ಬಾಲಿವುಡ್, ಟಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಲ್ಲಿ ಮಿಂಚುತ್ತಿರುವ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಇತ್ತೀಚಿಗಷ್ಟೇ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಂತೆ ಒಂದೊಳ್ಳೆ ಕೆಲಸಕ್ಕೆ ಮುಂದಾಗಿರುವ ಪೂಜಾ ಟಾಲಿವುಡ್ ಮಂದಿಗೆ ಕರಾವಳಿ ಮಾವಿನ ಹಣ್ಣಿನ ರುಚಿ ತೋರಿಸಿದ್ದಾರೆ.

ಮೂಲತಃ ಮಂಗಳೂರಿನವರಾದ ಪೂಜಾ ಹೆಗ್ಡೆ ಬಾಲಿವುಡ್, ಟಾಲಿವುಡ್ ನಲ್ಲಿ ಮಿಂಚಿದ ಮೇಲೂ ತಾಯ್ನೆಲದ ನಂಟು ಕಡಿದುಕೊಂಡಿಲ್ಲ. ಮಂಗಳೂರಿನಲ್ಲಿ ಪೂಜಾ ಹೆಗ್ಡೆ ಕುಟುಂಬಕ್ಕೆ ಸೇರಿದ ಮಾವಿನತೋಟವಿದೆ. ಈ ತೋಟದಲ್ಲಿ ಈ ವರ್ಷ ಉತ್ತಮ ಇಳುವರಿ ಬಂದಿದೆಯಂತೆ.

ಹೀಗಾಗಿ ಕರಾವಳಿ ಮಾವಿನ ಹಣ್ಣಿನ ಸವಿಯನ್ನು ಚಿತ್ರರಂಗದ ಮಂದಿಗೂ ತೋರಿಸಲು ಮುಂದಾಗಿರುವ ಪೂಜಾ, ತಮ್ಮ ನೆಚ್ಚಿನ ನಿರ್ಮಾಪಕರು, ನಿರ್ದೇಶಕರು ಹಾಗೂ ತಂತ್ರಜ್ಞರಿಗೆ ಕಳುಹಿಸಿದ್ದಾರೆ.

ಅಲಾ ವೈಕುಂಠಪುರಂಲೋ ಮೂಲಕ ತಮಗೆ ದೊಡ್ಡ ಮಟ್ಟದ ಸಕ್ಸಸ್ ನೀಡಿದ ಖ್ಯಾತ ನಿರ್ದೇಶಕ ತ್ರಿವಿಕ್ರಮ ಅವರಿಗೆ ಮೊದಲು ಮಾವಿನಹಣ್ಣನ್ನು ಪ್ಯಾಕ್ ಮಾಡಿ ಕಳುಹಿಸಿದ್ದಾರಂತೆ ಪೂಜಾ.

ಇದಲ್ಲದೇ ಹಲವು ನಟ-ನಿರ್ದೇಶಕ-ನಿರ್ಮಾಪಕರಿಗೂ ಪೂಜಾ ಮನೆಯ ಮಾವಿನಹಣ್ಣು ಸವಿಯೋ ಅವಕಾಶ ಸಿಕ್ಕಿದೆಯಂತೆ.

ನಟಿಸುವ ಎಲ್ಲ ಚಿತ್ರಗಳು ಸಕ್ಸಸ್ ಕಾಣುವ ಮೂಲಕ ಪೂಜಾ ಹೆಗ್ಡೆ, ಟಾಲಿವುಡ್ ನ ಲಕ್ಕಿ ಹಿರೋಯಿನ್ ಎಂದೇ ಕರೆಯಿಸಿಕೊಳ್ಳುತ್ತಿದ್ದು,ಸದ್ಯ ವಿಜಯ್ ಅವರ ದಳಪತಿ-65 ಚಿತ್ರದಲ್ಲಿ ನಟಿಸುತ್ತಿದ್ದು, ಪ್ರಭಾಸ್ ಜೊತೆಗಿನ ರಾಧೆ ಶ್ಯಾಮ್ ಬಿಡುಗಡೆಗೆ ಕಾದಿದ್ದಾರೆ.
