ನೋ ಮಾಸ್ಕ್ ಎಫೆಕ್ಟ್….! 250 ರೂಪಾಯಿ ದಂಡ ತೆತ್ತ ಬಿಜೆಪಿ ಸಂಸದ…!!

ಬೆಂಗಳೂರು: ರಾಜ್ಯ ಸರ್ಕಾರ ಕೊರೋನಾ ತಡೆಯುವ ನಿಟ್ಟಿನಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದು, ಮಾಸ್ಕ್ ಹಾಕದವರಿಗೆ 250 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಆದರೆ ಈ ಕಾನೂನು ಕೇವಲ ಜನಸಾಮಾನ್ಯರಿಗೆ ಮಾತ್ರ ಅನ್ವಯವಾಗುತ್ತಿದೆ ಎಂದು ಜನರು ದಂಡ ವಸೂಲಿ ವೇಳೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದಲ್ಲಿ ಜನಪ್ರತಿನಿಧಿಗಳು ರಾಜಾರೋಷವಾಗಿ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಸ್ಕ್ ಕಡ್ಡಾಯ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ  ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ರಾಜ್ಯದ ಸಂಸದರೊಬ್ಬರು 250 ರೂಪಾಯಿ ದಂಡ ತೆತ್ತಿದ್ದಾರೆ.

ಬಿಜೆಪಿ ಯುವ ಸಂಸದ ತೇಜಸ್ವಿ ಸೂರ್ಯ ರ್ಯಾಲಿಯೊಂದರಲ್ಲಿ ಮಾಸ್ಕ್ ಇಲ್ಲದೇ ಪಾಲ್ಗೊಂಡಿದ್ದಕ್ಕೆ ಹೈಕೋರ್ಟ್ ಅವರಿಗೆ 250 ರೂಪಾಯಿ ದಂಡ ವಿಧಿಸಿದೆ.  ಸಪ್ಟೆಂಬರ್ 30 ರಂದು ಯುವ ಸಂಸದ ತೇಜಸ್ವಿ ಸೂರ್ಯ ಮಾಸ್ಕ್ ಧರಿಸದೇ ಪಕ್ಷದ ರ್ಯಾಲಿಯೊಂದರಲ್ಲಿ ಪಾಲ್ಗೊಂಡಿದ್ದರು. ಇದನ್ನು ಗಮನಿಸಿದ ಹೈಕೋರ್ಟ್ ಅವರಿಗೆ 250 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ತೀವ್ರ ಮುಜುಗರಕ್ಕೊಳಗಾಗಿದ್ದು, ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ದಂಡ ಪಾವತಿ ಮಾಡಿದ್ದಾರೆ. ಸಂಸದ ತೇಜಸ್ವಿ ದಂಡ ಪಾವತಿಸಿರುವುದನ್ನು ರಾಜ್ಯ ಸರ್ಕಾರ ಖಚಿತಪಡಿಸಿದ್ದು, ನವೆಂಬರ್ 7 ರಂದು ದಂಡ ಪಾವತಿಯಾಗಿದೆ.

ಇದು ಸರ್ಕಾರದ ನಿಯಮ ಉಲ್ಲಂಘಿಸುವ ಜನಪ್ರತಿನಿಧಿಗಳಿಗೆ ಎಚ್ಚರಿಕೆ ಕರೆಗಂಟೆಯಾಗಿದ್ದು, ರೂಲ್ಸ್ ಎಲ್ಲರಿಗೂ ಒಂದೇ ಅನ್ನೋ ಮಾತನ್ನು ಸಾರುತ್ತಿದೆ. ಆದರೂ ರಾಜ್ಯದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸೆಲೆಬ್ರೆಟಿಗಳೇ ಮಾಸ್ಕ್ ಕಡ್ಡಾಯದ ನಿಯಮ ಪಾಲಿಸುತ್ತಿಲ್ಲ ಅನ್ನೋ ಆರೋಪವಿದೆ.

Comments are closed.