Agrifi App Farmers Loan : ಹೊಸದಾಗಿ ಏನನ್ನಾದರೂ ದೊಡ್ಡ ಮಟ್ಟದಲ್ಲಿ ಮಾಡುವುದಿದ್ದರೆ ಈಕಾಲದಲ್ಲಿ ಸಾಲ ಅಗತ್ಯವಂತೂ ಇದ್ದೇ ಇರುತ್ತದೆ. ಆದರೆ ಸಾಲ (Loan) ಕೊಡುವವರಾರು? ಪ್ರತಿದಿನ ಕಣ್ಣಿನ ಮುಂದೆ ಕಾಣುವ ಬ್ಯಾಂಕ್‌ಗಳಿಗೆ ಅಗತ್ಯವಿರುವ ಡಾಕ್ಯುಮೆಂಟ್ಸ್ (Bank Documents) ಕೊಟ್ಟು ಮುಗಿಸಲು ಸಾಧ್ಯವಿಲ್ಲ. ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಾ ತಿಂಗಳ ವೇತನ ಪಡೆಯುವವರಿಗೆ ಬ್ಯಾಂಕ್‌ಗಳು (Bank Loan) ನಾ ಮುಂದು ತಾ ಮುಂದು ಎಂದು ಕ್ರೆಡಿಟ್ ಕಾರ್ಡ್ (Credit Card), ಸಾಲಸೌಲಭ್ಯ ನೀಡುತ್ತವೆ. ಆದರೆ, ದೇಶದ ಬೆನ್ನೆಲುಬು ಎನಿಸಿಕೊಂಡಿರುವ ಕೃಷಿ ಕ್ಷೇತ್ರದವರಿಗೆ ಸಾಲ (Farmers Loan) ಎಂಬುದು ಸುಲಭದ ಮಾತಲ್ಲ.
ಕೃಷಿಕನ ಸಂಕಷ್ಟಗಳು ಒಂದೆರಡಲ್ಲ. ಸರಿಯಾದ ಸಮಯಕ್ಕೆ ಮಳೆ ಬರುವುದಿಲ್ಲ, ಒಂದು ವೇಳೆ ಮಳೆ ಬಂದರೆ ಬೀಜ ಮತ್ತು ರಸಗೊಬ್ಬರ ಸಿಗುವುದಿಲ್ಲ. ಎಷ್ಟೋ ಬಾರಿ ಹಣಕಾಸಿನ ಮುಗ್ಗಟ್ಟಿನಿಂದಲೇ ತಡವಾಗಿ ಬಿತ್ತನೆ ಮಾಡಿ ಬೆಳೆ ನಷ್ಟದಂತಹ ಸಮಸ್ಯೆಗಳಿಗೆ ಒಳಗಾಗಿ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ. ಗ್ರಾಮೀಣ ಭಾಗದ ರೈತರು ಈಗಲೂ ತಮಗೆ ಸಾಲ ಸೌಲಭ್ಯ ಬೇಕು ಎಂದರೆ ಬ್ಯಾಂಕ್‌ಗಳಿಗಿಂತ ಹೆಚ್ಚಾಗಿ ಬೀಜ, ರಸಗೊಬ್ಬರ ಮಾರಾಟ ಮಾಡುವ ಕೃಷಿ ವ್ಯಾಪಾರಸ್ಥರನ್ನೇ ಅವಲಂಬಿಸಿದ್ದಾರೆ. ಈ ರೀತಿಯ ಕೃಷಿ ವ್ಯಾಪಾರಸ್ಥರೂ ಸಹ ಸೀಮಿತವಾಗಿಯೇ ತಮ್ಮ ವ್ಯವಹಾರ ನಡೆಸುತ್ತಾರೆ. ಅವರಲ್ಲಿರುವ ಸೀಮಿತ ಹಣಕಾಸು ವ್ಯವಸ್ಥೆಯಡಿ ಕೆಲವೇ ಕೆಲವು ರೈತರೊಂದಿಗೆ ವ್ಯವಹಾರ ನಡೆಸುತ್ತಾರೆ. ಇಂತಹ ಕೃಷಿ ವ್ಯಾಪಾರಸ್ಥರನ್ನು ಗುರುತಿಸಿ ಅವರ ಸಿಬಿಲ್ ಸ್ಕೋರ್ ಹೆಚ್ಚಿಸುವ ಮೂಲಕ, ಸಾಲ ಸೌಲಭ್ಯದ ನೆರವು ಒದಗಿಸಿ ಆ ಮೂಲಕ ರೈತರಿಗೆ ಸಕಾಲಕ್ಕೆ ಎಲ್ಲ ನೆರವೂ ಸಿಗುವಂತಹ ಉದ್ದೇಶದೊಂದಿಗೆ ‘ಅಗ್ರಿಫೈ’ ಸ್ಟಾರ್ಟಪ್ ಕಾರ್ಯ ಆರಂಭಿಸಿದೆ. ಈಗಾಗಲೇ ಹಲವು ಜಿಲ್ಲೆಗಳ ರೈತರು ಅಗ್ರಿಫೈ ಮೂಲಕ ಸಾಲಸೌಲಭ್ಯ ಪಡೆದಿದ್ದಾರೆ.
ಎಪಿಎಂಸಿ ಮಾರುಕಟ್ಟೆಗಳಗಳಲ್ಲಿ ಇರುವಂತಹ ಇಂತಹ ಕೃಷಿ ವ್ಯಾಪಾರಸ್ಥರು ಸೀಮಿತ ರೈತರಿಗೆ ಆ ವರ್ಷಕ್ಕೆ ಬೇಕಾದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಒದಗಿಸುತ್ತಾರೆ. ವರ್ಷದ ಬೆಳೆ ಬಂದ ನಂತರ ಅದನ್ನು ಅವರ ಬಳಿಯೇ ಮರಾಟ ಮಾಡಬೇಕು. ಹಿಂದೆ ತಾವು ನೀಡಿದ ಸಾಲವನ್ನು ಮರುಪಾವತಿ ಮಾಡಿಕೊಂಡು ಬಾಕಿ ಹಣ ರೈತನಿಗೆ ಕೊಡುತ್ತಾರೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪದ್ಧತಿ, ಹೆಚ್ಚಿನ ಕಡೆ ರೈತರು ಇದೇ ವ್ಯವಸ್ಥೆಯನ್ನು ಈಗಲೂ ಅವಲಂಬಿಸಿದ್ದಾರೆ.
ಏನಿದು ಅಗ್ರಿಫೈ
ಸ್ಟಾರ್ಟಪ್ ಎಂದರೆ ಹೆಚ್ಚಾಗಿ ತಂತ್ರಜ್ಞಾನ ಆಧಾರಿತವಾಗಿ ಇರುವುದು ಸಾಮಾನ್ಯ. ಆದರೆ, ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿಯೇ ಕೆಲಸ ಮಾಡುತ್ತಿದ್ದಂತಹ ಅಭಿಲಾಷ್ ತಿರುಪತಿ, ಕೆ.ಆರ್. ರಘುಚಂದ್ರ ಮತ್ತು ಮಿತಿಲೇಶ್ ಕುಮಾರ್ ಎಂಬುವವರು ಅಗ್ರಿನ್ನೋವ್ ಟೆಕ್ನಾಲಜೀಸ್ ಪ್ರೈ.ಲಿ. ಎಂಬ ಕಂಪನಿ ಸ್ಥಾಪಿಸಿ ಆ ಮೂಲಕ ‘ಅಗ್ರಿ ಫೈ’ (Agrifi) ಹೆಸರಿನಲ್ಲಿ ಕೃಷಿ ಕ್ಷೇತ್ರದ ಒಟ್ಟಾರೆ ಬೆಳವಣಿಗೆಗಾಗಿ ಸ್ಟಾರ್ಟಪ್ ಯೋಜನೆಗಳನ್ನು ರೂಪಿಸಿದ್ದಾರೆ.
ಅಗ್ರಿ ಫೈ ಮೂಲಕ ಈಗಾಗಲೇ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕೇರಳದಲ್ಲಿ ಕೃಷಿ ಟ್ರೇಡರ್ಸ್‌ಗಳನ್ನು ಹುಡುಕಿ ಅವರಿಗೆ ಸಾಲದ ನೆರವು ಒದಗಿಸುತ್ತದೆ. ರೈತರಿಗೆ ಸಾಲಸೌಲಭ್ಯ ನೀಡುವಂತಹ ವ್ಯಾಪಾರಸ್ಥರಿಗೆ ಸಾಲಸೌಲಭ್ಯ ಒದಗಿಸಿ ಆ ಮೂಲಕ ಹೆಚ್ಚಿನ ರೈತರಿಗೆ ಸಾಲದ ನೆರವು ಒದಗಿಸಬೇಕು ಎಂಬುದು ಅಗ್ರಿಫೈನ ಮುಖ್ಯ ಉದ್ದೇಶ.
ಸಾಲ ಬೇಕೆಂದರೆ ಏನು ಮಾಡಬೇಕು?
ನೀವೂ ಸಹ ಕೃಷಿ ಕ್ಷೇತ್ರದಲ್ಲಿ ಟ್ರೇಡರ್ಸ್ ಆಗಿದ್ದು, ನಿಮಗೂ ಸಾಲಸೌಲಭ್ಯ ದೊರಕಬೇಕು ಎಂಬ ಇಚ್ಛೆ ಇದ್ದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೃಷಿ ಖಾತಾ (Krishi Khata) ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ಅಲ್ಲಿ ಕೇಳಿರುವ ವಿವರಗಳನ್ನು ಭರ್ತಿ ಮಾಡುವ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅಗ್ರಿಫೈ ಕಡೆಯಿಂದ ನಿಮ್ಮ ದಾಖಲೆಗಳನ್ನು ಪರಿಶೀಲಿಸಿ ಬ್ಯಾಂಕ್ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಿಂದ ನಿಮಗೆ ಸಾಲದ ನೆರವು ಒದಗಿಸಿಕೊಡುತ್ತಾರೆ. ಇನ್ನು ನಿಮ್ಮ ಸಿಬಿಲ್ ಸಂಖ್ಯೆ ಕಡಿಮೆ ಇದ್ದರೂ ಸಹ ನಿಮ್ಮ ವಹಿವಾಟು ಪರಿಗಣಿಸಿ ಸಾಲದ ನೆರವು ಒದಗಿಸಲೂ ಪ್ರಯತ್ನಿಸಲಾಗುತ್ತದೆ.
‘ಕೃಷಿ ವ್ಯಾಪಾರಸ್ಥರು ಅಥವಾ ರೈತರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಬಳಿಕ ತಮ್ಮ ದೈನಂದಿನ ವಹಿವಾಟನ್ನು ಅದರಲ್ಲಿ ದಾಖಲಿಸಬೇಕು. ಇದಕ್ಕಾಗಿಯೇ ಆ್ಯಪ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗೆ ತಮ್ಮ ವಹಿವಾಟು ದಾಖಲಿಸುವುದರಿಂದ ಸಿಬಿಲ್ ಸ್ಕೋರ್ ಹೆಚ್ಚಿಸಲು ಇದೂ ಸಹ ನೆರವಾಗುತ್ತದೆ. ಕೃಷಿ ವ್ಯಾಪಾರಸ್ಥರು ಹೀಗೆ ಕೃಷಿ ಖಾತಾದಲ್ಲಿ ದಾಖಲಿಸಿರುವ ಅಂಕಿ ಅಂಶಗಳನ್ನು ಗಮನಿಸಿ ಅವರಿಗೆ ವಿಶೇಷ ಸ್ಕೋರ್ ಸಿದ್ಧಪಡಿಸಲಾಗುತ್ತದೆ. ಅವರ ವೈಯಕ್ತಿಕ ಸಿಬಿಲ್ ಮತ್ತು ಪ್ರತಿನಿತ್ಯದ ವಹಿವಾಟಿನ ಸ್ಕೋರ್ ಎರಡನ್ನೂ ಪರಿಗಣಿಸಿ ಅಗ್ರಿಫೈ ಸಂಸ್ಥೆಯು ವ್ಯಾಪಾರಸ್ಥರ ಪರವಾಗಿ ಬ್ಯಾಂಕ್ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳ ಮುಂದೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿ ಸಾಲ ಒದಗಿಸಲು ಸಹಾಯ ಮಾಡುತ್ತಾರೆ. ಆ ಮೂಲಕ ಸುಲಭವಾಗಿ ಸಾಲದ ನೆರವು ಒದಗಿಸಬಹುದು’ ಎನ್ನುತ್ತಾರೆ ಅಗ್ರಿಫೈ ಸ್ಟಾರ್ಟ್‌ಅಪ್‌ನ ಮಾತೃ ಸಂಸ್ಥೆ ಅಗ್ರಿನ್ನೋವ್ ಟೆಕ್ನಾಲಜೀಸ್ ಪ್ರೈ.ಲಿ. ಸಹ ಸ್ಥಾಪಕ ಕೆ.ಆರ್. ರಘುಚಂದ್ರ.
ಸದ್ಯ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವವರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸಾಲಕ್ಕಾಗಿಯೂ ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಸಿಬ್ಬಂದಿ ಅವರ ವಹಿವಾಟು ಬಗ್ಗೆ ವರದಿ ತಯಾರಿಸಿ ಸಾಲ ಕೊಡಿಸಲು ನೆರವು ನೀಡುತ್ತಿದ್ದಾರೆ. ಇಡೀ ದೇಶದಲ್ಲಿ ಒಟ್ಟಾರೆ ಐದು ಮಿಲಿಯನ್ ವ್ಯಾಪಾರಸ್ಥರನ್ನು ಈ ವ್ಯವಸ್ಥೆಯಡಿ ತರುವ ಉದ್ದೇಶ ಹೊಂದಲಾಗಿದೆ ಎಂದು ರಘುಚಂದ್ರ ವಿವರಿಸಿದರು.
ನಿತ್ಯ ಕೃಷಿ ಮಾಹಿತಿ
‘ಕೃಷಿ ಖಾತಾ ಆ್ಯಪ್ ಮೂಲಕ ರೈತರಿಗೆ ಮತ್ತು ಟ್ರೇಡರ್ಸ್‌ಗಳಿಗೆ ಕೇವಲ ಸಾಲದ ನೆರವು ನೀಡುವುದಷ್ಟೇ ಅಲ್ಲದೆ, ರೈತರ ಅಗತ್ಯಕ್ಕೆ ತಕ್ಕಂತೆ ದೈನಂದಿನ ಮತ್ತು ತಾಂತ್ರಿಕ ಮಾಹಿತಿಗಳನ್ನೂ ಒದಗಿಸಲಾಗುವುದು. ಯಾವುದೇ ಜಿಲ್ಲೆ ಅಥವಾ ಹೋಬಳಿಯ ರೈತ ತನ್ನ ಜಮೀನು ಮತ್ತು ತಾನು ಬೆಳೆಯುವ ಬೆಳೆಯ ವಿವರವನ್ನು ದಾಖಲಿಸಿದರೆ ಅಲ್ಲಿ ಮಳೆ ಯಾವಾಗ ಬರುತ್ತದೆ, ಈ ವರ್ಷ ಯಾವ ಬೆಳೆ ಹೇಗೆ ಇಳುವರಿ ಕೊಡಬಹುದು, ಯಾವ ಬೆಳೆಗೆ ಮಾರುಕಟ್ಟೆಯ ದರ ಎಷ್ಟಿರಬಹುದು, ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಬೇಡಿಕೆ ಸೃಷ್ಟಿಸುವಂತ ಧಾನ್ಯ ಅಥವಾ ತೋಟಗಾರಿಕಾ ಬೆಳೆ ಯಾವವು, ಬೆಳೆಗೆ ತಗುಲಬಹುದಾದ ರೋಗದ ಮಾಹಿತಿ ಮತ್ತು ಅದಕ್ಕೆ ಪರಿಹಾರ ಹೀಗೆ ಹತ್ತು ಹಲವು ಪ್ರಯೋಜನಗಳನ್ನು ರೈತರೂ ಪಡೆದುಕೊಳ್ಳಬಹುದು’ ಅಗ್ರಿಫೈ ಸ್ಥಾಪಕ ಅಭಿಲಾಷ್ ತಿರುಪತಿ ಎಂದು ವಿವರಿಸಿದರು.
‘ರೈತ ವ್ಯಾಪಾರಸ್ಥರಿಗೆ ಸಾಲದ ನೆರವು ಒದಗಿಸವಂತಹ ಯೋಜನೆಯನ್ನು ಸದ್ಯ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪ್ರಾರಂಭಿಸಲಾಗಿದೆ. ಈಗಾಗಲೇ ಕೊಪ್ಪಳ, ಬಳ್ಳಾರಿ, ಗದಗ ಮತ್ತು ಹಾವೇರಿ ಜಿಲ್ಲೆಯಲ್ಲಿ ಕೆಲವರು ಇದರ ಉಪಯೋಗ ಪಡೆದಿದ್ದಾರೆ. ಇಡೀ ದೇಶದಲ್ಲಿ ಒಟ್ಟಾರೆ ಐದು ಮಿಲಿಯನ್ ವ್ಯಾಪಾರಸ್ಥರನ್ನು ಈ ವ್ಯವಸ್ಥೆಯಡಿ ತರುವ ಉದ್ದೇಶ ಹೊಂದಲಾಗಿದೆ’ ಎಂದು ಮತ್ತೋರ್ವ ಸಹ ಸ್ಥಾಪಕ ಮಿತಿಲೇಶ್ ಕುಮಾರ್ ಹೇಳಿದರು.
ಇದನ್ನೂ ಓದಿ: Google Map Without Internet : ಇಂಟರ್‌ನೆಟ್ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಬಹುದು ! ಅದು ಹೇಗೆ ಎಂಬ ಮಾಹಿತಿ ತಿಳಿಯಿರಿ
ಇದನ್ನೂ ಓದಿ: Opinion Vegetable Price : ತರಕಾರಿ ಬೆಲೆ ರೈತರಿಗೇ ಸಿಗಲಿ; ನಮ್ಮೂರಿನ ರೈತರಿಂದ ನೇರವಾಗಿ ಖರೀದಿಸುವ ಜಾಯಮಾನ ಬೆಳೆಸಿಕೊಳ್ಳೋಣ
(Agrifi App startup give loan to farmers)