ಭಾನುವಾರ, ಮೇ 11, 2025
HomeSpecial Storyನೋಡ ನೋಡುತ್ತಲೇ ಬಾಬಾನ ಮೇಲೆ ಬಂದು ಬಿಟ್ಟಿತ್ತು ದೇವರು..! ಬಾಬಾನ ಗಲ್ಲಾಪೆಟ್ಟಿಗೆ ತುಂಬಿತ್ತು..! ಭಾಗ-24

ನೋಡ ನೋಡುತ್ತಲೇ ಬಾಬಾನ ಮೇಲೆ ಬಂದು ಬಿಟ್ಟಿತ್ತು ದೇವರು..! ಬಾಬಾನ ಗಲ್ಲಾಪೆಟ್ಟಿಗೆ ತುಂಬಿತ್ತು..! ಭಾಗ-24

- Advertisement -

ಹುಕ್ಕೇರಿಯ ಬಾಬಾನ ಮುಂದೆ ನಾನು ಮತ್ತು ನನ್ನ ಗೆಳೆಯ ಮಲ್ಲಿಕಾರ್ಜುನ ಪಾಟೀಲ್ ಮಾತ್ರವಲ್ಲ, ನೂರಾರು ಜನ ಇದ್ವಿ… ಇದ್ದಕ್ಕಿದ್ದಂತೆ ಬಾಬಾ ಹೂಂಕರಿಸತೊಡಗಿದ್ದ.. ಏನಾಯ್ತು ಅಂತ ಅಲ್ಲೇ ನಿಂತಿದ್ದ ಹಿರಿಕರೊಬ್ಬರನ್ನ ಕೇಳಿದ್ದೆ… ಬಾಬಾ ಮೇಲೆ ದೇವರು ಬಂದಿದೆ.. ಇದೀಗ ಭಾನಾಮತಿಗೆ ಒಳಗಾದವರನ್ನ ಕರೆದು ದೂರ ಮಾಡುತ್ತೆ ಅಂದಿದ್ದ.. ಅಯ್ಯೋ ಮೂಢ ಅಂತ ಮನಸ್ಸಲ್ಲೇ ಅಂದುಕೊಂಡು ಸುಮ್ಮನೆ ನಿಂತ.. ಅಲ್ಲಿರೋರೆಲ್ಲ ಅವನ ಆಟಗಳಿಗೆ ಬೆದರೋರೆ… ಅಂತವರ ನಡುವೆ ನಾನು ಮತ್ತು ಮಲ್ಲಿಕಾರ್ಜುನ್ ಪಾಟೀಲ್ ಏನು ತಾನೇ ಮಾಡಲು ಸಾಧ್ಯ.. ಇದೆಲ್ಲ ಢೋಂಗಿ ಕಣ್ರಪ್ಪ ಅಂತ ಹೇಳೋ ಧೈರ್ಯ ಮಾಡಲಿಲ್ಲ.. ಮಾಡಿದ್ರು ಅಲ್ಲಿ ನಮ್ಮ ಮಾತು ನಂಬುವವರು ಯಾರು ಇರಲಿಲ್ಲ ಅನ್ನೋದು ಕೂಡ ಅಷ್ಟೆ ವಾಸ್ತವ…

ಬಾಬಾ ಹಾಂ ಹ್ರೀಂ.. ಅನ್ನ ತೊಡಗಿದ್ದ.. ನೋಡ ನೋಡುತ್ತಲೇ ಕೂತಿದ್ದ ಜಾಗದಿಂದ ಎದ್ದು ಕುಣಿಯೋಕೆ ಆರಂಭಿಸಿದ್ದ.. ಸಾಲಿನಲ್ಲಿ ಮೊದಲು ಬಂದಿದ್ದ ವ್ಯಕ್ತಿ… 16ರ ಹರೆಯದ ತನ್ನ ಮಗಳನ್ನ ಆ ಬಾಬಾ ಮುಂದೆ ಕೂರಿಸಿದ್ದ.. ಏನಾಗುತ್ತದೋ ಅಂತ ನೋಡೋ ಕುತೂಹಲ ನನ್ನದು.. ಹೀಗಾಗಿ ಆತನ ಚಟುವಟಿಕೆಗಳ ಮೇಲೆ ನಿಗಾ ಇಟ್ಟುಕೊಂಡು ನಿಂತಿದ್ದೆ… ಆ ಹೆಣ್ಣು ಮಗಳನ್ನ ಬಾಬಾ ಮುಂದೆ ಕೂರಿಸಿದ ವ್ಯಕ್ತಿ, ನಮ್ಮ ಮಗಳಿಗೆ ಯಾರೋ ಭಾನಾಮತಿ ಮಾಡಿದ್ದಾರೆ ಬಾಬಾ ಅಂದಿದ್ದ.. ಅಷ್ಟೆ ಹೂಂ… ಅದೆಲ್ಲಾ ನನಗೆ ಗೊತ್ತು.. ನೀನೇನು ಹೇಳಬೇಡ.. ಈ ನನ್ ಮಗಳಿಗೆ ಯಾರು ಕೇಡು ಬಯಸಿದ್ದಾರೆ ಅನ್ನೋದು ಗೊತ್ತು… ನಾನು ನೋಡ್ಕೊತ್ತೀನಿ ಅಂತೇಳಿದವನೇ ತನ್ನ ಕೈಯಲ್ಲಿದ್ದ ನವಿಲು ಗರಿಯಿಂದ ಆ ಹುಡುಗಿಯ ನೆತ್ತಿ ಮೇಲೆ ಮೂರು ಬಾರಿ ಬಡಿದ… ನಂತ್ರ ಕೆಂಡಕ್ಕೆ ಸಾಂಬ್ರಾಣಿ ಸುರಿದವನೇ ಆ ಊದರವನ್ನ ಹುಡುಗಿ ಮುಖದ ಕಡೆಗೆ ನೂಕಿದ… ನಂತ್ರ ಒಂದಿಷ್ಟು ಭಸ್ಮ ತೆಗೆದುಕೊಂಡವನೇ ಹುಡುಗಿಯ ಹಣೆಗೆ ಹಚ್ಚಿದ್ದ.. ನಂತ್ರ ಒಂದಿಷ್ಟು ನೀರು ತಗೊಂಡು ಆಕೆಯ ಮುಖಕ್ಕೆ ಎರಚಿದ್ದ.. ಸಹಜವಾಗಿ ನೀರು ಮುಖಕ್ಕೆ ಎರಚಿದ್ರೆ ಎಲ್ಲರೂ ಬೆಚ್ಚುತ್ತಾರೆ.. ಅದೇ ರೀತಿ ಆ ಹುಡುಗಿಯೂ ಬೆಚ್ಚಿದ್ಲು… ಅ… ಹೂಂ… ಭಾನಾಮತಿ ತೆಗೆದ್ದಿದ್ದೀನಿ, ಕಾಣಿಕೆ ಕೊಟ್ಟು ಮಗುವನ್ನ ಕರೆದುಕೊಂಡು ಹೋಗು ಅಂದಿದ್ದ..

ಪಾಪ ಆ ಮನುಷ್ಯ 500ರ ನೋಟು ಕೈಗಿಟ್ಟು ಅಲ್ಲಿಂದ ತೆರಳಿದ್ದ… ಇದೇ ರೀತಿ ಸುಮಾರು 20ಕ್ಕೂ ಹೆಚ್ಚು ಮಂದಿಯಿಂದ ಹಣ ಪೀಕಿದ್ದ.. ಒಬ್ಬೊಬ್ಬರಿಗೂ ಒಂದೊಂದು ಮಂತ್ರ ಪಠಿಸಿದ್ದ.. ಎಲ್ಲವನ್ನೂ ನೋಡುತ್ತಲೇ ನಿಂತಿದ್ದೆವು.. ಮಧ್ಯರಾತ್ರಿ ಕಳೆಯುವ ಹೊತ್ತಿಗೆ ಅವನ ಗಲ್ಲಾ ಪೆಟ್ಟಿಗೆಯಲ್ಲಿ ಭರ್ತಿ ಹತ್ತು ಸಾವಿರಕ್ಕೂ ಹೆಚ್ಚು ಹಣ ಜಮೆಯಾಗಿತ್ತು…ಇದು ಪ್ರತಿ ಅಮವಾಸ್ಯೆಯ ಬಹಿರಂಗ ಸುಲಿಗೆ.. ಈ ಸುಲಿಗೆ ವಿರುದ್ದ ಅನೇಕರು ಧ್ವನಿ ಎತ್ತಿರೋದು ಇದೆ.. ಅಷ್ಟೆ ಅಲ್ಲ, ಅನೇಕ ಬಾಬಾಗಳನ್ನ ಪೊಲೀಸ್ರು ಬಂಧಿಸಿಯೂ ಇದ್ದಾರೆ.. ನಂತ್ರ ಅವರೆಲ್ಲಾ ಜಾಮೀನಿನ ಮೇಲೆ ಹೊರ ಬಂದು ಮತ್ತದೆ ಕಸುಬು ಮುಂದುವರಿಸುತ್ತಿರೋದಕ್ಕೂ ಉದಾಹರಣೆಗಳು ಸಾಕಷ್ಟಿವೆ.. ಇದೆಕ್ಕೆಲ್ಲಾ ಕಡಿವಾಣ ಬೀಳಬೇಕು ಅಂದ್ರೆ ಕಾನೂನು ಬಿಗಿಯಾಗಬೇಕು… ನಿಮಗೊಂದು ಅಸಲಿ ಸತ್ಯ ಗೊತ್ತಾ…? ಈ ರೀತಿ ದೇವರ ಹೆಸ್ರಲ್ಲಿ ಬೆದರಿಕೆ ಹಾಕಿದ್ರು ಭಾನಾಮತಿ, ಮಾಟ ಮಂತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನುಗಳು ಇಲ್ಲ… ಹೀಗಾಗಿಯೇ ಮಾಂತ್ರಿಕರು ಆಡಿದ್ದೇ ಆಟವಾಗಿದೆ.. ಅಷ್ಟೆ ಅಲ್ಲ ಇದು ಬೇಲೆಬಲ್ ಅಫೆನ್ಸ್.. ಸಲೀಸಾಗಿ ಜಾಮೀನು ಸಿಕ್ಕಿಬಿಡುತ್ತೆ.. ಇದು ಗೊತ್ತಿದ್ದೇ ಮಾಂತ್ರಿಕರು ಕಾನೂನಿಗೆ ಹೆದರದೆ ವಂಚಿಸುತ್ತಲೇ ಇದ್ದಾರೆ…

ಭಾನಾಮತಿಯಾಗಲಿ, ಮಾಟ ಮಂತ್ರವಾಗಲಿ ಕಾಶ್ಮೋರದಂತಹ 64 ಕ್ಷುದ್ರ ವಿದ್ಯೆಗಳಿಗೂ ಅತ್ಯವಶ್ಯಕವಾಗಿರೋದು ಕಣ್ಣು ಕಟ್ಟು ವಿದ್ಯೆ.. ಈ ಒಂದು ವಿದ್ಯೆ ಮಾಂತ್ರಿಕನಿಗೆ ತಿಳಿದು ಬಿಟ್ಟರೆ ಆತ ಕೂತ ಜಾಗದಲ್ಲೆ ಸಾವಿರಾರು ರೂಪಾಯಿ ದುಡಿದು ಬಿಡ್ತಾನೆ.. ಅಂದಾಗೆ ಇದನ್ನ ಇಂಗ್ಲೀಷ್ನಲ್ಲಿ ಬ್ಲಾಕ್ ಮ್ಯಾಜಿಕ್ ಅಂತಾರೆ.. ಅಪ್ಪಟ ಕನ್ನಡದಲ್ಲಿ ಮೋಡಿ ವಿದ್ಯೆ ಅಂತಾರೆ.. ನಿಂಬೆಹಣ್ಣು ಮಾಯ ಮಾಡೋದು, ಧಗ್ಗನೇ ಬೆಂಕಿ ಹೊತ್ತಿಕೊಳ್ಳೊದು, ಹಾವು ಚೇಳು ಕಾಣಿಸೋದು, ನಾಲಿಗೆ ಮೇಲೆ ಕರ್ಪೂರ ಉರಿಯೋದು, ನಿಂಬೆ ಹಣ್ಣು ಹಿಂಡಿದರೆ ರಕ್ತ ಬರೋದು.. ಇದೆಲ್ಲದರ ಹಿಂದೆ ಇರೋದು ಕಣ್ಣು ಕಟ್ಟು ವಿದ್ಯೆ.. ಆ ಮೋಡಿಗಳನ್ನ ಹೇಗೆ ಮಾಡ್ತಾರೆ.. ಅದಕ್ಕೆ ಬೇಕಿರೋ ಪರಿಕರಗಳು ಏನೇನು ಅಂತ ಮುಂದಿನ ಸಂಚಿಕೆಯಲ್ಲಿ ಒಂದಿಷ್ಟು ಉದಾಹರಣೆಗಳ ಸಮೇತ ತಿಳಿಸ್ತೀನಿ..

(ಮುಂದುವರೆಯುತ್ತದೆ…)

  • ಕೆ.ಆರ್.ಬಾಬು

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular