ವಿದ್ಯುತ್ ಬೇಡಿಕೆಯಿಂದ ಅದಾನಿ ಗ್ರೂಪ್‌ಗೆ ಜಾಕ್‌ಪಾಟ್.. ಒಂದೇ ತ್ರೈಮಾಸಿಕದಲ್ಲಿ ₹4,806 ಕೋಟಿ ಗಳಿಸಿದ ಅದಾನಿ ಪವರ್

ಉದ್ಯಮಿ ಗೌತಮ್ ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ (Adani Power Limited) ನಡೆಸುತ್ತಿರುವ ಬಿಸಿನೆಸ್‌ನಲ್ಲಿ ಭರ್ಜರಿ ಪ್ರಗತಿ ಕಂಡುಬಂದಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಕಂಪನಿಯ ಲಾಭ ಶೇಕಡಾ 46 ರಷ್ಟು ಏರಿಕೆಯಾಗಿದ್ದು, ಬರೋಬ್ಬರಿ ₹4,806 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ.

ನವದೆಹಲಿ (ಜುಲೈ 22): ಉದ್ಯಮಿ ಗೌತಮ್ ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ (Adani Power Limited) ನಡೆಸುತ್ತಿರುವ ಬಿಸಿನೆಸ್‌ನಲ್ಲಿ ಭರ್ಜರಿ ಪ್ರಗತಿ ಕಂಡುಬಂದಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಕಂಪನಿಯ ಲಾಭ ಶೇಕಡಾ 46 ರಷ್ಟು ಏರಿಕೆಯಾಗಿದ್ದು, ಬರೋಬ್ಬರಿ ₹4,806 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ.

ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹3,385 ಕೋಟಿ ಲಾಭ ಕಂಡಿತ್ತು. ಈ ಬಾರಿ ದೇಶದಲ್ಲಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ಕಂಪನಿಯ ಆದಾಯ ಮತ್ತು ಲಾಭದಲ್ಲಿ ಬೃಹತ್ ಜಿಗಿತ ಕಂಡುಬಂದಿದೆ.

ಅದಾನಿ ಪವರ್ ಭರ್ಜರಿ ಲಾಭ ದಾಖಲಿಸುತ್ತಿದ್ದಂತೆಯೇ, ಅರ್ಹತಾ ಆಧಾರಿತ ಸಾಂಸ್ಥಿಕ ಹೂಡಿಕೆ (QIP) ಮತ್ತು ಇತರ ಮೂಲಗಳ ಮೂಲಕ ಬರೋಬ್ಬರಿ ₹15,000 ಕೋಟಿ ರೂಪಾಯಿ ಬಂಡವಾಳ ಸಂಗ್ರಹಿಸಲು ಆಡಳಿತ ಮಂಡಳಿ ಅನುಮೋದನೆ (Green Signal) ನೀಡಿದೆ. ಈ ಬಂಡವಾಳದಿಂದ ಅದಾನಿ ಪವರ್ ಸಂಸ್ಥೆಯು ತನ್ನ ನೆಟ್‌ವರ್ಕ್ ಅನ್ನು ಮತ್ತಷ್ಟು ವಿಸ್ತರಿಸಲಿದ್ದು, ಮುಂದಿನ ಹಣಕಾಸು ವರ್ಷಗಳಲ್ಲಿ ಲಾಭ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಕಂಪನಿಯ ಕಾರ್ಯನಿರ್ವಹಣೆಯಲ್ಲಿ ಮಹತ್ತರ ಬದಲಾವಣೆಗಳಾಗಿದ್ದು, ವಿದ್ಯುತ್ ಪೂರೈಕೆ ಮತ್ತು ಹಂಚಿಕೆ ಪ್ರಕ್ರಿಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.ಜೂನ್ ತ್ರೈಮಾಸಿಕದ ಒಟ್ಟು ಆದಾಯ ಶೇಕಡಾ 34 ರಷ್ಟು ಏರಿಕೆಯಾಗಿದ್ದು, ₹18,902 ಕೋಟಿ ಗೆ ತಲುಪಿದೆ.

ವಿದ್ಯುತ್ ಪೂರೈಕೆಯ ಪ್ರಮಾಣ ಶೇ. 16.9 ರಷ್ಟು ಹೆಚ್ಚಳವಾಗಿದ್ದು, ಒಟ್ಟು 28.8 ಬಿಲಿಯನ್ ಯೂನಿಟ್ ತಲುಪಿದೆ.ಬಡ್ಡಿ ಮತ್ತು ತೆರಿಗೆ ಪೂರ್ವ ಲಾಭ (EBITDA) ಶೇಕಡಾ 40 ರಷ್ಟು ಏರಿಕೆ ಕಂಡು ₹7,948 ಕೋಟಿ ತಲುಪಿದೆ. ಇದರಿಂದಾಗಿ ಕಂಪನಿಯ EBITDA ಮಾರ್ಜಿನ್ ಶೇ. 40.3 ರಿಂದ ಶೇ. 42.05 ಕ್ಕೆ ವಿಸ್ತರಿಸಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.