E20 ಪೆಟ್ರೋಲ್‌ನಿಂದ ಎಂಜಿನ್‌ ಹಾಳಾಗುತ್ತಾ.. ಚಾಲಕರ ಆತಂಕಕ್ಕೆ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ !

ದೇಶದಲ್ಲಿ ಬಳಕೆಯಲ್ಲಿರುವ E20 ಪೆಟ್ರೋಲ್ (ಎಥೆನಾಲ್ ಮಿಶ್ರಿತ ಪೆಟ್ರೋಲ್) ಬಳಕೆಯಿಂದ ಹಳೆಯ ವಾಹನಗಳ ಎಂಜಿನ್‌ಗಳು ಹಾಳಾಗುತ್ತಿವೆ ಎಂಬ ಸಾರ್ವಜನಿಕರ ಆತಂಕಕ್ಕೆ ಕೇಂದ್ರ ಸರ್ಕಾರ ಈಗ  ತೆರೆ ಎಳೆದಿದೆ.

ನವದೆಹಲಿ (ಜುಲೈ 22): ದೇಶದಲ್ಲಿ ಬಳಕೆಯಲ್ಲಿರುವ E20 ಪೆಟ್ರೋಲ್ (ಎಥೆನಾಲ್ ಮಿಶ್ರಿತ ಪೆಟ್ರೋಲ್) ಬಳಕೆಯಿಂದ ಹಳೆಯ ವಾಹನಗಳ ಎಂಜಿನ್‌ಗಳು ಹಾಳಾಗುತ್ತಿವೆ ಎಂಬ ಸಾರ್ವಜನಿಕರ ಆತಂಕಕ್ಕೆ ಕೇಂದ್ರ ಸರ್ಕಾರ ಈಗ  ತೆರೆ ಎಳೆದಿದೆ. E20 ಇಂಧನ ಬಳಕೆಯಿಂದ ಹಳೆಯ ವಾಹನಗಳಲ್ಲಿ ಮೈಲೇಜ್ ಶೇ. 3ರಿಂದ 5ರಷ್ಟು ಕಡಿಮೆಯಾಗಬಹುದೇ ವಿನಃ ಎಂಜಿನ್‌ಗೆ ಯಾವುದೇ ದೊಡ್ಡ ಹಾನಿಯಾಗುವುದಿಲ್ಲ ಎಂದು ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ.

ರಾಜ್ಯಸಭೆಯಲ್ಲಿ ಎತ್ತಲಾದ ಪ್ರಶ್ನೆಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಅವರು ಲಿಖಿತ ಉತ್ತರ ನೀಡಿದ್ದಾರೆ.

ಮೈಲೇಜ್ ಇಳಿಕೆಗೆ ಹಲವು ಕಾರಣಗಳು!

ಹಳೆಯ E10 ಇಂಧನಕ್ಕೆ ಹೊಂದಿಕೊಳ್ಳುವ ವಾಹನಗಳಲ್ಲಿ E20 ಪೆಟ್ರೋಲ್ ಬಳಸಿದಾಗ ಮೈಲೇಜ್‌ ಶೇ. 3 ರಿಂದ 5ರಷ್ಟು ಮಾತ್ರ ಕಡಿತಗೊಳ್ಳಬಹುದು. ಆದರೆ, ವಾಹನದ ಮೈಲೇಜ್‌ ಎನ್ನುವುದು ಕೇವಲ ಇಂಧನವನ್ನಷ್ಟೇ ಅಲ್ಲದೆ, ಚಾಲನೆ ಮಾಡುವ ಶೈಲಿ (Driving Style), ಟೈರ್ ಒತ್ತಡ (Tyre Pressure), ಎಸಿ ಬಳಕೆ ಮತ್ತು ವಾಹನದ ನಿರ್ವಹಣೆಯನ್ನು (Maintenance) ಅವಲಂಬಿಸಿರುತ್ತದೆ ಎಂದು ಸರ್ಕಾರ ತಿಳಿಸಿದೆ.

ಎಂಜಿನ್‌ಗೆ ತೊಂದರೆಯಿಲ್ಲ, ಪರ್ಫಾರ್ಮೆನ್ಸ್ ಉತ್ತಮ!

  • ಯಾವುದೇ ಸಾಕ್ಷ್ಯಾಧಾರವಿಲ್ಲ: ದೇಶಾದ್ಯಂತ ಕೋಟ್ಯಂತರ ಕಾರುಗಳು ಹಾಗೂ ದ್ವಿಚಕ್ರ ವಾಹನಗಳು ಕಳೆದ 2.5 ವರ್ಷಗಳಿಂದ E20 ಇಂಧನದಲ್ಲೇ ಚಲಿಸುತ್ತಿವೆ. ಈ ಇಂಧನದಿಂದಾಗಿ ಎಂಜಿನ್ ಕೈಕೊಟ್ಟ ಯಾವುದೇ ನಿಖರ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ.
  • ಆಟೋಮೊಬೈಲ್ ಕಂಪನಿಗಳ ವಾರಂಟಿ: ವಾಹನ ತಯಾರಕ ಕಂಪನಿಗಳು ಕೂಡ E20 ಪೆಟ್ರೋಲ್ ಬಳಸುವ ವಾಹನಗಳಿಗೆ ಖಾತರಿ (Warranty) ಸೇವೆಗಳನ್ನು ನೀಡುತ್ತಿವೆ.
  • ಹೆಚ್ಚಿನ ಆಕ್ಟೇನ್ ಮಟ್ಟ: E20 ಪೆಟ್ರೋಲ್‌ನಲ್ಲಿ ಆಕ್ಟೇನ್ (Octane) ಮಟ್ಟ ಹೆಚ್ಚಿರುವುದರಿಂದ, ಎಂಜಿನ್ ಸ್ಮೂತ್ ಆಗಿ ಚಲಿಸಲು ಮತ್ತು ವಾಹನ ಶೀಘ್ರವಾಗಿ ವೇಗ ಪಡೆದುಕೊಳ್ಳಲು ನೆರವಾಗುತ್ತದೆ.

ಹಳೆಯ ಪೆಟ್ರೋಲ್‌ಗೆ ಮರಳುವ ಪ್ರಶ್ನೆಯೇ ಇಲ್ಲ!

ಸಾಮಾನ್ಯ ಪೆಟ್ರೋಲ್ (E0) ಅಥವಾ E10 ಪೆಟ್ರೋಲ್‌ಗೆ ಸರ್ಕಾರ ಮತ್ತೆ ಮರಳುವುದಿಲ್ಲ. ದೇಶದ 1 ಲಕ್ಷಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಲ್ಲಿ ಬೇರೆ ಬೇರೆ ಮಾದರಿಯ ಪೆಟ್ರೋಲ್ ಪೂರೈಸುವುದು ಪ್ರಾಯೋಗಿಕವಾಗಿ ಮತ್ತು ಸಾಫ್ಟ್‌ವೇರ್ ಲಾಜಿಸ್ಟಿಕ್ಸ್ ದೃಷ್ಟಿಯಿಂದ ವೆಚ್ಚದಾಯಕವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಏನಿದು E20 ಪೆಟ್ರೋಲ್?

  • ಎಥೆನಾಲ್ ಮಿಶ್ರಣ: E20 ಎಂದರೆ ಶೇಕಡಾ 80ರಷ್ಟು ಸಾಂಪ್ರದಾಯಿಕ ಪೆಟ್ರೋಲ್ ಮತ್ತು ಶೇಕಡಾ 20ರಷ್ಟು ‘ಎಥೆನಾಲ್’ (ಕಬ್ಬು ಮತ್ತು ಧಾನ್ಯಗಳಿಂದ ತಯಾರಿಸುವ ಜೈವಿಕ ಇಂಧನ) ಮಿಶ್ರಣವಾಗಿರುತ್ತದೆ.
  • ಪರಿಸರ ಮತ್ತು ಆರ್ಥಿಕತೆ: ಕಚ್ಚಾ ತೈಲಕ್ಕಾಗಿ ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಹಾಗೂ ವಾಹನಗಳಿಂದ ಬರುವ ಇಂಗಾಲದ ಹೊರಸೂಸುವಿಕೆಯನ್ನು (Carbon Emissions) ತಗ್ಗಿಸುವುದು ಭಾರತ ಸರ್ಕಾರದ ಮುಖ್ಯ ಉದ್ದೇಶವಾಗಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.