PM Rahat Scheme: ಭಾರತದಲ್ಲಿ ಪ್ರತಿವರ್ಷ ಲಕ್ಷಗಟ್ಟಲೆ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಅವುಗಳಲ್ಲಿ ಬಹಳಷ್ಟು ಜನರು ತಮ್ಮ ಜೀವ ಕಳೆದುಕೊಂಡರೆ, ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗುತ್ತವೆ.
ಅಪಘಾತದ ನಂತರ ಸರಿಯಾದ ಸಮಯದಲ್ಲಿ ಉಪಚಾರ ಸಿಗುವುದರಲ್ಲಿಯೂ ವಿಳಂಬವಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಕೇಂದ್ರ ಸರ್ಕಾರವು ಇತ್ತೀಚಗಷ್ಟೇ ಪಿಎಂ ರಾಹತ್ ಯೋಜನೆಯೊಂದನ್ನು ಜಾರಿಗೆ ತಂದಿದೆ.
ಇದು ಅಪಘಾತದಲ್ಲಿ ಗಾಯಗೊಂಡವರಿಗಾಗಿಯೇ ರೂಪಿಸಿರುವ ಯೋಜನೆಯಾಗಿದೆ. ಈ ಯೋಜನೆಯು ಯಾವ ರೀತಿಯಲ್ಲಿ ಪ್ರಯೋಜನ ನೀಡಲಿದೆ. ಯಾರು ಇದರ ಪ್ರಯೋಜನ ತೆಗೆದುಕೊಳ್ಳಬಹುದು ಎಂದು ತಿಳಿಯೋಣ.
ಏನಿದು ಪಿಎಂ ರಾಹತ್ ಯೋಜನೆ?
ಕೇಂದ್ರ ಸರ್ಕಾರವು ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಪರಿಹಾರ ಒದಗಿಸಲು ಹೊಸ ಯೋಜನೆಯೊಂದನ್ನು ಪ್ರಾರಂಭಿಸಿದೆ. ಅದೇನೆಂದರೆ ಪ್ರಧಾನಮಂತ್ರಿ ರಾಹತ್ ಯೋಜನೆ.
ಈ ಯೋಜನೆಯು ಅಪಘಾತವಾದವರಿಗೆ ನಗದು ರಹಿತ ಚಿಕಿತ್ಸೆ ಮತ್ತು ಇತರ ಹಲವು ಪ್ರಯೋಜನಗಳನ್ನು ನೀಡುತ್ತದೆ.
ಯಾರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು?
ತಿಳಿದುಬಂದ ಮಾಹಿತಿಯ ಪ್ರಕಾರ, ಪ್ರಧಾನಮಂತ್ರಿ ರಾಹತ್ ಯೋಜನೆಯಡಿಯಲ್ಲಿ, ಎಲ್ಲಾ ಗಾಯಗೊಂಡವರಿಗೆ ಏಳು ದಿನಗಳವರೆಗೆ ಪ್ರತಿ ವ್ಯಕ್ತಿಗೆ 1.5 ಲಕ್ಷ ರೂ. ನಗದು ರಹಿತ ಚಿಕಿತ್ಸೆಯನ್ನು ನೀಡಲಾಗುವುದು.
ಸಾಮಾನ್ಯ ಪ್ರಕರಣಗಳಲ್ಲಿ 24 ಗಂಟೆಗಳ ಕಾಲ ಮತ್ತು ಮಾರಣಾಂತಿಕ ಪ್ರಕರಣಗಳಲ್ಲಿ 48 ಗಂಟೆಗಳ ಕಾಲ ಸ್ಟಬಲೈಸೇಷನ್ ಚಿಕಿತ್ಸೆಯನ್ನು ಸಹ ಒದಗಿಸಲಾಗುತ್ತದೆ.
ಆಸ್ಪತ್ರೆಯವರಿಗೂ ಸಮಸ್ಯೆಯಿಲ್ಲ
ಬಹಳಷ್ಟು ಸಂದರ್ಭಗಳಲ್ಲಿ ಅಪಘಾತಕ್ಕೊಳಗಾದವರಿಗೆ ಚಿಕಿತ್ಸೆ ನೀಡುವಲ್ಲಿ ಆಸ್ಪತ್ರೆಗಳು ಹಿಂದೇಟು ಹಾಕುತ್ತವೆ. ಅದಕ್ಕೆ ಕಾರಣವೇನೆಂದರೆ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ ನಂತರ ಸಕಾಲಕ್ಕೆ ಹಣ ಮರುಪಾವತಿ ಯಾಗುವುದಿಲ್ಲ ಎಂಬುದಾಗಿದೆ.
ಆದರೆ ಈ ಯೋಜನೆಯಡಿಯಲ್ಲಿ, ಆಸ್ಪತ್ರೆಗಳಿಗೆ ಮೋಟಾರು ವಾಹನ ಅಪಘಾತ ನಿಧಿಯಿಂದ ಚಿಕಿತ್ಸೆಗಾಗಿ ಹಣವನ್ನು ಪಾವತಿಸಲಾಗುತ್ತದೆ. ದೋಷಪೂರಿತ ವಾಹನಕ್ಕೆ ವಿಮೆ ಮಾಡಲಾದ ಸಂದರ್ಭಗಳಲ್ಲಿ, ವಿಮಾ ಕಂಪನಿಗಳು ಪಾವತಿಗಳನ್ನು ಮಾಡುತ್ತವೆ. ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ, ಭಾರತ ಸರ್ಕಾರದ ಬಜೆಟ್ ಹಂಚಿಕೆಯ ಮೂಲಕ ಪಾವತಿಗಳನ್ನು ಮಾಡಲಾಗುತ್ತದೆ. ರಾಜ್ಯ ಆರೋಗ್ಯ ಸಂಸ್ಥೆಯಿಂದ ಅನುಮೋದಿಸಲಾದ ಕ್ಲೈಮ್‌ಗಳನ್ನು 10 ದಿನಗಳ ಒಳಗೆ ಪಾವತಿಸಲಾಗುತ್ತದೆ.
ಪ್ರಯೋಜನ ಪಡೆದುಕೊಳ್ಳುವುದು ಹೇಗೆ?
ಅಪಘಾತದಲ್ಲಿ ಗಾಯಗೊಂಡವರು 112 ಕ್ಕೆ ಕರೆ ಮಾಡುವ ಮೂಲಕ ಸಹಾಯ ಪಡೆಯಬಹುದು. ಘಟನಾ ಸ್ಥಳದಲ್ಲಿರುವ ಯಾರಾದರೂ 112 ಕ್ಕೆ ಕರೆ ಮಾಡುವ ಮೂಲಕ ಮಾಹಿತಿಯನ್ನು ನೀಡಬಹುದು. ಇದು ಹತ್ತಿರದ ಆಸ್ಪತ್ರೆಯ ಬಗ್ಗೆ ಮಾಹಿತಿಯನ್ನು ಒದಗಿಸಿ, ತಕ್ಷಣ ಆಂಬ್ಯುಲೆನ್ಸ್ ಅನ್ನು ಕಳುಹಿಸುವ ಕೆಲಸ ಮಾಡುತ್ತದೆ. ಈ ಸಂಪೂರ್ಣ ವ್ಯವಸ್ಥೆಯು ತುರ್ತು ಪ್ರತಿಕ್ರಿಯೆ ಬೆಂಬಲದೊಂದಿಗೆ ಸಂಯೋಜಿಸಲ್ಪಟ್ಟಿದ್ದು, ಪೊಲೀಸರು, ಆಂಬ್ಯುಲೆನ್ಸ್‌ಗಳು ಮತ್ತು ಆಸ್ಪತ್ರೆಗಳು ಉತ್ತಮ ಸಮನ್ವಯದಿಂದ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: 1.67 ಲಕ್ಷಕ್ಕೆ ಎಂಟ್ರಿ ಕೊಟ್ಟ ಯಮಹಾದ ಮೊದಲ ಎಲಿಕ್ಟ್ರಿಕ್ ಸ್ಕೂಟರ್ EC-06
ಇದರಿಂದ ಏನು ಪ್ರಯೋಜನವಾಗುತ್ತದೆ?
ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತದಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಬಲಿಪಶುಗಳಾಗುವವರೇ ಹೆಚ್ಚು. ಈ ಯೋಜನೆಯಿಂದ ತುರ್ತು ಚಿಕಿತ್ಸೆ ಲಭಿಸುವುದರಿಂದ ಶೇಕಡಾ 50 ರಷ್ಟು ಜನರ ಜೀವ ಉಳಿಸಬಹುದು. ಅಪಘಾತವಾಗಿ ಒಂದು ಗಂಟೆಯೊಳಗೆ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ದೊರೆಯುವ ಸಾಧ್ಯವಿದೆ. ಆದ್ದರಿಂದ ಪಿಎಂ ರಾಹತ್ ಯೋಜನೆಯು ಅಪಘಾತವಾದವರಿಗೆ ಸಂಜೀವಿನಿಯಾಗಬಲ್ಲದು.


