ತುಮಕೂರು : ಹಾಲು ಉತ್ಪಾದಕರಿಗೆ ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಭರ್ಜರಿ ಗುಡ್ ನ್ಯೂಸ್ ನೀಡಿದೆ. ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತೀ ಲೀಟರ್ ಗೆ 2 ರೂಪಾಯಿ ಹೆಚ್ಚಳ ಮಾಡಲಾಗಿದೆ.

ರೈತರು ಹಲವು ಸಮಯಗಳಿಂದಲೂ ಹಾಲಿನ ದರ ಹೆಚ್ಚಳ ಮಾಡುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡುತ್ತಿದ್ದರು. ಇದೀಗ ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಲಿನ ದರವನ್ನು ಏರಿಕೆ ಮಾಡಿದೆ. ಪರಿಷ್ಕೃತ ದರ ಮಾರ್ಚ್ 1ರಿಂದಲೇ ಜಾರಿಗೆ ಬಂದಿದ್ದು, 3.5 ಜಿಡ್ಡಿನಾಂಶ ಇರುವ ಹಾಲು ಉತ್ಪಾದಕರಿಗೆ 27 ರೂ. ಸಂಘಗಳಿಗೆ 27.93 ರೂ. ಹಾಗೂ 4.1 ಜಿಡ್ಡಿನಾಂಶ ಇರುವ ಹಾಲು ಉತ್ಪಾದಕರಿಗೆ 28.39 ರೂ. ಹಾಗೂ ಸಂಘಗಳಿಗೆ 29.32 ರೂ. ಗೆ ಲಭ್ಯವಾಗಲಿದೆ.

ತುಮುಲ್ ವ್ಯಾಪ್ತಿಯಲ್ಲಿನ ರೈತರಿಗೆ ಅನುಕೂಲವಾಗಲಿದೆ. ಅಷ್ಟೇ ಅಲ್ಲ ಸಂಘದ ನಿರ್ವಹಣೆಗಾಗಿ ಪ್ರತೀ ಕೆ.ಜಿ. ಹಾಲಿಗೆ 20 ಪೈಸೆ ಹೆಚ್ಚಿಸಲಾಗಿದೆ ಎಂದು ತುಮುಲ್ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ತಿಳಿಸಿದ್ದಾರೆ.