಾರು ಅಮರ ಗೀತೆಗಳ ಮೂಲಕ ಅವರು ಎಂದಿಗೂ ಜೀವಂತವಾಗಿರುತ್ತಾರೆ. ಈ ಜಗತ್ತು ಇರುವವರೆಗೂ ಎಸ್‌ ಜಾನಕಿ ಅವರಿಗೆ ಸಾವಿಲ್ಲ” ಎಂದು ಪಿ ಸುಶೀಲಾ ಅವರು ತಮ್ಮ ಆತ್ಮೀಯ ಗೆಳತಿಗೆ ಕಣ್ಣೀರಿನ ವಿದಾಯ ಹೇಳಿದ್ದಾರೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.