ಶಿಕ್ಷಕರಿಗೆ ಗುಡ್ನ್ಯೂಸ್ : 15 ಸಾವಿರ ಶಿಕ್ಷಕರ ಹುದ್ದೆ ಭರ್ತಿಗೆ ಅಧಿಕೃತ ಚಾಲನೆ
Karnataka Teacher Recruitment 2026 : ಪಾಸಾಗಲು ಪ್ರತಿ ಪತ್ರಿಕೆಯಲ್ಲೂ ಕನಿಷ್ಠ ಶೇ. 35 ಅಂಕ ಗಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಕೊರತೆಯನ್ನು ನೀಗಿಸಲು ಕೊನೆಗೂ ರಾಜ್ಯ ಸರ್ಕಾರ ಮುಂದಾಗಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬರೋಬ್ಬರಿ 15,000 ಬೋಧನಾ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಲಾಗಿದೆ.
ಇದಕ್ಕಾಗಿ ‘ವಿಶೇಷ ನಿಯಮಗಳು 2026’ರ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಈ ಬೃಹತ್ ನೇಮಕಾತಿಯ ಉಸ್ತುವಾರಿಗಾಗಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ನೇತೃತ್ವದಲ್ಲಿ 16 ಸದಸ್ಯರ ಬಲಿಷ್ಠ ಪರೀಕ್ಷಾ ಪ್ರಾಧಿಕಾರವನ್ನು ರಚಿಸಲಾಗಿದೆ.
ಈ ನೇಮಕಾತಿಯಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ 8,500 ಹುದ್ದೆಗಳು ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ 4,500 ಹುದ್ದೆಗಳು ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರು, ಗಣಕ ವಿಜ್ಞಾನ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ತುಂಬಲಾಗುತ್ತಿದೆ.
ಒಟ್ಟು ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 6,967 ಹುದ್ದೆಗಳನ್ನು ಮೀಸಲಿಡಲಾಗಿದ್ದು, ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳಿಗೆ 8,033 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ವಸ್ತುನಿಷ್ಠ ಮತ್ತು ವಿವರಣಾತ್ಮಕ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದೆ.
ಪಾಸಾಗಲು ಪ್ರತಿ ಪತ್ರಿಕೆಯಲ್ಲೂ ಕನಿಷ್ಠ ಶೇ. 35 ಅಂಕ ಗಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಅಂತಿಮ ಮೆರಿಟ್ ಪಟ್ಟಿಯನ್ನು ಸ್ಪರ್ಧಾತ್ಮಕ ಪರೀಕ್ಷೆ, ಶಿಕ್ಷಕರ ಅರ್ಹತಾ ಪರೀಕ್ಷೆ ಮತ್ತು ಶೈಕ್ಷಣಿಕ ಅರ್ಹತೆಯ ಅಂಕಗಳ ವೇಟೇಜ್ ಆಧರಿಸಿ ಸಿದ್ಧಪಡಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ನಿಗದಿಪಡಿಸಲಾಗಿದ್ದು, ಸಾಮಾನ್ಯ ವರ್ಗಕ್ಕೆ 38 ವರ್ಷ ಹಾಗೂ ಎಸ್ಸಿ, ಎಸ್ಟಿ ಮತ್ತು ವಿಶೇಷ ಚೇತನರಿಗೆ 43 ವರ್ಷಗಳ ಗರಿಷ್ಠ ವಯೋಮಿತಿ ಇರಲಿದೆ.
ಈ ಹೊಸ ಕರಡು ನಿಯಮಗಳಿಗೆ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ, ಸಾರ್ವಜನಿಕರು 15 ದಿನಗಳ ಒಳಗಾಗಿ ಬೆಂಗಳೂರಿನಲ್ಲಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತವಾಗಿ ಸಲ್ಲಿಸಬಹುದಾಗಿದೆ.
Karnataka 15000 teacher recruitment 2026 notification

