Tomato Prices Down : ಟೊಮ್ಯಾಟೊ ಕೆಜಿಗೆ 3ರೂ. : ದಿನೇ ದಿನೇ ಬೆಲೆ ಕುಸಿತದಿಂದ ರೈತರಿಗೆ ಸಂಕಷ್ಟ

ಕೋಲಾರ : ಟೊಮೊಟೊ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, (Tomato Prices Down) ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಟೊಮೊಟೊ ಮಾರಾಟದಲ್ಲಿ ಏಷ್ಯಾದ ಎರಡನೇ ಅತಿದೊಡ್ಡ ಮಾರುಕಟ್ಟೆ ಎನಿಸಿರುವ ನಗರದ ಎಪಿಎಂಸಿಯಲ್ಲಿ ಎಲ್ಲಿ ನೋಡಿದರು ಟೊಮೊಟೊ ರಾಶಿ ಕಾಣಿಸುತ್ತಿದೆ. ಗುಣಮಟ್ಟವಿಲ್ಲದ ಟೊಮೊಟೊಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ.

ಉತ್ತಮ ಗುಣಮಟ್ಟದಿಂದ ಕೂಡಿದ ಟೊಮೊಟೊ 15 ಕೆ.ಜಿ. ತೂಕುವ ಬಾಕ್ಸ್‌ ಮಾರುಕಟ್ಟೆ ಹರಾಜಿನಲ್ಲಿ ಗರಿಷ್ಟ ರೂ. 200ಕ್ಕೆ ಸಿಗುತ್ತಿದೆ. ಚುಕ್ಕಿಗಳಿಂದ ಕೂಡಿರುವ ಗುಣಮಟ್ಟವಿಲ್ಲದ ಟೊಮೊಟೊ ಬಾಕ್ಸ್‌ ಕನಿಷ್ಟ ರೂ 50ಕ್ಕೆ ಮಾರಾಟವಾಗುತ್ತಿದೆ. ಮಧ್ಯವರ್ತಿಗಳ ಕಮಿಷನ್‌, ಸಾಗಣೆ, ಕೂಲಿ ವೆಚ್ಚ ಕಳೆದರೆ ರೈತರಿಗೆ ಹಾಕಿದ ಬಂಡವಾಳ ಕೂಡ ಸಿಗುತ್ತಿಲ್ಲ. ಆದರೆ ಗ್ರಾಹಕರು ಟೊಮೊಟೊ ಬೆಲೆ ಇಳಿದ ಖುಷಿಯಲ್ಲಿ ಗ್ರಾಹಕರು ಇದ್ದಾರೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೊಟೊ ಒಂದು ಕೆ.ಜಿಗೆ ರೂ.10 ರಿಂದ ರೂ.15ಕ್ಕೆ ಮಾರಾಟವಾಗುತ್ತಿದೆ. ಕೆಲವರು ಟೆಂಪೊ, ತಳ್ಳುವಗಾಡಿಯಲ್ಲಿ ಟೊಮೊಟೊ ಹಾಕಿಕೊಂಡು ನಗರವನ್ನು ಸುತ್ತಾಡಿ ಮಾರಾಟ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಸದ್ಯ ಸುಮಾರು 2500 ಹೆಕ್ಟೇರ್‌ನಲ್ಲಿ ಮೂರೂವರೆ ಸಾವಿರಕ್ಕೂ ಅಧಿಕ ಟೊಮೊಟೊವನ್ನು ರೈತರು ಬೆಳೆದಿದ್ದಾರೆ. ಬುಧವಾರ ಪಿಎಂಸಿಯಲ್ಲಿ ಟೊಮೊಟೊ ಆವಕ ಪ್ರಮಾಣ 9300ಕ್ವಿಂಟಲ್‌ ಇತ್ತು. ಒಂದು ಎಕರೆ ಪ್ರದೇಶದಲ್ಲಿ ಟೊಮೊಟೊ ಬೆಳೆಯಲು ಅಂದಾಜು ರೂ. 2.5 ಲಕ್ಷ ಬಂಡವಾಳ ಬೇಕಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಟೊಮೊಟೊ ಆವಕವಾಗುತ್ತಿದೆ. ಮಳೆ ಕಾರಣದಿಂದಾಗಿ ಟೊಮೊಟೊ ಫಸಲು ಕಳಪೆ ಗುಣಮಟ್ಟದಿಂದ ಕೂಡಿದೆ. ಹೀಗಾಗಿ ಬೆಲೆ ಕುಸಿದು ಬೆಳೆಗಾರರಿಗೆ ನಷ್ಟ ಉಂಟಾಗುತ್ತಿದೆ ಎಂದು ಕೋಲಾರ ಎಪಿಎಂಪಿ ಕಾರ್ಯದರ್ಶಿ ವಿಜಯಲಕ್ಷ್ಮೀ ತಿಳಿಸಿದ್ದಾರೆ.

ಸತತ ಎರಡು ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಟೊಮೊಟೊಗೆ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಟೊಮೊಟೊಗೆ ಊಜಿ ನೊಣ ಆವರಿಸಿಕೊಂಡಿದ್ದರಿಂದ ಚುಕ್ಕಿ ಬೀಳುತ್ತಿದೆ. ಇದರಿಂದಾಗಿ ಟೊಮೊಟೊ ಎರಡು ಮೂರು ದಿನಗಳಲ್ಲಿ ಕೊಳೆದು ಹೋಗುತ್ತದೆ. ಚೆನ್ನೈ, ಆಂಧ್ರಪ್ರದೇಶ, ಒಡಿಶಾದಲ್ಲಿ ಮಳೆಯ ಕಾರಣ ಅಲ್ಲಿನ ಮಾರುಕಟ್ಟೆಗಳಲ್ಲೇ ಟೊಮೊಟೊ ಸಂಗ್ರಹವಿದ್ದು, ಬೇಡಿಕೆಯಲ್ಲಿ ಕುಸಿತ ಕಂಡಿದೆ. ಹೀಗಾಗಿ ಅಲ್ಲಿನ ವರ್ತಕರು ಇಲ್ಲಿನ ಮಾರುಕಟ್ಟೆ ಕಡೆಗೆ ಟೊಮೊಟೊ ಖರೀದಿಗೆ ಬರುತ್ತಿಲ್ಲ.

ಇದನ್ನೂ ಓದಿ : Karnataka Farmer : ಕರ್ನಾಟಕದ ರೈತ 205 ಕೆಜಿ ಈರುಳ್ಳಿಯನ್ನು ಕೇವಲ 8.36 ರೂ.ಗೆ ಮಾರಾಟ ಮಾಡಿದ ರಸೀದಿ ಫೋಟೋ ವೈರಲ್

ಇದನ್ನೂ ಓದಿ : Vegetable Price Hike : ಟೊಮೆಟೊ ಬೆಲೆ 250, ಸೊಪ್ಪಿನ ಕೆಜಿಗೆ ರೂ 110 : ಭಾರೀ ಮಳೆಯಿಂದ ಗಗನಕ್ಕೇರಿದ ತರಕಾರಿ ಬೆಲೆ

ಇದನ್ನೂ ಓದಿ : PM Kisan Samman Nidhi Yojana : ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆ‌ : 13 ನೇ ಕಂತಿಗೆ ಅರ್ಜಿ ಸಲ್ಲಿವುದು ಹೇಗೆ ? ಇಲ್ಲಿದೆ ಮಾಹಿತಿ

ಟೊಮೊಟೊ ದರ ಏರಿಕೆ ಆಗಬಹುದೆಂಬ ಆಶಯದಿಂದ ಮತ್ತೆ ಮತ್ತೆ ಟೊಮೊಟೊ ಬೆಳೆಯುತ್ತಿದ್ದೇವೆ. ಕಳೆದ ಬಾರಿ ಈ ಸಮಯದಲ್ಲಿ ಉತ್ತಮ ದರವಿತ್ತು. 15ಕೆ.ಜಿ ಬಾಕ್ಸ್‌ ಗೆ ಎರಡು ಸಾವಿರ ರೂಪಾಯಿವರೆಗೆ ಬೆಲೆ ಇತ್ತು. ಆದರೆ ಈ ವರ್ಷ ಬೆಲೆ ಸಿಗದೆ ನಿರಾಸೆ ಉಂಟಾಗಿದೆ ಎಂದು ತಾಲೂಕಿನ ತೊಟ್ಲಿ ಗ್ರಾಮದ ರೈತ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

Tomato Prices Down : Tomato Rs 3 per kg. : Farmers suffer due to day by day price fall

Comments are closed.